ಖ್ಯಾತ ನಿರ್ದೇಶಕ ತ್ರಿವಿಕ್ರಮ್ ರಾಮ್ ಚರಣ್ ಜೊತೆಗಿನ ಸಿನಿಮಾಕ್ಕಾಗಿ ತಯಾರಿ ನಡೆಸುತ್ತಿದ್ದಾರೆ… ಹೀಗೊಂದು ಸುದ್ದಿ ಕಳದ ವರ್ಷದಿಂದಲೇ ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿತ್ತು. ಆದರೆ, ರಾಮ್ ಚರಣ್ ಆಗಲಿ, ತ್ರಿವಿಕ್ರಮ್ ಆಗಲಿ ಈ ಬಗ್ಗೆ ಯಾವ ಸ್ಪಷ್ಟೀಕರಣವನ್ನೂ ಕೂಡಾ ಕೊಟ್ಟಿರಲಿಲ್ಲ. ಆದರೆ, ರಾಮ್ ಚರಣ್ ಪೆಡ್ಡಿ ಸಿನಿಮಾದಲ್ಲಿ ನಟಿಸುವ ಸುದ್ದಿ ಹೊರಬಿದ್ದಾಗಲೇ ಎಲ್ಲವೂ ಅದಲು ಬದಲಾದ ಸೂಚನೆ ಸಿಕ್ಕಿತ್ತು. ಇದೇ ಹೊತ್ತಿನಲ್ಲಿ ತ್ರಿವಿಕ್ರಮ್ ಕಡೆಯಿಂದಲೂ ಒಂದಷ್ಟು ವಿಚಾರಗಳು ಜಾಹೀರಾಗಿವೆ. ಅಲ್ಲಿಗೆ ಇವರಿಬ್ಬರ ಕಾಂಬಿನೇಷನ್ನಿನ ಸಿನಿಮಾ ಸದ್ಯಕ್ಕಿಲ್ಲ ಅಂತೊಂದು ಸ್ಪಷ್ಟ ಸಂದೇಶ ತಣ್ಣಗೆ ರವಾನೆಯಾದಂತಾಗಿದೆ!
ನಿರ್ದೇಶಕ ತ್ರಿವಿಕ್ರಮ್ ಆಪ್ತ ನಿರ್ಮಾಪಕ ನಾಗವಂಶಿ ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಮಹತ್ವದ ವಿಚಾರವೊಂದನ್ನು ಹರಿಯಬಿಟ್ಟಿದ್ದಾರೆ. ವೆಂಕಟೇಶ್ ಮತ್ತು ಜ್ಯೂನಿಯರ್ ಎನ್ಟಿಆರ್ ಜೊತೆಗಿನ ಸಿನಿಮಾ ಘೋಷಣೆ ಮಾಡಿರುವ ನಾಗವಂಶಿ, ಆ ಎರಡೂ ಸಿನಿಮಾಗಳನ್ನು ತ್ರಿವಿಕ್ರಮ್ ನಿರ್ದೇಶನ ಮಾಡಲಿದ್ದಾರೆಂದು ಹೇಳಿಕೊಂಡಿದ್ದಾರೆ. ಈ ಎರಡೂ ಸಿನಿಮಾಗಳಿಗೆ ಈಗಾಗಲೆ ತಯಾರಿ ನಡೆಯುತ್ತಿರೋ ವಿಚಾರವನ್ನೂ ಕೂಡಾ ಜಾಹೀರು ಮಾಡಿದ್ದಾರೆ. ಇದರಲ್ಲಿ ವೆಂಕಟೇಶ್ ಜೊತೆಗಿನ ಚಿತ್ರ ತಕ್ಷಣವೇ ಶುರುವಾಗಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆ ಬಗೆಗಿನ ಅಧಿಕೃತ ಮಾಹಿತಿ ಹೊರಬೀಳಲಿದೆ.
ಇತ್ತ ರಾಮ್ ಚರಣ್ ಧ್ಯಾನವೆಲ್ಲ ಪೆಡ್ಡಿ ಸುತ್ತ ಗಿರಕಿ ಹೊಡೆಯುತ್ತಿದೆ. ಅದಾಗಲೇ ರಾಮ್ ಚರಣ್ ತನ್ನ ಮುಂದಿನ ಚಿತ್ರಕ್ಕೂ ತಯಾರಿ ಆರಂಭಿಸಿದ್ದಾರೆ. ಆ ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡೋದು ಪಕ್ಕಾ. ಸುಕುಮಾರ್ ಪುಷ್ಪಾ೨ ಸರಣಿಯ ನಂತರ ಸುದೀರ್ಘವಾದ ಬ್ರೇಕ್ ತೆಗೆದುಕೊಂಡಿದ್ದಾರೆ. ಒಂದು ಹಂತದಲ್ಲಿ ಪುಷ್ಪಾ೩ಗಾಗಿ ಅಣಿಯಾಗಿದ್ದ ಸುಕುಮಾರ್, ಅದಕ್ಕೂ ಮುನ್ನ ರಾಮ್ ಚರಣ್ ಜೊತೆಗೆ ಸಿನಿಮಾ ಮಾಡಲು ಮನಸು ಮಾಡಿದ್ದಾರೆ. ಈ ಸುಕುಮಾರ್ ಕೊಂಚ ನಿಧಾನಗತಿಯ ಆಸಾಮಿ. ಹೊಸಾ ಸಿನಿಮಾ ಶುರು ಮಾಡಲು ಆತ ಭಾರೀ ಸಮಯ ತೆಗೆದುಕೊಳ್ಳುತ್ತಾರೆ. ಸಿನಿಮಾ ಆರಂಭವಾದರೂ ಮುಖ್ಯ ವಿಚಾರಗಳನ್ನೇ ನಗಣ್ಯವಾಗಿಸಿ ಒಂದಿಡೀ ಚಿತ್ರತಂಡವನ್ನು ಕಾಡುತ್ತಾರೆ. ರಾಮ್ ಚರಣ್ ಜೊತೆಗಿನ ಚಿತ್ರದಲ್ಲಾದರೂ ಅದು ಸರಿಯಾಗಬಹುದಾ?