ಬಿಗ್ ಬಾಸ್ ಸೀಸನ್ 10ರ (biggboss season 10) ಬಗ್ಗೆ ಅದ್ಯಾರಿಗೂ ಕೂಡಾ ಅಂಥಾ ನಿರೀಕ್ಷೆಗಳಿದ್ದಂತಿಲ್ಲ. ಅಷ್ಟಕ್ಕೂ, ಎಲ್ಲ ಕೌತುಕ, ನಿರೀಕ್ಷೆಗಳೂ ಕೂಡಾ ಎರಡ್ಮೂರು ಸೀಜನ್ನುಗಳ ಹೊತ್ತಿಗೆಲ್ಲ ಸವೆದು ಹೋಗಿದ್ದವು. ಈ ಬಾರಿ ಹತ್ತನೇ ಸೀಜನ್ನು ಶುರುವಾಗಿ ವಾರವೊಂದು ಮಗುಚಿಕೊಂಡಿದೆ. ಇನ್ನೇನು ಶನಿವಾರ ಬಂದರೆ ಕಿಚ್ಚನ (kiccha sudeep) ಪಂಚಾಯ್ತಿ ಎಂಬ ಮೆಲೋಡ್ರಾಮಾ ನಡೆಯುತ್ತೆ. ಸಾಹೇಬರು ಸಾವಕಾಶವಾಗಿ ಒಂದು ಸಲ ದೊಡ್ಡಿಯೊಳಗಿರುವ ಚಿತ್ರವಿಚಿತ್ರ ಪ್ರಾಣಿಗಳ ಮೈ ಸವರುತ್ತಾರೆ. ಯಾರನ್ನೋ ಕಿಂಡಲ್ಲು ಮಾಡಿ ಮೀಸೆಯಡಿಯಲ್ಲಿ ಮಿಣ್ಣಗೆ ನಗುತ್ತಾರೆ. ಮತ್ತು ಸರಿಕಟ್ಟಾದ ಮಿಕಗಳು ಸಿಕ್ಕರೆ ಒಂದಷ್ಟು ರುಬ್ಬಿ, ಜುಟ್ಟು ನೀವಿಕೊಂಡು ಗಾಯಬ್ ಆಗ್ತಾರೆ. ಅಲ್ಲಿಗೆ ವಾರವೊಂದರ ಕರ್ಮಕಥೆ ಕಾಲೆತ್ತಿಕೊಳ್ಳುತ್ತೆ!
ಈ ಸಾಲಿಯೂ ಸ್ಪರ್ಧಿಗಳು ಬದಲಾಗಿದ್ದಾರಷ್ಟೇ; ಆದರೆ, ಸ್ಪರ್ಧೆಯ ವಿಚಾರದ ಏಕತಾನತೆಯನ್ನು ದಾಟಿಕೊಳ್ಳೋದರಲ್ಲಿ ಬಿಗ್ ಬಾಸು ಎಡವಿದ್ದಾರೆ. ಅದೇನೇ ಪೋಸು ಕೊಟ್ಟರೂ, ಅದೆಷ್ಟೇ ಮ್ಯಾನೇಜು ಮಾಡಲು ಪ್ರಯತ್ನಿಸಿದರೂ ಹುಳುಕುಗಳನ್ನು ಮುಚ್ಚಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂಥಾದ್ದರ ನಡುವೆಯೂ ಈ ಸೀಜನ್ನು ಕೊಂಚ ಕಳೆಗಟ್ಟಲು ಕಾರಣವಾದ ಕೆಲವೇ ಕೆಲ ಸ್ಪರ್ಧಿಗಳಿದ್ದಾರೆ. ಅಂಥವರ ಸಾಲಿನಲ್ಲಿ ನೀತು ವನಜಾಕ್ಷಿ ನಿಜಕ್ಕೂ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇಂಥಾ ಅಪರೂಪದ ವ್ಯಕ್ತಿತ್ವವನ್ನು ಆಯ್ಕೆ ಮಾಡಿಕೊಂಡ ವಿಚಾರದಲ್ಲಿ ಬಿಗ್ ಬಾಸ್ ಆಯೋಜಕರನ್ನು ಪ್ರಶಂಸಿಸಲೇ ಬೇಕಾಗುತ್ತದೆ. ಯಾಕೆಂದರೆ, ಇಂಥಾ ನಡೆಗಳು ಮಡಿವಂತಿಕೆಯಾಚೆ ನಿಂತು, ಪ್ರಾಕೃತಿಕ ಸತ್ಯಗಳನ್ನು ಅರಿಯಲು, ಅಂಥಾದ್ದನ್ನು ಗೌರವಿಸಲು ಜನರನ್ನು ಪ್ರೇರೇಪಿಸುತ್ತದೆ.
ನೀತು ವನಜಾಕ್ಷಿ ಹೈಸ್ಕೂಲು ತಲುಪಿಕೊಳ್ಳುವವರೆಗೂ ಗಂಡಾಗಿ ಗುರುತಿಸಿಕೊಂಡಿದ್ದವರು. ಆ ಕಾಲಘಟ್ಟದಲ್ಲಿ ತಾನು ಗಂಡಲ್ಲ ಹೆಣ್ಣು ಎಂಬ ವಿಚಿತ್ರ ಭಾವನೆಗಳು ಬರಲಾರಂಭಿಸಿದರೆ, ದೈಹಿಕವಾಗಿಯೂ ಅಂಥಾ ಗುಣ ಲಕ್ಷಣಗಳನ್ನು ಕಾಣಲಾರಂಭಿಸಿದರೆ ಅದರಷ್ಟು ಯಾತನೆಯ ಸಂಗತಿ ಬೇರ್ಯಾವುದೂ ಇಲ್ಲ. ಯಾಕೆಂದರೆ, ಅದನ್ನು ಯಾರೊಂದಿಗೂ ಹೇಳಿಕೊಳ್ಳುವಂತಿಲ್ಲ. ವಿಶೇಷವೆಂದರೆ ಆ ಕಾಲಕ್ಕೆ ಮಂಜುನಾಥನಾಗಿದ್ದ ನೀತುವಿನ ಹೆತ್ತವರು ಮಗನ ಸಂಕಟಗಳಿಗೆ ಸ್ಪಂದಿಸಿದ್ದರು. ಮಗನೆಂದುಕೊಂಡಿದ್ದವನು ಅವನಲ್ಲ, ಅವಳೆಂಬ ಸತ್ಯ ಆಘಾತ ಹುಟ್ಟಿಸಿದರೂ ಅವುಡುಗಚ್ಚಿ ತಡೆದುಕೊಂಡಿದ್ದರು. ಕಡೆಗೂ ಈ ಸಮಾಜದ ವಕ್ರ ಬುದ್ಧಿಯನ್ನು ಮೀರಿಕೊಂಡು, ತನ್ನದೇ ಉದ್ಯಮ ನಡೆಸುತ್ತಾ ನೆಲೆ ಕಂಡುಕೊಂಡ ನೀತುವಿನದ್ದು ನಿಜಕ್ಕೂ ಸ್ಫೂರ್ತಿಯ ಕಥೆ.
ಇಂಥಾ ನೀತು ಬಿಗ್ ಬಾಸ್ ತಲುಪಿಕೊಂಡು, ಅಲ್ಲಿ ತನ್ನ ನಡವಳಿಕೆ ಮತ್ತು ಆಟದ ಜೋಷ್ ಮೂಲಕ ಪ್ರೇಕ್ಷಕರ ಪ್ರೀತಿ ಗಳಿಸಿಕೊಂಡಿದ್ದಾರೆ. ಈ ಕ್ಷಣಕ್ಕೆ ಬಿಗ್ ಬಾಸ್ ಶೋನಲ್ಲಿ ನೀತು ಇರುವಿಕೆಗೆ ವಿಶೇಷ ಪ್ರಧಾನ್ಯತೆ ಸಿಗಲೂ ಕಾರಣವಿದೆ. ಜಗತ್ತು ಎಷ್ಟೇ ಮುಂದುವರೆದಿದ್ದರೂ ಕೂಡಾ ಈ ಸಮಾಜ ಮಡಿವಂತಿಕೆಯಿಂದ ಆಚೆ ಬಂದಿಲ್ಲ. ಗಂಡು ಹೆಣ್ಣಾಗುವುದೂ ಸೇರಿದಂತೆ, ಒಂದಷ್ಟು ಪ್ರಾಕೃತಿಕ ಪಲ್ಲಟಗಳನ್ನು ಗೇಲಿ ಮಾಡೋ ಮನಃಸ್ಥಿತಿ ಜನರಲ್ಲಿದೆ. ಈಗ ಗೃಹ ಸಚಿವರಾಗಿರುವ ಪರಮೇಶ್ವರ್ ಮಗ ಲಿಂಗ ಪರಿವರ್ತನೆ ಮಾಡಿಕೊಂಡಾಗಲೂ ಜನ ಅಸಹ್ಯವಾಗಿ ಮಾತಾಡಿಕೊಂಡಿದ್ದಿದೆ. ಇಲ್ಲಿನ ಮೆಂಟಾಲಿಟಿ ಹೇಗಿದೆ ಎಂದರೆ, ಹುಡುಗನೊಂದಿಗೇ ಸರಸವಾಡಿದ ಲಿಂಬಾವಳಿಯಂಥವರನ್ನು ಸಂಭಾವಿತರೆಂದುಕೊಳ್ಳುತ್ತಾರೆ. ಜಾರಕಿಹೊಳಿಯಂಥಾ ಮುದಿ ಕಾಮುಕರನ್ನು ಗಣ್ಯರಂತೆ ಕಾಣುತ್ತೆ. ನರ್ಸ್ ವಿಚಾರದಲ್ಲಿ ಮಾನ ಕಳಕೊಂಡಿದ್ದ ಹೊನ್ನಾಳ್ಳಿ ಹೋರಿಯೂ ಇಲ್ಲಿ ಹೀರೋ ಆಗೋದಿದೆ. ಆದರೆ, ನೀತುವಿನಂಥವರು ಮಾತ್ರ ತಮ್ಮದಲ್ಲದ ತಪ್ಪಿಗೆ ಲೋಕನಿಂದಿತರಂತೆ ಬದುಕಬೇಕಾಗಿ ಬರುತ್ತದೆ. ನೀತು ಕಾರಣದಿಂದ ಆ ಮನಃಸ್ಥಿತಿ ಬದಲಾದರೆ, ಆ ಮಟ್ಟಿಗೆ ಬಿಗ್ ಬಾಸ್ ಶೋವನ್ನು ಸಹಿಸಿಕೊಳ್ಳಬಹುದೇನೋ…