ಹೊಸಾ ಹಾದಿಯತ್ತ ಹೊರಳಿಕೊಂಡಿರುವ ಕನ್ನಡ ಚಿತ್ರರಂಗದ ಪಾಲಿಗೀಗ ಒಂದಷ್ಟು ಭಿನ್ನ ಪ್ರಯತ್ನಗಳು, ಗೆಲುವುಗಳು ಜಮೆಯಾಗುತ್ತಿವೆ. ಈ ಆಶಾದಾಯಕ ವಾತಾವರಣದ ಮುಂದುವರೆದ ಭಾಗವೆಂಬಂತೆ ಮತ್ತೂ ಒಂದಷ್ಟು ಸಿನಿಮಾಗಳು ಸದ್ದೇ ಇಲ್ಲದಂತೆ ಚಿತ್ರೀಕರಣ ಮುಗಿಸಿಕೊಂಡು, ಬಿಡುಗಡೆಗೆ ತಯಾರಾಗಿ ನಿಂತಿವೆ. ಸದ್ಯದ ಮಟ್ಟಿಗೆ ಆ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳಬಲ್ಲ ಎಲ್ಲ ಅರ್ಹತೆಗಳನ್ನು ಅಡಕವಾಗಿಸಿಕೊಂಡಿರುವ ಚಿತ್ರ (sathyam) `ಸತ್ಯಂ’. ಈಗಾಗಲೇ ಒಂದಷ್ಟು ಮಾಸ್ ಸಿನಿಮಾಗಳಲ್ಲಿ ನಟಿಸಿರುವ ಸಂತೋಷ್ ಬಾಲರಾಜ್ (santhosh balaraj) ನಾಯಕನಾಗಿ ನಟಿಸಿರುವ ಈ ಚಿತ್ರ ಪ್ರೇಕ್ಷಕರ ಮುಂದೆ ಬರುವ ಸನ್ನಾಹದಲ್ಲಿದೆ. ಪ್ರಚಾರದ ಪಟ್ಟುಗಳಾಚೆ ಗಮನ ಸೆಳೆದಿರುವ `ಸತ್ಯಂ’ನ(sthyam) ಸಾರಥಿ (ashok kadaba) ಅಶೋಕ್ ಕಡಬ. ಈಗಾಗಲೇ ಭಿನ್ನ ಪಥದ ಸಿನಿಮಾಗಳನ್ನು ನಿರ್ದೇಶನ ಮಾಡುವ ಮೂಲಕ ಗೆದ್ದಿರುವ ಅಶೋಕ್ ಪಾಲಿಗಿದು ಕಲಾತ್ಮಕ ಹಾದಿಯಲ್ಲಿ ಅಚ್ಚರಿಯಂತೆ ಸೃಷ್ಟಿಯಾದ ಕಮರ್ಶಿಯಲ್ ಪಾಕಾರದ ಮೈಲಿಗಲ್ಲೊಂದನ್ನು ನೆಟ್ಟ ವಿಭಿನ್ನ ಅನುಭೂತಿ!

ಈಗಾಗಲೇ ಗಣಪ, ಕರಿಯ2 ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ, ಮಾಸ್ ಲುಕ್ಕಿನಲ್ಲಿ ಪ್ರೇಕ್ಷಕರನ್ನು ಸೆಖಳೆದುಕೊಂಡವರು ಸಂತೋಷ್ ಬಾಲರಾಜ್. ಹಿರಿಯ ನಿರ್ಮಾಪಕ ದಿವಂಗತ ಬಾಲರಾಜ್ ಪುತ್ರರಾದ ಸಂತೋಷ್ ಒಂದು ಪುಷ್ಕಳ ಗೆಲುವಿನ ಬೆಂಬಿದ್ದು ಸಾಗಿ ಬಂದಿದ್ದಾರೆ. ಸದ್ಯದ ವಾತಾವರಣ, ಚಿತ್ರರಂಡ ಬಿಟ್ಟು ಕೊಟ್ಟಿರುವ ಒಂದಷ್ಟು ಮಾಹಿತಿಯನ್ನು ಆಧರಿಸಿ ಹೇಳೋದಾದರೆ,. ಸತ್ಯಂ ಮೂಲಕ ಅದು ಸಾಕಾರಗೊಳ್ಳುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಈ ಚಿತ್ರದಲ್ಲಿ ಕನ್ನಡತಿ ಖ್ಯಾತಿಯ ರಂಜನಿ ರಾಘವನ್ ಕೂಡಾ ಚೆಂದದ್ದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಸತ್ಯಂ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿಯೇ ತಯಾರುಗೊಂಡಿದೆ.

ಶ್ರೀ ಮಾತಾ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಮಹಾಂತೇಶ್ ವಿ.ಕೆ ಈ ಚಿತ್ರವನ್ನು ಬಹು ಆಸ್ಥೆಯುಇಂದ ನಿರ್ಮಾಣ ಮಾಡಿದ್ದಾರೆ. ಕಥೆಯ ಕಸುವಿಗೆ ಮನಸೋತು ಏಕಕಾಲದಲ್ಲಿಯೇ ಎರಡೆರಡು ಭಾಷೆಗಲ್ಲಿ ನಿರ್ಮಾಣ ಮಾಡುವ ಸಾಹಸಕ್ಕೂ ಒಡ್ಡಿಕೊಂಡಿದ್ದಾರೆ. ದೊಡ್ಡ ಬಜೆಟ್ಟಿನಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ, ದೊಡ್ಡ ಮಟ್ಟದಲ್ಲಿಯೇ ಗೆಲುವು ದಾಖಲಿಸಲಿದೆ ಎಂಬ ತುಂಬು ನಂಬುಗೆ ಚಿತ್ರರಂಡದಲ್ಲಿದೆ. ಹಿರಿಯ ನಟ ಸುಮನ್, ಸಯ್ಯಾಜಿ ಶಿಂಧೆ, ಅವಿನಾಶ್, ವಿನಯಾ ಪ್ರಸದ್ ಸೇರಿದಂತೆ ಘಟಾನುಘಟಿ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. 

ಹಾಗಾದರೆ, ಈ ಸಿನಿಮಾ ಯಾವ ಬಗೆಯದ್ದು? ಎರಡೆರಡು ಭಾಷೆಗಳಲ್ಲಿ ಏಕ ಕಾಲದಲ್ಲಿಯೇ ತಯಾರಾಗುವಷ್ಟು ಗಹನವಾದ ಕಥೆ ಇಲ್ಲೇನಿದೆ? ಒಟ್ಟಾರೆ ಸಿನಿಮಾದ ವಿಶೇಷತೆಗಳೇನು ಎಂಬಿತ್ಯದಿ ಪ್ರಶ್ನೆಗಳಿಗೆ ನಿರ್ದೇಶಕರು ಕುತೂಹಲಕರವಾದ ಉತ್ತರ ಕೊಡುತ್ತಾರೆ. ಆ ಆಧಾರದಲ್ಲಿ ಹೇಳೋದಾದರೆ, ಸತ್ಯಂನ ಕಥೆ ಬಹಳಷ್ಟು ವಿಶೇಷತೆಗಳನ್ನು ಒಳಗೊಂಡಿದೆ. ರಾಜಮನೆತನವೊಂದರ ಕಾಲಘಟ್ಟಕ್ಕೆ ಕನೆಕ್ಟಾಗುವ ಈ ಕಥೆ, ನಾನಾ ರೋಚಕ ಅಂಶಗಳನ್ನೊಳಗೊಂಡಿದೆಯಂತೆ. ಈ ವರೆಗೆ ಮಾಸ್ ಲುಕ್ಕಿನಲ್ಲಿಯೇ ಕಾಣಿಸಿಕೊಳ್ಳುತ್ತಾ ಬಂದಿರುವ ಸಂತೋಷ್ ಬಾಲರಾಜ್ ಇಲ್ಲಿ ನಾನಾ ಶೇಡುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸುವಂತೆ ನಿರ್ದೇಶಕ ಅಶೋಕ್ ಕಡಬ ಈ ಚಿತ್ರವನ್ನು ನಿರ್ದಶಿಸಿದ್ದಾರಂತೆ.

ಸತ್ಯಂ ಚಿತ್ರ ಬಹುಮುಖ್ಯವಾಗಿ ಗುರುತಿಸಿಕೊಳ್ಳುತ್ತಿರೋದಕ್ಕೆ ಅನೇಕ ಕಾರಣಗಳಿದ್ದಾವೆ. ಅದರಲ್ಲಿ ಪ್ರಧಾನವಾಗಿ ಗಮನ ಸೆಳೆಯುವಂಥಾದ್ದು ನಿರ್ದೇಶಕ ಅಶೋಕ್ ಕಡಬ ಅವರ ಹಿನ್ನೆಲೆ. ನಿರ್ದೇಶಕರಾಗಿ ಅವರ ಯಾನವನ್ನೊಮ್ಮೆ ಪರಾಮಾರ್ಶಿಸಿದರೆ, ಭಿನ್ನ ಜಾಡಿನ ಸಿನಿಮಾಗಳ ಗುಚ್ಛವೊಂದು ಸೆಳೆಯುತ್ತದೆ. ಆ ದಿಸೆಯಲ್ಲಿ ಹೇಳೋದಾದರೆ, ನಿಜಕ್ಕೂ ಅಶೋಕ್ ಕಡಬ ವಿಶಿಷ್ಟ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಾರೆ. ಮೂಲತಃ ತುಮಕೂರು ಜಿಲ್ಲೆಯ, ಗುಬ್ಬಿ ತಾಲೂಕಿನ ಕಡಬದವರಾದ ಅಶೋಕ್, ರೈತಾಪಿ ಕುಂಟುಂಬವೊಂದರಿಂದ ಬಂದವರು. ಶಾಲಾ ಕಾಲೇಜು ದಿನಗಳಲ್ಲಿಯೇ ಸಿನಿಮಾ ಬಗ್ಗೆ ಅತೀವ ಆಸಕ್ತಿ ಹೊಂದಿದ್ದವರು ಅಶೋಕ್ ಕಡಬ. ಸಾಮಾನ್ಯವಾಗಿ ಆ ಕಾಲಮಾನದಲ್ಲಿನ ಸಿನಿಮಾ ವ್ಯಾಮೋಹ ಕಮರ್ಶಿಯಲ್ ಜಾಡಿನ ಚಿತ್ರಗಳ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತದೆ. ಆ ವಿಚಾರದಲ್ಲಿ ಅಶೋಕ್ ಅಭಿರುಚಿ ತೀರಾ ಭಿನ್ನ. ಯಾಕೆಂದರೆ, ಆ ಸಮಯದಲ್ಲಿಯೇ ಅವರ ಪ್ರಧಾನ ಆಕರ್ಷಣೆಯಾಗಿದ್ದದ್ದು ಕಲಾತ್ಮಕ ಚಿತ್ರಗಳು. `ಸಂಸ್ಕಾರ’, `ಫಣಿಯಮ್ಮ’, `ಮೈಸೂರು ಮಲ್ಲಿಗೆ’ಯಂಥಾ ಸಿನಿಮಾಗಳತ್ತ ಆಕರ್ಷಿತರಾಗಿ ಮುಂದೊಂದು ದಿನ ತಾನೂ ಅಂಥಾದ್ದೇ ಸಿನಿಮಾಗಳನ್ನು ಮಾಡಬೇಕೆಂಬ ಕನಸು ಕಟ್ಟಿಕೊಂಡಿದದವರು ಅಶೋಕ್ ಕಡಬ.

ಇಂಥಾ ಉತ್ಕಟವಾದ ಕನಸುಗಳಿವೆಯಲ್ಲಾ? ಅವು ಬದುಕು ಅದೆಷ್ಟೇ ಹೊಯ್ದಾಡಿದರೂ ವ್ಯಕ್ತಿಯೊಬ್ಬನನ್ನು ಗುರಿಯ ನೇರಕ್ಕೆ ತಂದು ನಿಲ್ಲಿಸುತ್ತೆ. ಈ ಮಾತಿಗೆ ತಾಜಾ ಉದಾಹರಣೆಯಂತಿರುವವರು ಅಶೋಕ್ ಕಡಬ. ಆ ನಂತರದಲ್ಲಿ ಓದು ಮುಗಿಸಿಕೊಂಡು ಸಿನಿಮಾ ರಂಗದತ್ತ ಮರಳಿದ್ದ ಅವರು, ಆ ಕಾಲಕ್ಕೆ ಕಲಾತ್ಮಕ ಸಿನಿಮಾಗಳ ಮೂಲಕ ಹೆಸರು ಗಿಸಿದ್ದ ಅನೇಕ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿದ್ದರು. ಸರಿಸುಮಾರು ಹತ್ತು ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕಾರ್ಯ ನರ್ವಹಿಸಿ, ಅಗಾಧ ಅನುಭವ ತುಂಬಿಕೊಂಡ ಅವರು 2012ರ ಸುಮಾರಿಗೆ ಸ್ವತಂತ್ರ ನಿರ್ದೇಶಕರಾಗಿದ್ದರು. ಆ ಕ್ಷಣದಲ್ಲಿ ಅವರೊಳಗಿದ್ದದ್ದು ಕೆಲಸ ಕಲಿಯುವ ಅತೀವ ಶ್ರದ್ಧೆ ಮತ್ತು ಯಾವುದೇ ರೀತಿಯಲ್ಲಿಯೂ ದುಂದುವೆಚ್ಚ ಮಾಡದೆ ಒಂದೊಳ್ಳೆ ಸಿನಿಮಾವೊಂದನ್ನು ನಿರ್ದೇಶನ ಮಾಡುವ ಮಹತ್ವಾಕಾಂಕ್ಷೆ.

ಅಂಥಾದ್ದೊಂದು ಇಂಗಿತ ಸಾಕಾರಗೊಂಡಿದ್ದ `ಏನಂತೀಯಾ’ ಎಂಬ ಸಿನಿಮಾ ಮೂಲಕ. ಅಶೋಕ್ ಕಡಬ ನಿರ್ದಶನದ ಮೊದಲ ಚಿತ್ರವಾದ `ಏನಂತೀಯಾ’ ಮೆಚ್ಚುಗೆ ಗಳಿಸಿಕೊಂಡಿತ್ತು. ಆ ನಂತರ `ಮೈ ನೇಮ್ ಈಸ್ ಕಲಾಂ’ ಎಂಬ ಸಾಕ್ಷ್ಯಚಿತ್ರ ನಿರ್ದೇಶನ ಮಾಡಿದ್ದ ಅಶೋಕ್, ಅದಾದ ಬಳಿಕ ನಿರ್ದೇಶನ ಮಾಡಿದ್ದದ್ದು `ಅಮೃತ ಘಳಿಗೆ’ ಎಂಬ ಸಿನಿಮಾವನ್ನು. ಅದು ಓರ್ವ ನಿರ್ದೇಶಕರಾಗಿ ಅಶೋಕ್ ಅವರಿಗೆ ಹತ್ತು ಹಲವು ರೀತಿಯಲ್ಲಿ ಎಂದೂ ಮರೆಯದಂಥಾ ಅಮೃತ ಘಳಿಗೆಗಳನ್ನು ಸೃಷ್ಟಿಸಿ ಕೊಟ್ಟಿತ್ತು. ಅದು ಹತ್ತಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿತ್ತು. 2018ರ ಫಿಲಂಫೇರ್ ಕನ್ನಡ ವಿಭಾಗದಲ್ಲಿ ನಾಮನಿರ್ದೇಶನಗೊಂಡು, ಅತ್ಯುತ್ತಮ ಕನ್ನಡ ಕಲಾತ್ಮಕ ಚಿತ್ರವೆಂಬ ಹೆಗ್ಗಳಿಕೆಗೆ ಭಾಜನವಾಗಿತ್ತು. ನಂತರ ಚಿತ್ರಸಂತೆಯ ಬೆಸ್ಟ್ ಪ್ಯಾರಲಲ್ ಅವಾರ್ಡ್ ಕೂಡಾ ಆ ಚಿತ್ರಕ್ಕೆ ಲಭಿಸಿತ್ತು.

ಹೀಗೆ ಕಲಾತ್ಮಕ ಪಥದಲ್ಲಿಯೇ ಸಾಗಿ ಬಂದಿದ್ದ ಅಶೋಕ್ ಕಡಬ 2020ರಲ್ಲಿ `ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅದು ಅಶೋಕ್‍ರಿಗೆ ಬೆಸ್ ಡೈರೆಕ್ಟರ್ ಅವಾರ್ಡ್ ಬರುವಂತೆ ಮಾಡಿತ್ತು. ಇದಲ್ಲದೇ, ನಾನಾ ಸಿನಿಮೋತ್ಸವಗಳಲ್ಲಿಯೂ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿಕೊಂಡಿತ್ತು. ಹೀಗೆ ಒಂದು ಅಭಿರುಚಿಯಿಂದ ಆಚೀಚೆ ಕದಲದೆ ಸಾಗಿ ಬಂದ ಅಶೋಕ್ ಅವರು ಇದ್ದಕ್ಕಕಿದ್ದಂತೆ ಕಮರ್ಶಿಯಲ್ ಪಥದತ್ತ ಹೊರಳಿಕೊಂಡಿದ್ದು ಕೂಡಾ ಆಕಸ್ಮಿಕವೇ. ಹೊಸತೊಂದು ಕಥೆ ಸಿದ್ಧಪಡಿಸಿಕೊಂಡಿದ್ದ ಅವರು, ಸಂಭಾಷಣೆ ಬರೆಯುವ ಜವಬ್ದಾರಿಯನ್ನು ಕೆ.ವಿ ರಾಜು ಅವರಿಗೆ ವಹಿಸಿದ್ದರು. ಹಾಗೆ ಆ ಕಾರ್ಯವನ್ನು ಕೈಗೆತ್ತಿಕೊಂಡಿದ್ದ ರಾಜು, ಒಟ್ಟಾರೆ ಕಥೆ, ಚಿತ್ರಕಥೆ ಗಮನಿಸಿ ಇದನು ಪಕ್ಕಾ ಕಮರ್ಶಿಯಲ ಸಿನಿಮಾವಾಗಿ ರೂಪಿಸುವಂತೆ ಉತ್ತೇಜಿಸಿದ್ದರಂತೆ.

ಕೆ.ವಿ ರಾಜು ಅವರ ಸಲಹೆಯಂತೆ ಮತ್ತೊಂದಷ್ಟು ಒಪ್ಪ ಓರಣ ಮಾಡಿ ಸಿದ್ಧ ಪಡಿಸಿದ ಚಿತ್ರ ಸತ್ಯಂ. ಈ ಕಥನವನ್ನು ಅಶೋಕ್ ರೂಪಿಸಿದ ಪರಿ ಕಂಡೇ ನಿರ್ಮಾಪಕರಾದ ಮಹಾಂತೇಶ್ ಅವರು ಖುಷಿಗೊಂಡಿದ್ದರು. ನಂತರ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡು, ಅತ್ಯಂತ ಪ್ರೀತಿಯಿಂದ ಎರಡು ಭಾಷೆಗಳಲ್ಲಿ ಈಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಒಟ್ಟಾರೆ ಸಿನಿಮಾ ಅತ್ಯಂತ ಅಚ್ಚುಕಟ್ಟಾಗಿ ಮೂಡಿ ಬಂದಿದೆ ಎಂಬ ತೃಪ್ತಿ ಅಶೋಕ್ ಅವರೊಳಗಿದೆ. ಈ ಮೂಲಕ  ಸಂತೋಷ್ ಬಾಲರಾಜ್ ಅವರ ಕನಸು ನನಸಾಗೋ ಸ್ಪಷ್ಟ ಸೂಚನೆಗಳೂ ಕಾಣಿಸುತ್ತಿವೆ. ಇದರೊಂದಿಗೆ ಅಶೋಕ್ ಕಡಬ ನಿರ್ದೇಶಕರಾಗಿ ಮತ್ವದ ಹೆಜ್ಜೆಯಿಟ್ಟಿದ್ದಾರೆ. ಈಗಾಗಲೇ ಒಂದಷ್ಟು ಸುದ್ದಿಯಲ್ಲಿರೋ ಸತ್ಯಂ ತೆರೆಗಾಣುವ ದಿನಾಂಕ ಸದ್ಯದಲ್ಲಿಯೇ ಜಾಹೀರಾಗಲಿದೆ…

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!