ಈಗೊಂದಷ್ಟು ದಿನಗಳಿಂದ ಊರುತುಂಬಾ ನಾಯಿ ಸತೀಶನೆಂಬೋ ಹಡಬೇ ಆಸಾಮಿಯ ಹಾವಳಿ ವಿಪರೀತಕ್ಕಿಟ್ಟುಕೊಂಡಿದೆ. ಕ್ಯಾಕರಿಸಿ ತುಪುಕ್ಕನೆ ಮುಕಕ್ಕುಗಿದರೂ `ಅಷ್ಟೂ ಜನರನ್ನ ಬಿಟ್ಟು ನಂಗೇ ಉಗಿದಿದ್ದಾರಂದ್ರೆ ನಾನು ಎಷ್ಟು ಫೇಮಸ್ ಅಂತ ಇಮ್ಯಾಜಿನ್ ಮಾಡ್ಕಳಿ’ ಅನ್ನುವಷ್ಟು ನಾಯಿ ಸತೀಶ ಮೂರೂ ಬಿಟ್ಟು ನಿಂತಿದ್ದಾನೆ. ಇಂಥವನು ಪಬ್ಲಿಕ್ ಟಾಯ್ಲೆಟ್ಟಿನಲ್ಲಿ ಉಚ್ಚೆ ಹುಯ್ಯವಾಗಲೂ ಒಂದು ವೀಡಿಯೋ ಮಾಡಿ, ಅದಕ್ಕೆ ಕಿಚ್ಚ ಸುದೀಪ್ ಅಭಿನಯದ ದಾದ ಯಾರ್ ಗೊತ್ತಾ ಅಂತೊಂದು ಹಾಡನ್ನು ಹಿನ್ನೆಲೆಗೆ ಸೇರಿಸಿಕೊಂಡಿದ್ದಾನೆ. ಹಾಗಾದೇಟಿಗೆ ಅವನ್ಯಾರೋ ರಜತ್ ನಾಯಿ ಸತೀಶನ ವಿರುದ್ಧ ಮಾತಾಡಿ, ಪೊಲೀಸ್ ಸ್ಟೇಷನ್ನಿನಲ್ಲಿ ಕೇಸು ಜಡಿದ ನೋಡಿ? ಅದಾದ ಮೇಲೆ ಥೇಟು ಹುಚ್ಚುನಾಯಿ ಕಚ್ಚಿದವನಂತಾಡ ಹತ್ತಿದ್ದಾನೆ!
ಈಗಂತೂ ನಾಯಿ ಸತೀಶ ಕಿಚ್ಚನಿಗೇ ಕಚ್ಚಲು ಅಣಿಯಾಗಿ ನಿಂತು ಬಿಟ್ಟಿದ್ದಾನೆ. ಬಹುಶಃ ಪ್ರಥಮ್ ಎಂಬಾತನನ್ನು ಹೊರತುಪಡಿಸಿದರೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಜನಸಾಮಾನ್ಯರ ಜೀವ ತಿಂದವರಲ್ಲಿ ನಾಯಿ ಸತೀಶನೇ ಉತ್ತುಂಗದಲ್ಲಿದ್ದಾನೆ. ಸದಾ ಚಾಲ್ತಿಯಲ್ಲಿರಬೇಕೆಂಬ ಇಂಥಾದ್ದೇ ತಲುಬು ಪ್ರಥಮ್ಗೆ ಅಮರಿಕೊಂಡಿತ್ತು. ಅದರ ಸಲುವಾಗಿಯೇ ಒಂದಷ್ಟು ಎಡವಟ್ಟು ಮಾಡಿಕೊಂಡಿದ್ದ ಪ್ರಥಮ ಇತ್ತಿತ್ತಲಾಗಿ ತೆಪ್ಪಗಾದಂತಿದೆ. ಆದರೆ, ನಾಯಿ ಸತೀಶನ ಪ್ರವರಗಳು ಮಾತ್ರ ಅನೂಚಾನವಾಗಿ ಮುಂದವರೆಯುತ್ತಿವೆ. ಮಾಧ್ಯಮಗಳ ಮುಂದೆ ಶರ್ಟಿನ ಕಾಲರು ಜಗ್ಗಿ ಲಕ್ಷ ಕೋಟಿಯ ಕಥೆ ಪುಂಗುವ ಈ ಅವಿವೇಕಿಯೀಗ ಸ್ಟಾರ್ ನಟ ಸುದೀಪ್ ಮಾನವನ್ನೂ ಹರಾಜಿಗಿಡುವ ಕೆಲಸ ಮಾಡುತ್ತಿದ್ದಾನೆ.
ಇಂಥವನ ವಿರುದ್ಧ ರಜತ್, ವಿನಯ್ ಮುಂತಾದವರು ಸೆಟೆದೆದ್ದು ನಿಂತಿದ್ದಾರೆ. ಸುದೀಪ್ರನ್ನು ಮುಟ್ಟಬೇಕೆಂದರೆ ಈ ಎಂಟೆದೆಯ ಬಂಟರನ್ನು ದಾಟಿಕೊಂಡು ಹೋಗಬೇಕು ಅಂತೆಲ್ಲ ಮಾಸ್ ಡೈಲಾಗಿನ ಕಾಮಿಡಿಕ ಮಾಡಲಾರಂಭಿಸಿದ್ದಾರೆ. ತಮಾಶೆಯೆಂದರೆ, ಈಗ ಯಾವ ನಾಯಿ ಸತೀಶ ಹುಚ್ಚು ನಾಯಿ ಕಡಿದಂತಾಡುತ್ತಿದ್ದಾನೋ, ಆತನನ್ನು ಮುಖ್ಯಭೂಮಿಕೆಗೆ ತಂದು ಬಿಟ್ಟಿದ್ದರಲ್ಲಿ ಕಿಚ್ಚನ ಪಾತ್ರವೇನು ಕಡಿಮೆ ಇದೆಯಾ? ಇದುವರೆಗೂ ಬಿಗ್ ಬಾಸ್ ಶೋ ಬಗ್ಗೆ ಅಪಸ್ವರವೆದ್ದಾಗೆಲ್ಲ ತನ್ನ ಅತಿಬುದ್ಧಿವಂತಿಕೆಯ ಮಾತುಗಳ ಮೂಲಕ ಜಾರಿಕೊಳ್ಳುತ್ತಾ ಬಂದಿದ್ದವರು ಕಿಚ್ಚ. ಇಂಥಾ ಕಿಚ್ಚಾ ಬಿಗ್ ಬಾಸ್ ಮನೆಗೆ ಹುಚ್ಚರನ್ನು ಸೇರಿಸಿಕೊಳ್ಳೋದರ ಬಗ್ಗೆ ಪ್ರಶ್ನೆ ಎದುರಾದಾಗ ನಾವೂ ಹುಚ್ಚರೆ ಅನ್ನುವ ಮೂಲಕ ಮೀಸೆಯ ಮೊನೆಯಲ್ಲಿ ಹುಳ್ಳಗೆ ನಕ್ಕಿದ್ದನ್ನು ಯಾರೂ ಮರೆತಿಲ್ಲ.
ದ್ರೋನ್ ಪ್ರತಾಪನಂಥಾ ಪುಂಗುವೀರರನ್ನು, ಬುಲೆಟ್ ರಕ್ಷಕ್ ಥರದ ಎಳಸು ಕುನ್ನಿಗಳನ್ನು, ಸೋನು ಗೌಡಳಂಥವರನ್ನೆಲ್ಲ ತಂದು ಒಟ್ಟಿಕೊಂಡು ಅದ್ಯಾವ ಸೀಮೆಯ ಸಾಧನೆ ಮಾಡಿದರೋ ಸುದೀಪ್? ಅದು ಅವರಿಗೆ ಮಾತ್ರವೇ ಗೊತ್ತಿರಲು ಸಾಧ್ಯ. ಅಷ್ಟಕ್ಕೂ ಈ ನಾಯಿ ಸತೀಶ ನೂರು ಕೋಟಿ ನಾಯಿಯ ಕಥೆ ಒದರುತ್ತಲೇ ಪ್ರವರ್ಧಮಾನಕ್ಕೆ ಬಂದಿದ್ದ. ಈತನ ಬಡಾಯಿಗಳ ಬಗ್ಗೆ ಜಗತ್ತಿಗೆಲ್ಲ ಗೊತ್ತಾಗಿ ಹೋಗಿತ್ತು. ಇಂಥವನನ್ನು ಸುದೀಪ್ ನಡೆಸುವ ಶೋವೊಂದಕ್ಕೆ ಸೇರಿಸಿಕೊಳ್ಳುತ್ತಾರೆಂದರೆ ಅದಕ್ಕಿಂತಲೂ ನಾಚಿಕೆಗೇಡಿನ ವಿಚಾರ ಬೇರೇನಿದೆ? ಹೀಗೆ ಸುದೀಪ್ ಕಾರಣದಿಂದಲೇ ಮುಂಚೂಣಿಗೆ ಬಂದ ನಾಯಿ ಸತೀಶ ಇದೀಗ ಕಿಚ್ಚನಿಗೇ ಕಚ್ಚಲು ತಯಾರಾಗಿ ನಿಂತಿದ್ದಾನೆ. ಸುದೀಪ್ಗೇನು ಕೋಡಿದೆಯಾ ಅಂತೆಲ್ಲ ಕಂಡ ಕಂಡಲ್ಲಿ ಒದರಲಾರಂಭಿಸಿದ್ದಾನೆ, ಅಂತೂ ಕಿಚ್ಚನ ಘನತೆಯನ್ನು ನೂರು ಕೋಟಿಯ ಜೂಲುನಾಯಿಯ ಒಡೆಯ ನಾಯಿ ಸತೀಶ ಬೀದಿಗೆ ತಂದಿದ್ದಾನೆ. ಇದರ ಹಿಂದಿರೋ ಅಸಲೀ ತಪ್ಪು ಯಾರದ್ದು? ಈ ಪ್ರಶ್ನೆಗೆ ಕಿಚ್ಚಾ ಸುದೀಪ ಉತ್ತರ ಹುಡುಕಬಹುದಾ?
keywords: kiccha sudeep, dog sathish controvercy, rajath, vinay gowda, biggboss season12, sandalwood

