ಈ ಸಿನಿಮಾ ಮಂದಿ ಪ್ರಚಾರಕ್ಕಾಗಿ ಎಂತೆಂಥಾ ಪಟ್ಟುಗಳನ್ನು ಪ್ರದರ್ಶಿಸೋದಕ್ಕೂ ರೆಡಿಯಾಗಿ ನಿಂತಿರುತ್ತಾರೆ. ದುರಂತವೆಂದರೆ, ಹೆಚ್ಚಿನ ಬಾರಿ ಇಂಥವರು ನೆಚ್ಚಿಕೊಳ್ಳೋದು ಸವಕಲು ಸರಕುಗಳನ್ನಷ್ಟೆ. ಬಿಟ್ಟಿ ಪ್ರಚಾರಕ್ಕಾದರೂ ಕ್ರಿಯೇಟಿವ್ ಹಾದಿಯಲ್ಲಿ ಹೆಜ್ಜೆಯೂರೋದಕ್ಕೆ ಬಾಲಿವುಡ್ ಮಂದಿಗೂ ಕಸುವಿಲ್ಲ. ಹಾಗಿಲ್ಲದೇ ಹೋಗಿದ್ದರೆ, ಈ ನಟಿ ಕಾಜೊಲ್ ಮತ್ತದೇ ದೆವ್ವ, ಭೂತ ಬಾಧೆಯ ಕಥೆ ಹೇಳಿ ನಗೆಪಾಟಲಿಗೀಡಾಗುತ್ತಿರಲಿಲ್ಲ. ಕಾಜೊಲ್ ಮಾ ಅಂತೊಂದು ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಹಾರರ್ ಕಂಟೆಂಟಿನ ಈ ಸಿನಿಮಾ ಇದೇ ತಿಂಗಳ ಇಪ್ಪತ್ತೇಳರಂದು ಬಿಡುಗಡೆಯಾಗಲಿದೆ. ಇದರ ಪ್ರಚಾರದಲ್ಲಿ ಭಾಗಿಯಾದ ಕಾಜೊಲ್ ಪ್ರೇತಬಾಧೆಯ ಭಳಾಂಗು ಬಿಡುವ ಮೂಲಕ ನೆಟ್ಟ್ಟಿಗರಿಂದ ಮೂದಲಿಕೆಗೊಳಗಾಗಿದ್ದಾರೆ!
ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮಾ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ. ಅದರಲ್ಲಿ ಆರಂಭದಿಂದ ಕಡೇ ವರೆಗೂ ಕೂಡಾ ಕಾಜೊಲ್ ಭಾಗಿಯಾಗಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತಾಡಿರುವ ಕಾಜೊಲ್, ದೇಶದಲ್ಲಿ ಭೂತ ಬಾಧೆ ಇಕರುವ ಅನೇಕ ಸ್ಥಳಗಳಿದ್ದಾವೆ. ಅಂಥಾ ಭಯ ಬೀಳಿಸುವ ಸ್ಥಳಗಳಲ್ಲಿ ರಾಮೋಜಿ ಫಿಲ್ಮ್ ಸಿಟಿಯೂ ಸೇರಿಕೊಳ್ಳುತ್ತೆ. ಅಲ್ಲಿ ನನ್ನನ್ನು ದೇವರೇ ಕಾಪಾಡಿದ್ದಾನೆ ಎಂಬರ್ಥದಲ್ಲಿ ಮಾತಾಡಿದ್ದಾರೆ. ತನಗೆ ದೆವ್ವದ ಕಾಟವಾಗಿತ್ತಾ? ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭೂತವಿದೆಯಾ ಎಂಬ ಬಗ್ಗೆ ಸ್ಪಷ್ಟವಾಗಿ ಏನನ್ನೂ ಮಾತಾಡದ ನಟಿ, ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ. ಈ ಮೂಲಕ ರಾಮೋಜಿ ಫಿಲ್ಮ್ ಸಿಟಿ ಕೂಡಾ ದೆವ್ವ ಭೂತಗಳ ಠಾವು ಎಂಬರ್ಥದಲ್ಲಿ ಮಾತಾಡಿರೋ ಕಾಜೊಲ್‌ಗೆ ನೆಟ್ಟಿಗರು ಉಗಿಯಲಾರಂಭಿಸಿದ್ದಾರೆ.
ಒಂದು ಹಾರರ್ ಸಿನಿಮಾ ತೆರೆಗಾಣಲು ಸಜ್ಜಾಗಿದೆ ಎಂದರೆ ಅಂಥಾ ಸಿನಿಮಾ ತಂಡಗಳು ತಮಗಾದ ಚಿತ್ರವಿಚಿತ್ರ ಅನುಭವಗಳ ಕಥೆ ಪೇಡುತ್ತಾ ಕಾಮಿಡಿ ಪ್ರೋಗ್ರಾಮನ್ನು ಚಾಲೂ ಮಾಡುತ್ತಾರೆ. ಇದು ಬಹುತೇಕ ಎಲ್ಲ ಹಾರರ್ ಸಿನಿಮಾಗಳ ವಾಡಿಕೆ ಎಂಬಂತಾಗಿದೆ. ಇದರ ಹಿಂದೆ ಸುಖಾಸುಮ್ಮನೆ ಭಯ ಬೀಳಿಸಿ ಪ್ರೇಕ್ಷಕರನ್ನು ಸೆಳೆಯುವ ಹುನ್ನಾರ ಅಡಗಿದೆ ಎಂಬ ವಿಚಾರ ಎಲ್ಲ ಪ್ರೇಕ್ಷಕರಿಗೂ ಅರ್ಥವಾಗಿದೆ. ಜಗತ್ತು ಈ ಪಾಟಿ ಮುಂದುವರೆದಿದ್ದರೂ ಕೂಡಾ ಈ ಮಂದಿ ಮತ್ತದೇ ಮೌಢ್ಯದ ಚುಂಗು ಹಿಡಿದ ಹೊರಟಿರೋದೇ ನಿಜಕ್ಕೂ ಈ ಶತಮಾನದ ಅದ್ಭುತ ಕಾಮಿಡಿ. ತೀರಾ ಕಾಜೊಲ್ ಥರದ ಹಿರಿಯ ನಟಿಯರೇ ಅಂಥಾ ಸವಕಲು ಸೂತ್ರಕ್ಕೆ ಬದ್ಧರಾಗಿರೋದು ನಿಜಕ್ಕೂ ವಿಷಾಧದ ಸಂಗತಿ!