ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನದ ದಿನಗಳೀಗ ಪರಪ್ಪನ ಅಗ್ರಹಾರದಲ್ಲಿ ಸರಿಯುತ್ತಿವೆ. ಒಂದು ಕಡೆಯಲ್ಲಿ ಆತನ ಅಭಿಮಾನಿಗಳೆಲ್ಲ ತಮ್ಮಿಷ್ಟದ ನಟ ದರ್ಶನ್ ಆದಷ್ಟು ಬೇಗನೆ ಈ ಕಳಂಕವನ್ನು ಕಳಚಿಕೊಂಡು ಬರಲೆಂಬ ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಇಡಾ ಒಡೆಯದ ಹೋರಿಗಳಂತೆ ಕಂಡೋರ ಮೇಲೆರಗಿ ಹೋಗುತ್ತಿದ್ದ ಕೆಲ ವೀರಾಭಿಮಾನಿಗಳ ಆವುಟವೂ ಈಗ ತುಸು ತಗ್ಗಿದೆ. ಮತ್ತೊಂದು ದಿಕ್ಕಿನಿಂದ ಪತ್ನಿ ವಿಜಯಲಕ್ಷ್ಮಿ ಕೂಡಾ ತನ್ನ ಗಂಡನನ್ನು ಈ ಚಕ್ರವ್ಯೂಹದಿಂದ ಪಾರುಗಾಣಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ. ಒಂದು ಹಂತದಲ್ಲಿ ದರ್ಶನ್ ದುರಹಂಕಾರ ಕಂಡು ಕೆಂಡವಾಗಿರುವವರ ಎದೆಯಲ್ಲೂ ಈಗ ಆತ ತಲುಪಿಕೊಂಡಿರುವ ಸ್ಥಿತಿ ಕಂಡು ಮರುಕ ಮೂಡಿದೆ. ಆದರೆ, ಸಿಟ್ಟಿನ ಕೈಗೆ ಬುದ್ಧಿ ಕೊಟ್ಟೋ, ತಾನೇನು ಮಾಡಿದರೂ ಜಯಿಸಿಕೊಳ್ಳಬಲ್ಲನೆಂಬ ಅಹಮ್ಮಿಕೆಯಿಂದಲೋ ಮನುಷ್ಯ ಮಾಡೋ ತಪ್ಪಿದೆಯಲ್ಲಾ? ಅದು ನಾನಾವ ರೀತಿಯಲ್ಲಿ ಕಾಡದಿರೋದಿಲ್ಲ!

ಸದ್ಯದ ಮಟ್ಟಿಗೆ ದರ್ಶನ್ ಪಾಲಿಗೆ ಅಂಥಾ ಆಘಾತಗಳು ಒಂದರ ಹಿಂದೊಂದರಂತೆ ಬಂದೆರಗುತ್ತಿವೆ. ಮೊದಲ ಹಂತದಲ್ಲಿ ಜೈಲನ್ನೂ ಕೂಡಾ ಮಾವನ ಮನೆಯನ್ನಾಗಿಸಿಕೊಂಡಿದ್ದಾತ ದರ್ಶನ್. ಹೇಳಿಕೇಳಿ ಪರಪ್ಪನ ಅಗ್ರಹಾರದಲ್ಲಿ ಅಧಿಕಾರಿಗಳ ನೆರಳಲ್ಲಿಯೇ ದಂಧೆಗಳ ದುಖಾನು ತೆರೆದುಕೊಂಡಿದೆ. ಅಲ್ಲಿ ನೇರಾನೇರ ವ್ಯವಹಾರ ಕುದುರಿಸಿ ಹಾಯಾಗಿ ಅಡ್ಡಾಡಿಕೊಂಡಿದ್ದಾತ ದರ್ಶನ್. ಅತ್ತ ಪಕ್ಕದ ಸೆಲ್ಲಿನಲ್ಲಿಯೇ ಬೆಂಗಳೂರಿನ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಇದ್ದ. ಇತ್ತ ತನ್ನ ಗೆಣೆಕಾರ ದರ್ಶನ್ನನ ಪರಿಚಾರಿಕೆಗೆಂದೇ ಸೈಕಲ್ ರವಿ ಬೇಕರಿ ರಘು ಎಂಬೋ ರೌಡಿ ಎಲಿಮೆಂಟನ್ನು ಅಂದರ್ ಮಾಡಿದ್ದ. ಇವರೆಲ್ಲದ ದೇಖಾರೇಖಿಯಲ್ಲಿಮ ಒಂದು ಹಂತದ ವರೆಗೂ ದರ್ಶನ್ ಪಾಲಿಗೆ ಜೈಲೆಂಬುದೂ ಸ್ವರ್ಗವಾಗಿತ್ತು.

ಅದು ದರ್ಶನ್ ಮಾಡಿದ ಬಹು ದೊಡ್ಡ ತಪ್ಪು. ತನ್ನ ಕಡೆಯಿಂದ ಎಡವಟ್ಟಾಗಿದೆ. ಅದಕ್ಕಾಗಿ ಕಾನೂನಿನ ಏಟು ಬಿದ್ದಿದೆ. ಈ ಹಂ ತದಲ್ಲಿ ಶಿಕ್ಷೆಯ ಅವಧಿಯನ್ನು ಪ್ರಾಮಾಣಿಕವಾಗಿ ಎದುರಿಸಬೇಕೆಂಬ ಸಣ್ಣ ಖಬರೂ ಕೂಡಾ ದಾಸನ ಸನಿಹ ಸುಳಿದಿರಲಿಲ್ಲ. ಇಂಥಾ ಸ್ವೇಚ್ಛೆಯೇ ದೇಶವ್ಯಾಪಿ ಸುದ್ದಿಯಾಗಿ, ಬೇರೆ ಜೈಲಿಗೆ ಕಮಾನೆತ್ತಿಸಿಕೊಂಡಿದ್ದ ದರ್ಶನ್, ಬೇಲ್ ಪಡೆದು ಹೊರ ಬಂ ದ ನಂತರವೂ ಕೂಡಾ ಸೂಕ್ಷ್ಮವಾಗಿ ನಡೆದುಕೊಂಡಿರಲಿಲ್ಲ. ಇದೇ ಹೊತ್ತಿನಲ್ಲಿ ಅಭಿಮಾನಿಗಳೆನ್ನಿಸಿಕೊಂಡ ಕೆಲ ಅವಿವೇಕಿಗಳು ಅಕ್ಷರಶಃ ಗೂಂಡಾಗಳಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೆರೆಯಲಾರಂಭಿಸಿದ್ದರು. ದರ್ಶನ್ ಬೇಲ್ ಕ್ಯಾನ್ಸಲ್ ಆಗಿ ಮತ್ತೆ ಜೈಲಿಗೆ ಗದುಮಿಸಿಕೊಂಡಿದ್ದರ ಹಿಂದಿರೋದು ಇಂಥಾ ಸ್ವಯಂಕೃತಾಪರಾಧಗಳೇ.

ಈಗಂತೂ ಪರಪ್ಪನ ಅಗ್ರಹಾರದೊಳಗೆ ಎಲ್ಲವೂ ಬಿಗಿಯಾಗಿದೆ. ಅಲ್ಲಿ ಜೈಲಾಧಿಕಾರಿಯಾಗಿರೋ ಸುರೇಶನ ದುಂಡಾವರ್ತನೆಗಳ ಬಗ್ಗೆ `ಸಿನಿಶೋಧ’ ತನಿಖಾ ವರದಿಯೊಂದನ್ನು ಪ್ರಕಟಿಸಿತ್ತು. ಅದಾದ ನಂತರ ದಯಾನಂದ್ ಜೈಲಾಧಿಕಾರಿಗಳ ನಟ್ಟು ಬೋಲ್ಟು ಟೈಟ್ ಮಾಡಿದ್ದಾರೆ. ಮಾಲಿನಿ ಮೇಡಮ್ಮಿನ ಪರಿಚಾರಕರೆಲ್ಲ ಬಾಲ ಮುದುರಿಕೊಂಡಿದ್ದಾರೆ. ಇದೆಲ್ಲದರ ನಡುವೆಯೇ ರೇಣುಕಾಸ್ವಾಮಿ ಕೊಲೆ ಕೇಸು ಇಡೀ ದೇಶದಲ್ಲೇ ಎರಡನೇ ಭಯಾನಕ ಪ್ರಕರಣವಾಗಿ ದಾಖಲಾಗಿದೆ. ನರ್ಸಿಂಗ್ ವಿದ್ಯಾರ್ಥಿನಿಯ ಭೀಕರ ರೇಪ್ ಮತ್ತು ಹತ್ಯೆ ಕೇಸು ಮೊದಲ ಸ್ಥಾನದಲ್ಲಿದೆ. ಈ ಮೂಲಕ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳೂ ಕೂಡಾ ಮತ್ತೊಮ್ಮೆ ಫೋಕಸ್ ಮಾಡಿವೆ.

ಇನ್ನುಳಿದಂತೆ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ಕೊಟ್ಟು ಕೊಂದ ಪರಿಯ ಬಗ್ಗೆ ನ್ಯಾಯಾಂಗ ವಲಯದಲ್ಲಿ ನಾನಾ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಅದರಲ್ಲಿನ ಬಹುತೇಕ ಅಂಶಗಳು ದರ್ಶನ್ ಕೊರಳಿಗೆ ಕಾನೂನಿನ ಕುಣಿಕೆ ಬಿಗಿಯಾಗುತ್ತಿರೋದನ್ನೇ ಬಲವಾಗಿ ಧ್ವನಿಸುತ್ತಿವೆ. ನ್ಯಾಯಾಂಗ ಈ ಪ್ರಕರಣದಲ್ಲಿ ಪ್ರಧಾನವಾಗಿ ಪರಿಗಣಿಸಬಹುದಾದ ಅಂಶಗಳೇ ಭಯಾನಕವಾಗಿವೆ. ಓರ್ವ ಮನುಷ್ಯನನ್ನು ಹೇಗೆಲ್ಲ ಹಿಂಸಿಸಬಾರದೋ, ಹಾಗೆಲ್ಲ ಚಿತ್ರ ಹಿಂಸೆ ಕೊಟ್ಟು ಕೊಲ್ಲಲಾಗಿದೆ ಎಂಬ ವಿಚಾರವೇ ಇಲ್ಲಿ ಪ್ರಧಾನವಾಗಿ ಪರಿಗಣಿಸಲ್ಪಡುವ ಸಾಧ್ಯತೆಗಳು ದಟ್ಟವಾಗಿವೆ. ಬಹುಶಃ ತನ್ನ ಶಿಷ್ಯನ ಸ್ಟೋನಿಬ್ರೂಕ್ಸ್ ಡ್ರಗ್ಸ್ ನಶೆ ಇಂಥಾ ಅನಾಹುತ ಸೃಷ್ಟಿಸುತ್ತದೆಂಬ ಸಣ್ಣ ಕಲ್ಪನೆಯೂ ದರ್ಶನ್‌ಗಿದ್ದಂತಿಲ್ಲ. ಸದ್ಯದ ಮಟ್ಟಿಗೆ ಮಾಡಿದ ಎಡವಟ್ಟನ್ನು ಕೋಟಿ ಸುರಿದರೂ ನೀಗಿಕೊಳ್ಳಲಾರದ ವಾಸ್ತವವೊಂದು ದರ್ಶನ್ ನಲುಗುವಂತೆ ಮಾಡಿದೆ. ಕಣ್ಣೆದುರೇ ನರಳಿ ಸತ್ತ ರೇಣುಕಾಸ್ವಾಮಿ ಕಂಬಿ ಹಿಂದಿರೋ ದಾಸನನ್ನು ಕ್ಷಣ ಕ್ಷಣವೂ ಕಂಗಾಲಾಗಿಸುತ್ತಿದ್ದಾನೆ. ಅದೆಲ್ಲದರ ಅಂತಿಮ ಫಲಿತಾಂಶ ಶೀಘ್ರದಲ್ಲಿಯೇ ಜಾಹೀರಾಗಲಿದೆ!

About The Author