ಚಿತ್ರರಂಗದಲ್ಲಿ ಅದೆಂಥಾದ್ದೇ ಅಲೆ ಚಾಲ್ತಿಯಲ್ಲಿದ್ದರೂ ಕೂಡಾ, ನಮ್ಮ ನಡುವಿನ ಕಥನಕ್ಕೆ ಕಣ್ಣಾದ ಸಿನಿಮಾಗಳತ್ತ ಪ್ರೇಕ್ಷಕರು ಬಹು ಬೇಗನೆ ಆಕರ್ಷಿತರಾಗುತ್ತಾರೆ. ನಿಜ, ಸಿನಿಮಾ ಎಂಬುದು ಮನೋರಂಜನೆಯ ಮಾಧ್ಯಮ. ಅನುಕ್ಷರಸ್ಥರನ್ನೂ ತಲುಪಿ, ಆಂತರ್ಯಕ್ಕಿಳಿದು ಛಾಪು ಮೂಡಿಸುವ ಸಮ್ಮೋಹಕ ಗುಣವೂ ಅದಕ್ಕಿದೆ. ಇಂಥಾ ಪ್ರಭಾವೀ ಮಾಧ್ಯಮವಾದ ಸಿನಿಮಾದ ಮೂಲಕ ಸಾಮಾಜಿಕ ಕ್ರಾಂತಿ ಮೂಡಿಸುವ ಪ್ರಯತ್ನಗಳೂ ಕೂಡಾ ಆಗಾಗ ನಡೆಯೋದುಂಟು. ಅಂಥಾದ್ದೊಂದು ಸಾಹಸನ್ನು ಕಪಟ ನಾಟಕ ಸೂತ್ರಧಾರಿ ಚಿತ್ರತಂಡ ಕೂಡಾ ಮಾಡಿದೆಯಾ? ಇದೀಗ ಬಿಡುಗಡೆಗೊಂಡಿರುವ ಟ್ರೈಲರ್ ನೋಡಿದ ಪ್ರೇಕ್ಷಕರನ್ನೆಲ್ಲ ಇಂಥಾದ್ದೊಂದು ಪ್ರಶ್ನೆ ಬೆರಗಿನಂತೆ ಕಾಡುತ್ತಿರೋದು ನಿಜ!
ಧೀರಜ್ ಎಂ.ವಿ ನಿರ್ದೇಶನ ಹಾಗೂ ಅಭಿರಾಮ ಅರ್ಜುನ ಬ್ಯುಸಿನೆಸ್ ಹೆಡ್ ಆಗಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರ ಕಪಟ ನಾಟಕ ಸೂತ್ರಧಾರಿ. ಈಗಾಗಲೇ ಫ:ಸ್ಟ್ ಲುಕ್ ಪೋಸ್ಟರ್ ಲಾಂಚ್ ಮಾಡಿ, ಅದರ ಭೂಮಿಕೆಯಲ್ಲಿ ಒಂದಷ್ಟು ವಿಚಾರಗಳನ್ನು ಚಿತ್ರತಂಡ ಹಂಚಿಕೊಂಡಿತ್ತು. ಅದೆಲ್ಲದರ ಮೂಲಕ ಕಪಟ ನಾಟಕ ಸೂತ್ರಧಾರಿಯ ಆಂತರ್ಯದ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿಕೊಂಡಿತ್ತು. ಈ ಟ್ರೈಲರ್ ನೋಡಿದಾಕ್ಷಣವೇ ಇದೊಂದು ಭಿನ್ನ ಪಥದ ಕದಲಿಕೆ ಎಂಬಂಥಾ ಸ್ಪಷ್ಟ ಸುಳಿವು ಸಿಕ್ಕಂತಾಗಿದೆ. ಒಂದು ಸಮುದಾಯದ ಶ್ರದ್ಧಾ ಕೇಂದ್ರಕ್ಕೆ ಮನುಷ್ಯ ಸಹಜ ಕುತೂಹಲದಿಂದ ತೆರಳೋ ಅನ್ಯ ಸಮುದಾಯದ ಯುವಕ. ಆತ ಆನೆಯಡಿಯಲ್ಲಿ ನುಸುಳಲು ಹೋದಾಗ ಲಾಕ್ ಆಗೋದರ ಸುತ್ತಲಿನ ಸೂಕ್ಷ್ಮ ವಿಚಾರಗಳ ಮೂಲಕ ಒಂದಿಡೀ ಕಥೆ ಗರಿಬಿಚ್ಚಿಕೊಳ್ಳುವ ಲಕ್ಷಣಗಳಿಲ್ಲಿ ಢಾಳಾಗಿಯೇ ಗೋಚರಿಸಿದ್ದಾವೆ.
ಅನ್ಯ ಮತೀಯ ಯುವಕ ಆನಿಯ ಕಾಲ ಕೆಳಗೆ ಲಾಕ್ ಆಗೋ ರೂಪಕವಿದೆಯಲ್ಲಾ? ಅದು ಪ್ರಸ್ತುತ ನಮ್ಮ ಸಮಾಜವನ್ನು ವಿಮರ್ಶೆಗೊಳಪಡಿಸಿದ ಸೂಚನೆಯಂತೆ ಭಾಸವಾಗುತ್ತೆ. ಸಾಮಾನ್ಯವಾಗಿ ಧರ್ಮಾತೀತವಾಗಿ ನಎಲ್ಲರೊಳಗೂ ಭಕ್ತಿ, ನಂಬಿಕೆ, ಆಚರಣೆಗಳು ನೆಲೆಗಂಡಿರುತ್ತವೆ. ಆದರೀಗ ಅಂಥಾ ಆಳವಾದ ನಂಬಿಕೆಯ ಬೇರುಗಳಿಗೇ ಕ್ಷುದ್ರ ರಾಜಕಾರಣ ಕೈಯಿಟ್ಟಿದೆ. ಧಾರ್ಮಿಕ ನಂಬಿಕೆಗಳೂ ಕೂಡಾ ರಾಜಕೀಯ ಪುಢಾರಿಗಳ ಪಾಲಿನ ದಾಳವಾಗಿದೆ. ಇಂಥಾ ಸನ್ನಿವೇಶದಲ್ಲಿ ಈವತ್ತಿನ ವಾತಾವರಣಕ್ಕೆ, ಒಳಗೊಳಗೇ ಮಲೆತು ವ್ರಣವಾದ ಧಾರ್ಮಿಕ ಮನೋ ವ್ಯಾಧಿಗೆ ಮದ್ದರೆಯುವ ದೃಶ್ಯದ ಸುಳಿವುಗಳು ನಿಖರವಾಗಿಯೇ ಸಿಕ್ಕಿವೆ.
ಇದು ನಾನಾ ಅಜೆಂಡಾಗಳಿಗನುಗುಣವಾಗಿ ಸಿನಿಮಾಗಳು ತಯಾರಾಗುತ್ತಿರುವ ಪ್ರಕ್ಷಬ್ಧ ಕಾಲಮಾನ. ಇಂಥಾ ವಾತಾವರಣದಲ್ಲಿ ಕಪಟ ನಾಟಕ ಸೂತ್ರಧಾರಿ ಚಿತ್ರತಂಡ ಮನುಷ್ಯತ್ವದ ಭೂಮಿಕೆಯಲ್ಲಿ ಒಂದಿಡೀ ಕಥೆಯನ್ನು ಕಟ್ಟಿ ನಿಲ್ಲಿಸಿದ್ದೇ ಹೌದಾದರೆ ಈ ಸಿನಿಮಾ ಖಂಡಿತವಾಗಿಯೂ ಭಿನ್ನವಾಗಿ ನಿಲ್ಲಬಹುದು. ಸಿನಿಮಾ ಚೌಕಟ್ಟಿನಲ್ಲಿಯೂ ಪ್ರೇಕ್ಷಕರನ್ನು ತಾಕಬಹುದು. ಸದ್ಯಕ್ಕಂತೂ ಈ ಟ್ರೈಲರ್ ಸುತ್ತ ಒಂದಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ಒಂದು ಸಿನಿಮಾ ಧರ್ಮದ ಅಮಲಿನಾಚೆಗೊಂದು ಮನುಷ್ಯತ್ವದ ಗಂಧ ಪಸರಿಸುವಂತಾದರೆ ಅದಕ್ಕಿಂತಲೂ ಸಾರ್ಥಕತೆ ಬೇರೊಂದಿಲ್ಲ. ನಿಜಕ್ಕೂ ಈ ಚಿತ್ರ ಆ ಹಾದಿಯಲ್ಲಿ ಮೂಡಿ ಬಂದಿದೆಯಾ ಎಂಬ ಪ್ರಶ್ನೆಗೆ ಜುಲೈ ೪ರಂದು ನಿಖರ ಉತ್ತರ ಸಿಗಲಿದೆ!
#kapata nataka sutradhari ವಿಎಸ್ ಕೆ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಅಭಿರಾಮ ಅರ್ಜುನ ಈ ಸಿನಿಮಾದ ಬ್ಯುಸಿನೆಸ್ ಹೆಡ್ ಆಗಿ ಕಾರ್ಯ ನಿರ್ವಹಿಸಿರುವುದಲ್ಲದೆ, ಪ್ರಧಾನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಐಟಿ ವಲಯದಿಂದ ಬಂದಿರುವ ಧೀರಜ್ ಎಂ.ವಿ ಈ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ವೀರೇಶ್ ಎನ್ ಟಿ ಎ ಛಾಯಾಗ್ರಹಣ, ಪ್ರಸನ್ನ ಕುಮಾರ್ ಎಂ.ಎಸ್ ಸಂಗೀತ ನಿರ್ದೇಶನ ಹಾಗೂ ಮುರಳಿ ಶಂಕರ್ ಸಹ ನಿರ್ದೇಶನವಿರುವ ಈ ಚಿತ್ರದಲ್ಲಿ ಹರೀಶ್ ರಂಗರಾವ್ ಕ್ರಿಯೇಟಿವ್ ಹೆಡ್ ಆಗಿ, ವರುಣ್ ಗುರುರಾಜ್ ಪ್ರೊಡಕ್ಷನ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಪಟ ನಾಟಕ ಸೂತ್ರಧಾರಿ ಜುಲೈ ೪ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.