ಒಂದೆರಡು ಸಿನಿಮಾಗಳು ನಿರೀಕ್ಷೆಯಂತೆ ಮೂಡಿ ಬರದಿದ್ದರೆ, ಅದೆಂಥಾ ದೈತ್ಯ ಸ್ಟಾರುಗಳಾದರೂ ತಲಗೆಲೆಗಳಂತೆ ಹೊಯ್ದಾಡೋದಿದೆ. ಇಂಥಾ ಸಂದಿಗ್ಧ ಸ್ಥಿತಿಯನ್ನು ಅನೇಕರು ದಾಟಿಕೊಂಡಿದ್ದಾರೆ; ಅದೆಷ್ಟೋ ನಟರು ಬೋರಲು ಬಿದ್ದಿದ್ದಾರೆ. ಆದರೆ, ಬಾಹುಬಲಿ ಖ್ಯಾತಿಯ ಪ್ರಭಾಸ್ ಮಾತ್ರ ಅದಕ್ಕೆ ತದ್ವಿರುದ್ಧ ಆಸಾಮಿ. ಬಾಹುಬಲಿ ಸರಣಿ ಯಶದ ಬಳಿಕ ಈತ ಕಂಡಿದ್ದು ಬರೀ ಸೋಲುಗಳನ್ನೇ. ತೀರಾ ನೀಲ್ ನಿರ್ದೇಶನದ ಸಲಾರ್ ಕೂಡಾ ಸಾಧಾರಣ ಗೆಲುವು ಪಡೆದುಕೊಂಡಿತ್ತು. ಇದ್ದುದರಲ್ಲಿಯೇ ಡಾರ್ಲಿಂಗ್ ಪ್ರಭಾಸ್ ಕೊಂಚ ಉಸಿರಾಡುವಂತೆ ಮಾಡಿದ್ದು ಕಲ್ಕಿ ಮಾತ್ರ. ಮಿಕ್ಕೆಲ್ಲ ಚಿತ್ರಗಳು ತೋಪಾದರೂ ಪ್ರಭಾಸ್ಗಿರೋ ಬೇಡಿಕೆ ಮಾತ್ರ ತುಸುವೂ ತಗ್ಗಿಲ್ಲ!
ಈವತ್ತಿಗೂ ಪ್ರಭಾಸ್ ಸಿನಿಮಾ ಮಾಡಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಮುಗಿ ಬೀಳುತ್ತಿವೆ. ಇದೀಗ ಕಾಂತಾರಾ ಖ್ಯಾತಿಯ ಕನ್ನಡದ ಹೊಂಬಾಳೆ ಫಿಲಂಸ್ ಸಂಸ್ಥೆ ಕೂಡಾ ಪ್ರಭಾಸ್ ಜೊತೆ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಲು ಮುಂದಾಗಿದೆ ಎಂಬಂಥಾ ಮಾತುಗಳು ಹರಿದಾಡುತ್ತಿವೆ. ಇತ್ತೀಚೆಗಷ್ಟೇ ಪ್ರಭಾಸ್ ಮಲೆಯಾಳಂನ ಖ್ಯಾತ ನಿರ್ದೇಶಕ ದಿನ್ಜಿತ್ ಅಯ್ಯತ್ತಾನ್ ಜೊತೆಗಿರೋ ಫೋಟೋವೊಂದು ಸಾಮಾಜಿಕ ಜಾಲತಾಣಗಳ ಮೂಲಕ ಹರಿದಾಡಿತ್ತು. ಮಲೆಯಾಳಂ ಮಾಧ್ಯಮಗಳಲ್ಲಿ ಹರಿದಾಡಿದ್ದ ಈ ಫೋಟೋ ಹಿಂದೆಯೇ ಒಂದಷ್ಟು ಬಗೆಯ ಚರ್ಚೆಗಳು ನಡೆದಿದ್ದವು. ಅದರ ಬೆನ್ನಲ್ಲಿಯೇ ಈಗ ಎಲ್ಲರೂ ಅಚ್ಚರಿಗೊಳ್ಳುವಂಥಾದ್ದೊಂದು ಸುದ್ದಿ ಹರಿದಾಡುತ್ತಿದೆ.
ಈಗ ಹಬ್ಬಿಕೊಂಡಿರುವ ಪುಕಾರುಗಳ ಆಧಾರದಲ್ಲಿ ಹೇಳೋದಾದರೆ, ಪ್ರಭಾಸ್ ಮಲೆಯಾಳಂ ನಿರ್ದೇಶಕನನ್ನು ಭೇಟಿಯಾಗಿದ್ದರ ಹಿಂದೆ ಮಹತ್ವದ್ದೊಂದು ಕಾರಣವಿದೆ. ಪ್ರಭಾಸ್ ಈಗಾಗಲೇ ಹೊಂಬಾಳೆ ಸಂಸ್ಥೆಯೊಂದಿಗೆ ಮೂರು ಸಿನಿಮಾಗಳಿಗೆ ಸಹಿ ಹಾಕಿದ್ದಾರಂತೆ. ಅದರಲ್ಲೊಂದು ಚಿತ್ರವನ್ನು ದಿನ್ಜಿತ್ ಅಯ್ಯತ್ತಾನ್ ನಿರ್ದೇಶನ ಮಾಡಲಿದ್ದಾರಾ? ಸಿನಿಮಾ ರಂಗದೊಳಗಿನ ಮಾಹಿತಿಗಳು ಹೌದೆಂಬಂಥಾ ಉತ್ತರ ರವಾನಿಸುತ್ತಿವೆ. ದಿನ್ಜಿತ್ ಅಯ್ಯತ್ತಾನ್ರನ್ನು ಭೇಟಿಯಾದ ಪ್ರಭಾಸ್ ಕಥೆಯ ಬಗ್ಗೆ ಚರ್ಚೆ ನಡೆಸಿರುವಂತಿದೆ. ಮಿಕ್ಕುಳಿದ ಮತ್ತೊಂದು ಸಿನಿಮಾವನ್ನು ಕೂಡಾ ಪ್ರತಿಭಾನ್ವಿತ ನಿರ್ದೇಶಕರೋರ್ವರು ನಿರ್ದೇಶನ ಮಾಡಲಿದ್ದಾರೆ. ಬಹುಶಃ ಈ ಸರಣಿಯ ಮೂಲಕವೇ ಪ್ರಭಾಸ್ನ ಲತ್ತೆ ನಸೀಬು ಸರಿಯಾದೀತೇನೋ…
keywords: prabhas, prabhas new project with hombale films, dinjith ayyathan

