ಅದೆಂಥಾ ಕ್ರೇಜ್ ಇದ್ದರೂ ಕೂಡಾ ಮದುವೆಯಾದ ನಂತರ ನಟಿಯರಿಗೆ ಅವಕಾಶ ಕಡಿಮೆಯಾಗುತ್ತದೆಂಬುದು ಸಿನಿಮಾ ರಂಗದಲ್ಲಿ ಲಾಗಾಯ್ತಿನಿಂದಲೂ ಬೇರೂರಿಕೊಂಡಿರುವ ನಂಬಿಕೆ. ಆದರೀಗ ಅದು ಬಹುತೇಕ ಚಿತ್ರರಂಗಗಳಲ್ಲಿ ಆ ನಂಬಿಕೆ ಹಂತ ಹಂತವಾಗಿ ಸುಳ್ಳಾಗುತ್ತಿದೆ. ಕೆಲ ನಟಿಯರು ಮದುವೆಯಾಗಿ, ಮಗುವಿನ ಲಾಲನೆ ಪಾಲನೆ ಮಾಡಿದ ನಂತರ ಮತ್ತೆ ಫಾರ್ಮಿಗೆ ಮರಳುತ್ತಿದ್ದಾರೆ. ಆ ಬಳಿಕವೇ ಕೆಲವರಿಗೆ ಕನಸಿನ ಪಾತ್ರಗಳೂ ಸಿಗುತ್ತಿದ್ದಾವೆ. ಸದ್ಯದ ಮಟ್ಟಿಗೆ ಬಾಲಿವುಡ್ಡಿನಲ್ಲಿ ಆಲಿಯಾ ಭಟ್ ಅಂಥಾದ್ದೊಂದು ಅವಕಾಶವನ್ನು ತನ್ನದಾಗಿಸಿಕೊಂಡಿದ್ದಾಳೆ. ಆಲ್ಫಾದಲ್ಲಿ ಪ್ರಧಾನ ಪಾತ್ರಧಾರಿಯಾಗಿರುವ ಆಲಿಯಾಗೆ ಇದರೊಂದಿಗೆ ಪ್ರಧಾನ ಪಾತ್ರವೇ ಸಿಕ್ಕಿದೆ.
ಇದು ಪತ್ತೇಧಾರಿ ಕಥಾನಕವನ್ನೊಳಗೊಂಡಿರುವ ಚಿತ್ರ. ವರ್ಷಗಟ್ಟಲೆ ಮದುವೆ ಮತ್ತು ಮಗುವಿನ ಲೋಕದಲ್ಲಿ ಕಳೆದು ಹೋಗಿದ್ದ ಆಲಿಯಾ ಅತ್ಯುತ್ಸಾಹದಿಂದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾಳೆ. ಶಿವ್ ರಾವೆಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸದರಿ ಚಿತ್ರದ ಚಿತ್ರೀಕರಣ ಅವ್ಯಾಹತವಾಗಿ ನಡೆಯುತ್ತಿದೆ. ಇದೀಗ ವಿಶೇಷವಾದ ಹಾಡೊಂದಕ್‌ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಅದರಲ್ಲಿ ಶಾರ್ವರಿ ವಾಘ್ ಜೊತೆ ನೃತ್ಯ ಮಾಡಲು ಆಲಿಯಾ ತಾಲೀಮು ನಡೆಸುತ್ತಿದ್ದಾರಂತೆ. ಕಷ್ಟದಾಯಕ ನೃತ್ಯದ ಪಟ್ಟುಗಳ ಮೂಲಕ ಸಂಚಲನ ಸೃಷ್ಟಿಸಲು ಆಲಿಯಾ ತಯಾರಾಗಿದ್ದಾರೆ.
ವೈಆರ್‌ಎಫ್ ಬ್ಯಾನರಿನಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಕೂಡಾ ಇಲ್ಲಿ ಮುಖ್ಯ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಆಲಿಯಾಗಂತೂ ಇದುವರೆಗೆ ಕಾಣಿಸಿಕೊಳ್ಳದಿದ್ದಂಥಾ ಮಹತ್ವದ ಪಾತ್ರ ಸಿಕ್ಕಿದೆ. ಆರಂಭದಿಂದಲೂ ಕೂಡಾ ಈ ಸಿನಿಮಾದ ವಿಶೇಷ ಹಾಡಿನ ಬಗ್ಗೆ ಆಲಿಯಾ ಹಾಗೂ ಶಾರ್ವರಿ ಉತ್ಸುಕರಾಗಿದ್ದಾರಂತೆ. ಈಗ್ಗೆ ಎರಡು ತಿಂಗಳಿಂದೀಚೆಗೆ ಆಲಿಯಾ ಶಾರ್ವರಿಯೊಂದಿಗೆ ನೃತ್ಯಾಭ್ಯಾಸ ನಡೆಸುತ್ತಿದ್ದಾರೆ. ಕಡೆಗೂ ಈಗ ಕನಸಿನ ಹಾಡಿನ ಚಿತ್ರೀಕರಣದ ದಿನ ಸನ್ನಿಹಿತವಾಗಿದೆ. ಈ ಸಿನಿಮಾ ಇದೇ ಡಿಸೆಂಬರ್ ತಿಂಗಳಲ್ಲಿ ಕ್ರಿಸ್‌ಮಸ್ ಹಬ್ಬದಂದು ಬಿಡುಗಡೆಗೊಳ್ಳಲಿದೆ.