ತೆಲುಗು ಚಿತ್ರರಂಗಕ್ಕೆ ಹಾರಿ, ಅಲ್ಲಿ ಭರಪೂರ ಗೆಲುವು ದಕ್ಕುತ್ತಲೇ ನಿಂತಲ್ಲಿ ಕುಂತಲ್ಲಿ ಕಿರಿಕ್ಕು ಸೃಷ್ಟಿಸಿಕೊಂಡಿದ್ದಾಕೆ ರಶ್ಮಿಕಾ ಮಂದಣ್ಣ. ತನ್ನದೊಂದು ಮಾತು ಎಂತೆಂಥಾ ಕೋನದಲ್ಲಿ ವಿವಾದಕ್ಕೆ ಕಾರಣವಾಗುತ್ತೆ ಅನ್ನೋದು ಖಾತರಿಉಯಿದ್ದರೂ ಕೂಡಾ ಕಿರಿಕ್ ಹುಡುಗಿಗೆ ಅದರ ಬಗೆಗೊಂದು ನಿರ್ಲಕ್ಷ್ಯವಿದ್ದಂತಿತ್ತು. ಅದರಲ್ಲಿಯೂ ವಿಶೇಷವಾಗಿ, ಹಲವಾರು ಬಾರಿ ತನ್ನ ತಾಯಿನುಡಿಯಾದ ಕನ್ನಡದ ಬಗ್ಗೆ ತಾತ್ಸಾರ ತೋರುವ ಮೂಲಕ ಈಕೆ ಹೀನಾಮಾನ ಟ್ರೋಲಿಗೀಡಾಗವಿದ್ದಳು. ಇದೆಲ್ಲದರಿಂದ ಇದೀಗ ರಶ್ಮಿಕಾ ಪಾಠ ಕಲಿತಂತಿದೆ. ಈ ಕಾರಣದಿಂದಲೇ ಆಕೆಯ ಮಾತಿಗೊಂದು ಘನತೆಯ, ಸೂಕ್ಷ್ಮವಂತಿಕೆಯ ಕಳೆ ಬಂದ ಹಾಗಿದೆ!
ಇತ್ತೀಚೆಗೆ ಲಂಡನ್ನಿನಲ್ಲಿ ನಡೆದ ಕಾರ್ಯ ಕ್ರಮವೊಂದರಲ್ಲಿ ಧೂಮಪಾನದ ಬಗ್ಗೆ ರಶ್ಮಿಕಾ ತಳೆದಿರೋ ನಿಲುವು ಭಾರೀ ಸುದ್ದಿಯಾಗಿತ್ತು. ಖಾಸಗಿ ಬದುಕಲ್ಲಿ ಧೂಮಪಾನವನ್ನು ವಿರೋಧಿಸುತ್ತಾ ಬಂದಿರೋದಾಗಿ ತಿಳಿಸಿದ್ದ ರಶ್ಮಿಕಾ, ಸಿನಿಮಾದಲ್ಲಿ ಕೂಡಾ ಧೂಮಪಾನ ಮಾಡೋದಿಲ್ಲ ಅಂದಿದ್ದಾಳೆ. ಒಂದುವೇಳೆ ಧೂಮಪಾನದ ಸನ್ನಿವೇಶದಲ್ಲಿ ಪಾಲ್ಗೊಳ್ಳಲೇ ಬೇಕೆಂಬ ಒತ್ತಾಯ ಬಂದರೆ, ಆ ಪ್ರಾಜೆಕ್ಟನ್ನೇ ಕೈ ಬಿಡೋದಾಗಿಯೂ ಹೇಳಿದ್ದಾಳೆ. ರಶ್ಮಿಕಾಳ ಮಾತಿನ ಹಿಂದಿರುವ ಸಾಮಾಜಿಕ ಕಾಳಜಿಯ ಬಗೆಗೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ಮೆಚ್ಚುಗೆಯ ಮಾತುಗಳು ಹರಿದಾಡುತ್ತಿವೆ. ಟ್ರೋಲ್ ಮೂಲಕ ಛಾಟಿ ಬೀಸುತ್ತಿದ್ದವರೂ ಕೂಡಾ ರಶ್ಮಿಕಾಳನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ.
ಏಕಾಏಕಿ ರಶ್ಮಿಕಾ ಬಗ್ಗೆ ಈ ಪರಿಯಾಗಿ ಮೆಚ್ಚುಗೆ ಮೂಡಿಕೊಂಡಿರುವುದಕ್ಕೂ ಕಾರಣವಿದೆ. ಈ ನಟ ನಟಿಯರು ತಾವು ಕಾಸು ಮಾಡಿಕೊಳ್ಳಲು ಸಮಾಜವನ್ನು ತಾವ ಪಾತಾಳಕ್ಕಿಳಿಸಲೂ ಹೇಸುವುದಿಲ್ಲ. ಅಂಥಾ ಮನಃಸ್ಥಿತಿ ಇಲ್ಲದೇ ಹೋಗಿದ್ದರೆ, ವಿಮಲ್ ನಂಥಾ ಗುಟ್ಕಾ ಜಾಹೀರಾತುಗಳಲ್ಲಿ ಶಾರೂಖ್ ಖಾನ್, ಅಜಯ್ ದೇವಗನ್ ಥರದ ಮಾನಗೆಟ್ಟ ನಟರು ಕಾಣಿಸಿಕೊಳ್ಳಲು ಸಾಧ್ಯವಿರುತ್ತಿರಲಿಲ್ಲ. ನಮ್ಮ ಅತೀಬುದ್ಧಿವಂತ ಕಿಚ್ಚಾ ಸುದೀಪನಂಥವರು ಬೆಟ್ಟಿಂಗ್ ದಂಧೆಯ ಜಾಹೀರಾತಲ್ಲಿ ಕಾಣಿಸಿಕೊಂಡು ಕೊಸರಿಕೊಳ್ಳುವ ಪ್ರಮೇಯವೂ ಬರುತ್ತಿರಲಿಲ್ಲ. ಇನ್ನು ತೆರೆಮೇಲೆ ತಾನು ಸಿಗರೇಟು ಸೇದಿದರೆ ಅದು ತನ್ನನ್ನು ಅನುಸರಿಸೋ ಕೋಟ್ಯಂತರ ಯುವ ಸಮುದಾಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆಂಬ ಖಬರು ಬಹುತೇಕರಿಗಿಲ್ಲ. ಚಿತ್ರತಂಡ ಸಿಗರೇಟು ಕೈಗಿಟ್ಟರೆ, ಅದನ್ನು ಲಬ್ಬಕ್ಕನೆ ತುಟಿಗಿಟ್ಟುಕೊಂಡು ಪೋಸು ಕೊಡುವ ನಟಿಯರು ನಮ್ಮಲ್ಲೇ ಇದ್ದಾರೆ. ಇಂಥವರ ನಡುವೆ ಈ ಹುಡುಗಿ ರಶ್ಮಿಕಾ ನಿಜಕ್ಕೂ ಈ ಕ್ಷಣದಲ್ಲಿ ಭಿನ್ನವಾಗಿ ಕಾಣಿಸುತ್ತಾಳೆ!