ಕೆಜಿಎಫ್ ಸರಣಿ ಚಿತ್ರಗಳ ಮೂಲಕ ಪ್ಯಾನಿಂಡಿಯಾ ಮಟ್ಟದಲ್ಲಿ ಮಿಂಚಿದಾಕೆ ಶ್ರೀನಿಧಿ ಶೆಟ್ಟಿ. ಯಶ್ ಹೇಗೋ ಆ ಯಶಸ್ಸಿನ ಸರಣಿಯನ್ನು ಟಾಕ್ಸಿಕ್ ಮೂಲಕ ಮುಂದುವರೆಸುವ ಛಲದೊಂದಿಗೆ ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ, ಯಶ್ ಗೆ ಜೋಡಿಯಾಗಿ ನಟಿಸಿದ್ದ ಶ್ರೀನಿಧಿ ಪಾಲಿಗೆ ಮಾತ್ರ ಆ ಗೆಲುವನ್ನು ಮುಂದುವರೆಸಿಕೊಂಡು ಹೋಗೋದು ಅಕ್ಷರಶಃ ಪ್ರಯಾಸವಾಗಿ ಬಿಟ್ಟಿದೆ. ಯಾಕೆಂದರೆ, ಕೆಜಿಎಫ್ ನಂತರ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದ ಶ್ರೀನಿಧಿಗೆ ಅದೇಕೋ ಗೆಲುವು ಒಲಿದಿಲ್ಲ. ಆ ನಂತರ ಒಂದು ಸುದೀರ್ಘ ಕಾಲಾವಧಿಯಲ್ಲಿ ಈ ಮಂಗಳೂರು ಹುಡುಗಿ ಒಂದಷ್ಟು ಜಾಹೀರಾತುಗಳಲ್ಲಿ ಕಳೆದು ಹೋಗಿ ಮ್ಲಾನಗೊಂಡಿದ್ದಳು. ಆಕೆಯ ಮುಂದೀಗ ಸರಿಕಟ್ಟಾದ ಅವಕಾಶವೊಂದು ಬಂದು ನಿಂತಿದೆ!
ಸಾಮಾನ್ಯವಾಗಿ, ಆಗಾಗ ಶ್ರೀನಿಧಿ ಶೆಟ್ಟಿಯ ಹೆಸರು ಬಿಗ್ ಬಜೆಟ್ ಸಿನಿಮಾಗಳ ಜೊತೆ ಕೇಳಿ ಬರುತ್ತಿರುತ್ತದೆ. ಆದರೆ, ಈಗ ಹಬ್ಬಿಕೊಂಡಿರುವ ಸುದ್ದಿ ಹೆಚ್ಚೂ ಕಡಿಮೆ ಅಧಿಕೃತ ಅನ್ನಲಡ್ಡಿಯಿಲ್ಲ. ಅಧಿಕ್ ರವಿಚಂದ್ರನ್ ನಿರ್ದೇಶನದ ಸಿನಿಮಾವೊಂದನ್ನು ಅಜಿತ್ ಒಪ್ಪಿಕೊಂಡಿದ್ದಾರೆ. ಈಗಾಗಲೇ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅಜಿತ್ ಇನ್ನೊಂದೆರಡು ತಿಂಗಳುಗಳಲ್ಲಿ ಹೊಸಾ ಸಿನಿಮಾದತ್ತ ಹೊರಳಿಕೊಳ್ಳಲಿದ್ದಾರೆ. ಸದ್ಯಕ್ಕೆ ಅಧಿಕ್ ಈ ಸಿನಿಮಾ ನಾಯಕಿಯ ಹುಡುಕಾಟದಲ್ಲಿ ಬ್ಯುಸಿಯಾಗಿದ್ದರು. ಇದೀಗ ಆ ಪಾತ್ರದ ಚಹರೆಗಳಿಗೆ ಹೋಲಿಕೆಯಾಗುವಂಥಾ ಕೆಜಿಎಫ್ ಹುಡುಗಿ ಶ್ರೀನಿಧಿಯನ್ನು ನಿಕ್ಕಿಯಾಗಿಸಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.
ಈ ಸಿನಿಮಾದ ನಾಯಕಿ ಪಾತ್ರಕ್ಕೆ ಪ್ರಬುದ್ಧವಾದ ಶೇಡುಗಳಿದ್ದಾವಂತೆ. ಅದೇ ರೀತಿ ರೊಮ್ಯಾನ್ಸ್ ಸನ್ನಿವೇಶಗಳೂ ಕೂಡಾ ಇದ್ದಾವಂತೆ. ಅದಕ್ಕಾಗಿ ಟಾಲಿವುಡ್ಡಿನ ಅನೇಕ ನಟಿಯರ ಲಿಸ್ಟು ಮಾಡಿಕೊಂಡಿದ್ದ ಅಧಿಕ್, ಒಂದಷ್ಟು ಬಾಲಿವುಡ್ ನಟಿಯರತ್ತಲೂ ಚಿತ್ತ ಹರಿಸಿದ್ದರು. ಆದರೆ, ಕಥೆ ಮತ್ತು ಪಾತ್ರಕ್ಕೆ ಶ್ರೀನಿಧಿ ಶೆಟ್ಟಿ ಮಾತ್ರವೇ ಸರಿ ಹೊಂದುತ್ತಾರೆಂಬ ನಿರ್ಧಾರಕ್ಕೆ ಬಂದಿರುವ ಅಧಿಕ್ ಫೈನಲ್ ಮಾಡಿದ್ದಾರಂತೆ. ಈಗಾಗಲೇ ಶ್ರೀನಿಧಿ ಕೂಡಾ ಇದಕ್ಕೆ ಒಪ್ಪಿಗೆ ಸೂಚಿಸಿಯಾಗಿದೆ. ಕೆಜಿಎಫ್ ನಂತರದಲ್ಲಿ ಸದರಿ ಚಿತ್ರದ ಮೂಲಕ ಮತ್ತೊಂದು ಪುಷ್ಕಳ ಗೆಲುವು ದಕ್ಕೀತೆಂಬ ನಿರೀಕ್ಷೆ ಮಂಗಳೂರು ಹುಡುಗಿಗಿದ್ದ ಹಾಗಿದೆ!