ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಗುರುತಿಸಿಕೊಂಡಿರುವ ಪವನ್ ಕಲ್ಯಾಣ್ ಇದೀಗ ರಾಜಕಾರಣಿಯಾಗಿ ಸಕ್ರಿಯರಾಗಿದ್ದಾರೆ. ಯಾರೇ ನಟ ಹೀಗೆ ರಾಜಕಾರಣದತ್ತ ಹೊರಳಿಕೊಂಡನೆಂದರೆ, ನಟನಾಗಿ ಆತನ ವೃತ್ತಿ ಬದುಕಿನ ಕಥೆ ಮುಗಿಯಿತೆಂದೇ ಅರ್ಥ. ತಮಿಳುನಾಡಿನಲ್ಲಿ ರಾಜಕೀಯ ಅಖಾಡಕ್ಕಿಳಿದಿರೋ ವಿಜಯ್ ಥರದವರು ನಿವೃತ್ತಿ ಘೋಶಿಸಿಯೇ ಧುಮುಕೋದಿದೆ. ಹಾಗಿದ್ದ ಮೇಲೆ ಪವನ್ ಕಲ್ಯಾಣ್ ನಟನಾಗಿ ಮುಂದುವರೆಯೋದು ಕಷ್ಟ ಅಂತಲೇ ಹೇಳಲಾಗುತ್ತಿತ್ತು. ಇದರಿಂದಾಗಿ ಆತನ ಅಭಿಮಾನಿ ಬಳಗ ಕೊಂಚ ಆಘಾತಕ್ಕೀಡಾದಂತಿತ್ತು. ಕಡೆಗೂ ಇದೀಗ ಅಭಿಮಾನಿ ಪಾಳೆಯ ನಿರಾಳವಾಗುವಂಥಾ ಸೂಚನೆಯೊಂದು ಪವರ್ ಸ್ಟಾರ್ ಕಡೆಯಿಂದಲೇ ಸಿಕ್ಕಿದೆ.
ಪವನ್ ಕಲ್ಯಾಣ್ ನಟಿಸಿರುವ ಹರಿಹರ ವೀರಮಲ್ಲು ಚಿತ್ರವೀಗ ಬಿಡುಗಡೆಗೆ ರೆಡಿಯಾಗಿದೆ. ಇದೇ ಆತನ ವೃತ್ತಿ ಬದುಕಿನ ಕಡೇಯ ಚಿತ್ರ ಅಂತೊಂದು ಸುದ್ದಿ ಬಲವಾಗಿಯೇ ಹರಿದಾಡಿತ್ತು. ಈವತ್ತಿಗೆ ಹರಿಹರ ವೀರಮಲ್ಲು ಸಿನಿಮಾ ಬಗೆಗೇನಾದರೂ ಹೈಪು ಮೂಡಿಕೊಂಡಿದ್ದರೆ ಅದಕ್ಕೆ ಕಾರಣ ಕೊನೇ ಸಿನಿಮಾ ಎಂಬಂಥಾ ಸೆಂಟಿಮೆಂಟು ಮಾತ್ರ. ಆದರೀಗ ಖುದ್ದು ಪವನ್ ಕಲ್ಯಾಣ್ ಕಡೆಯಿಂದಲೇ ನಟನಾಗಿ ಮುಂದುವರೆಯುವ ಸೂಚನೆ ಸಿಕ್ಕಿ ಬಿಟ್ಟಿದೆ. ಯಾಕೆಂದರೆ, ಅವರೀಗ ಉಸ್ತಾದ್ ಭಗತ್ ಸಿಂಗ್ ಎಂಬ ರಿಯಲಿಸ್ಟಿಕ್ ಸಿನಿಮಾವನ್ನು ಒಪ್ಪಿಕೊಂಡು, ಅದಕ್ಕಾಗಿ ತಯಾರಿ ಆರಂಭಿಸಿರುವ ಸುದ್ದಿ ಹೊರ ಬಿದ್ದಿದೆ.
ಈ ಮೂಲಕ ಪವರ್ ಸ್ಟಾರ್ ನಟನೆಯಿಂದ ನಿವೃತ್ತಿ ಹೊಂದುತ್ತಿಲ್ಲ ಎಂಬುದು ಖಾತರಿಯಾದಂತಾಗಿದೆ. ಹಾಗಾದರೆ ಉಸ್ತಾದ್ ಭಗತ್ ಸಿಂಗ್ ಪವನ್ ಕಲ್ಯಾಣ್ ಅವರ ಕೊನೇಯ ಸಿನಿಮಾವಾಗಬಹುದಾ? ಇಂಥಾ ಅನುಮಾನಕ್ಕೂ ಪವನ್ ಪಾಳೆಯದಿಂದ ಸ್ಪಷ್ಟೀಕರಣ ಹೊರ ಬಿದ್ದಿದೆ. ಅದರನ್ವಯ ಹೇಳೋದಾದರೆ, ಸದ್ಯಕ್ಕೆ ನಿವೃತ್ತಿಯ ಯಾವ ಯೋಚನೆಯನ್ನೂ ಪವನ್ ಕಲ್ಯಾಣ್ ಮಾಡಿಲ್ಲ. ಇದೀಗ ಒಂದಷ್ಟು ಇಂಟರೆಸ್ಟಿಂಗ್ ಸ್ರಿಪ್ಟುಗಳು ಅವರ ಮುಂದಿವೆ. ಉಸ್ತಾದ್ ಭಗತ್ ಸಿಂಗ್ ಬೆನ್ನಲ್ಲಿಯೇ ಮತ್ತೊಂದಷ್ಟು ಸಿನಿಮಾಗಳಿಗೆ ಸಹಿ ಹಾಕುವ ತಯಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನೋಡ ಹೋದರೆ, ಇನ್ನೊಂದು ಐದಾರು ವರ್ಷಗಳ ಕಾಲ ಪವರ್ ಸ್ಟಾರ್ ಫಾರ್ಮ್‌ನಲ್ಲಿರೋದು ಪಕ್ಕಾ!