ತನ್ನ ಗುರು ರಾಮ್ ಗೋಪಾಲ್ ವರ್ಮಾನಂಥಾದ್ದೇ ವಿಶಿಷ್ಟವಾದ ವ್ಯಕ್ತಿತ್ವ, ಓರ್ವ ನಿರ್ದೇಶಕನಾಗಿ ಗ್ರಹಿಕೆ ಹೊಂದಿರುವಾತ ಪುರಿ ಜಗನ್ನಾಥ್. ಅತ್ತ ವರ್ಮಾನ ಫಿಲಾಸಫಿಯ ಪ್ರವರ್ತಕನಾಗಿ ಕಾಣಿಸಿಕೊಳ್ಳುತ್ತಲೇ ನಿರ್ದೇಶಕನಾಗಿಯೂ ಚಾಲ್ತಿಯಲ್ಲಿದ್ದ ಪುರಿ ಪಾಲಿಗೆ ವರ್ಷಾಂತರಗಳ ಹಿಂದೆ ಘೋರ ಸೋಲು ಬಾಧಿಸಿ ಬಿಟ್ಟಿತ್ತು. ಅದೇನು ಅಂತಿಂಥಾ ಸೋಲಲ್ಲ; ಇಂಡಸ್ಟ್ರಿಯಲ್ಲಿ ಅಳಿದುಳಿದಿದ್ದ ಪುರಿ ಬಗೆಗಿನ ನಂಬಿಕೆಯೆಲ್ಲ ಛಿದ್ರವಾಗಿ ಬಿಟ್ಟಿತ್ತು. ಒಂದಷ್ಟು ಗೆಲುವು ಕಂಡು ಬೀಗುತ್ತಿದ್ದ ವಿಜಯ್ ದೇವರಕೊಂಡನ ಬಾಟಮ್ಮಿಗೆ ಸೋಲಿನ ಬರೆ ಬಿದ್ದಿತ್ತು. ಹೇಗೋ ಡಬಲ್ ಇಸ್ಮಾರ್ಟ್ ಗೆಲುವಿನ ನಂತರ ಕೊಂಚ ಚೇತರಿಸಿಕೊಂಡಿದ್ದ ಪುರಿಯೀಗ ಗರಿಗರಿ ಉತ್ಸಾಹದೊಂದಿಗೆ ಮರಳಿದೆ!
ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಸೇರಿಕೊಂಡು ದೊಡ್ಡ ಬೇಟೆಗೇ ಸಜ್ಜಾಗಿದ್ದಾರೆ. ಈ ಬಾರಿ ಮತ್ತೆ ಪ್ಯಾನಿಂಡಿಯಾ ಚಿತ್ರ ಮಾಡಲು ಮುಂದಾಗಿದ್ದಾರೆ. ಹೀಗೆ ಯಾವುದೇ ಸಿನಿಮಾ ಕೈಗೆತ್ತಿಕೊಂಡರೂ ಪುರಿಉ ತಾರಾಗಣ ಮತ್ತು ನಾಯಕಿಯ ಆಯ್ಕೆ ವಿಚಾರಕ್ಕೆ ಹೆಚ್ಚು ಪ್ರಧಾನ್ಯತೆ ಕೊಡುತ್ತಾರೆ. ಈ ಬಾರಿಯೂ ಚಾರ್ಮಿ ಮತ್ತು ಪಿರಿ ಸೇರಿಕೊಂಡು ಬಾಲಿವುಡ್ಡೂ ಸೇರಿದಂತೆ ನಾನಾ ಚಿತ್ರರಂಗದಲ್ಲಿ ತಲಾಶು ನಡೆಸಿದ್ದರು. ಕಡೆಗೂ ವರ್ಮಾ ಶಿಷ್ಯನ ಚಿತ್ತ ಹೊರಳಿದ್ದು ಮಲೆಯಾಳಿ ಹುಡುಗಿ ಸಂಯುಕ್ತಾ ಮೆನನ್‌ಳತ್ತ. ಈ ಸಂಯುಕ್ತಾ ಈ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಗಾಳಿಪಟ೨ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದವಳು.
ಸಂಯುಕ್ತಾ ಮೆನನ್‌ಗೆ ಈ ಮೂಲಕ ಪ್ಯಾನಿಂಡಿಯಾ ಸಿನಿಮಾ ಅವಕಾಶ ಒದಗಿ ಬಂದಿದೆ. ಕನ್ನಡದಲ್ಲಿ ಮಿಂಚಿದ ನಂತರ ಮಲೆಯಾಳಂ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದ ಸಂಯುಕ್ತಾಗೆ ಹೇಳಿಕೊಳ್ಳುವಂಥಾ ಗೆಲುವೇನೂ ಸಿಕ್ಕಿರಲಿಲ್ಲ. ಇದೀಗ ಹಠಾತ್ತನೆ ಸಿಕ್ಕ ಈ ಅವಕಾಶವನ್ನಾಕೆ ಖುಷಿಯಿಂದಲೇ ಒಪ್ಪಿಕೊಂಡಿದ್ದಾಳಂತೆ. ವರ್ಷಗಳ ಹಿಂದೆ ಲೈಗರ್ ಎಂಬ ಸಿನಿಮಾ ನಿರ್ದೇಶನ ಮಾಡಿ, ವಿಪರೀತ ಹೈಪು ಸೃಷ್ಟಿಸಿದ್ದ ಪುರಿ ಹೀನಾಯವಾಗಿ ಸೋಲು ಕಂಡಿದ್ದರು. ಆ ಬಳಿಕ ಡಬಲ್ ಇಸ್ಮಾರ್ಟ್ ಚಿತ್ರದ ಮೂಲಕ ಸಾಧಾರಣ ಗೆಲುವು ಪುರಿಗೆ ಸಿಕ್ಕಿತ್ತು. ಇದೀಗ ಹೊಸಾ ಚಿತ್ರವನ್ನು ಹಲವಾರು ಭಾಷೆಗಳಲ್ಲಿ ಬಿಡುಗಡೆಗೊಳ್ಳುವಂತೆ ರೂಪಿಸಲು ತಯಾರಿ ನಡೆಯುತ್ತಿದೆ!