ಕರ್ನಾಟಕದಲ್ಲಿ ಕನ್ನಡ ಚಿತ್ರಗಳೇ ನಾನಾ ರೀತಿಯ ಸಮಸ್ಯೆಗಳ ತಿರುಗಣಿಗೆ ಸಿಕ್ಕು ನಜ್ಜುಗುಜ್ಜಾಗೋದೇನು ಹೊಸತಲ್ಲ. ಒಂದೆಡೆ ಚೆಂದಗೆ ಪ್ರದರ್ಶನ ಕಾಣುವ ಸಿನಿಮಾಗಳನ್ನು ಕಿತ್ತೆಸೆದು, ಪರಭಾಷಾ ಚಿತ್ರಗಳಿಗೆ ಅನುವು ಮಾಡಿ ಕೊಡುವ ದ್ರೋಹ, ಇನ್ನೊಂದೆಡೆ ವಾರವೊಂದಕ್ಕೆ ತೆರೆಗಾಣುತ್ತಿರುವ ಡಜನ್ನುಗಟ್ಟಲೆ ಸಿನಿಮಾಗಳ ನಡುವೆ ಪ್ರೇಕ್ಷಕರನ್ನು ಸೆಳೆದುಕೊಳ್ಳುವ ಸರ್ಕಸ್ಸು… ಇದೆಲ್ಲದರಿಂದಾಗಿ ಸಿನಿಮಾ ಮಂದಿ ಅಕ್ಷರಶಃ ಹೈರಾಣಾಗಿ ಬಿಟ್ಟಿದ್ದಾರೆ. ಇಂಥಾ ಸಮಸ್ಯೆಯ ನಾನಾ ಮುಖಗಳಿಗೆ ತಾಜಾ ಉದಾಹರಣೆಯಾಗಿ ಕಾಣಿಸುತ್ತಿರುವ ಚಿತ್ರ ಕೆರೆಬೇಟೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾ ಸಕಾರಾತ್ಮಕ ವಾತಾವರಣ ಸೃಷ್ಟಿಸಿತ್ತು. ಆದರೆ, ಬಿಡುಗಡೆಯಾದ ನಂತರ ಒಳ್ಳೆ ವಿಮರ್ಶೆ, ಮೆಚ್ಚುಗೆಗಳಾಚೆಗೂ ನೆಲೆಯೂರಿ ನಿಲ್ಲುವುದು ಕೊಂಚ ಕಷ್ಟವಾಗಿ ಬಿಟ್ಟಿತ್ತು.
ಕಡೆಗೂ ಚಿತ್ರತಂಡದ ಅವ್ಯಾಹತ ಪರಿಶ್ರಮ, ಚಿತ್ರರಂಗದ ನಟ ನಟಿಯರ ಬೆಂಬಲದ ಕಾರಣದಿಂದಾಗಿ ಎರಡನೇ ವಾರದಲ್ಲಿ ಕೆರೆಬೇಟೆ ಗಣನೀಯವಾಗಿ ಚೇತರಿಸಿಕೊಂಡಿದೆ. ಅಷ್ಟಕ್ಕೂ ರಾಜ್ ಗುರು ನಿರ್ದೇಶನದ, ಗೌರಿಶಂಕರ್ ನಾಯಕನಾಗಿ ನಟಿಸಿರುವ ಈ ಚಿತ್ರ ನೋಡುಗರನ್ನೆಲ್ಲ ಸೆಳೆದುಕೊಂಡಿತ್ತು. ಎಲ್ಲ ದಿಕ್ಕುಗಳಿಂದಲೂ ಸದಭಿಪ್ರಾಯವೇ ಹೊಮ್ಮಿಕೊಂಡಿತ್ತು. ಅಷ್ಟಿದ್ದರೂ ಕೂಡಾ ನಿರೀಕ್ಷಿತ ಪ್ರಮಾಣದಲ್ಲಿ ಚಿತ್ರಮಂದಿರಗಳು ತುಂಬದಿದ್ದಾಗ ಸಹಜವಾಗಿಯೇ ಚಿತ್ರತಂಡ ಕೊಂಚ ಕಸಿವಿಸಿಗೀಡಾಗಿತ್ತು. ಅದೇ ಹಂತದಲ್ಲಿ ಒಂದಷ್ಟು ನಟ ನಟಿಯರು ಕೆರೆಬೇಟೆಯ ಅಖಾಡಕ್ಕಿಳಿದದ್ದೇ ಒಟ್ಟಾರೆ ಚಿತ್ರಣ ಹಂತ ಹಂತವಾಗಿ ಬದಲಾಗುತ್ತಾ ಬಂದಿದೆ.
ಆರಂಭದಿಂದಲೇ ಕಿಚ್ಚಾ ಸುದೀಪ್ ಸೇರಿದಂತೆ ಅನೇಕರು ಕೆರೆಬೇಟೆಗೆ ಬೆಂಬಲ ನೀಡಿದ್ದರು. ಬಿಡುಗಡೆಯಾದ ನಂತರದಲ್ಲಿ ಧ್ರುವ ಸರ್ಜಾ, ನೆನಪಿರಲಿ ಪ್ರೇಮ್ ಮುಂತಾದವರು ಈ ಚಿತ್ರದ ಬಗ್ಗೆ ಒಳ್ಳೆ ಮಾತಾಡಿದ್ದರು. ಬಳಿಕ ಖುದ್ದು ಧ್ರುವ ಸರ್ಜಾ, ಡಾರ್ಲಿಂಗ್ ಕೃಷ್ಣ- ಮಿಲನಾ ದಂಪತಿ, ಚೈತ್ರಾ ಆಚಾರ್, ಅಜೇಯ್ ರಾವ್, ಚೇತನ್ ಅಹಿಂಸಾ ಮುಂತಾದವರು ಕೆರೆಬೇಟೆಯನ್ನು ವೀಕ್ಷಿಸಿ ಥ್ರಿಲ್ ಆಗಿದ್ದಾರೆ. ಈ ಸಿನಿಮಾ ಮೂಡಿ ಬಂದಿರುವ ರೀತಿಯ ಬಗ್ಗೆ ಪ್ರಾಮಾಣಿಕ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಇದೆಲ್ಲದರಿಂದಾಗಿ, ಎರಡನೇ ವಾರದಲ್ಲಿ ಆಶಾದಾಯಕ ವಾತಾವರಣವೊಂದು ಮೊಳೆತುಕೊಂಡಿದೆ. ಇದೀಗ ಕೆರೆಬೇಟೆ ಅಂದುಕೊಂಡಂತೆಯೇ ಹಿಟ್ ಆಗುವ ಭರವಸೆ ಚಿತ್ರತಂಡದಲ್ಲಿ ಮತ್ತೆ ಮಿರುಗಲಾರಂಭಿಸಿದೆ.
ಜೈಶಂಕರ್ ಪಟೇಲ್ ಜಿನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರ ನಿಜಕ್ಕೂ ಅಪರೂಪದ ಕಥಾನಕವನ್ನೊಳಗೊಂಡಿದೆ. ಮಲೆನಾಡ ಬದುಕು, ಭಾಷೆಯನ್ನು ಇಷ್ಟೊಂದು ಪರಿಣಾಮಕಾರಿಯಾಗಿ ಬಳಸಿಕೊಂಡ ಸಿನಿಮಾಗಳು ವಿರಳ. ಆ ವಿಚಾರದಲ್ಲಿ ಮಾತ್ರವಲ್ಲದೇ ಕಥೆ, ನಿರೂಪಣೆ, ನಟನೆ ಸೇರಿದಂತೆ ಎಲ್ಲದರಲ್ಲಿಯೂ ಕೆರೆಬೇಟೆಗೆ ಫುಲ್ ಮಾಕ್ರ್ಸ್ ದಕ್ಕುತ್ತದೆ. ದೇಸೀ ಆಚರಣೆಯೊಂದರ ಹಿನ್ನೆಲೆಯಲ್ಲಿ ಅರಳಿಕೊಂಡ ಮಲೆನಾಡ ಗರ್ಭದ ಕಥಾನಕ ಕೆರೆಬೇಟೆ. ಯಾವುದೇ ಒಳ್ಳೆ ಪ್ರಯತ್ನಗಳನ್ನು ಯಾವ ಕಾರಣಕ್ಕೂ ಸೋಲದಂತೆ ಕಾಪಾಡಿಕೊಳ್ಳುವ ಔದಾರ್ಯ ಖಮಡಿತವಾಗಿಯೂ ಕನ್ನಡದ ಪ್ರೇಕ್ಷಕರಲ್ಲಿದೆ. ಅದು ಕೆರೆಬೇಟೆಯ ಮೂಲಕ ಮತ್ತೊಮ್ಮೆ ಸಾಬೀತಾಗುತ್ತಿದೆ. ಮೂರನೇ ವಾರದತ್ತ ಹೊರಳಿಕೊಂಡಿರುವ ಈ ಹೊತ್ತಿನಲ್ಲಿ ಕೆರೆಬೇಟೆಯ ಖದರ್ ಮತ್ತಷ್ಟು ಜೋರಾಗುವ ಸಾಧ್ಯತೆಗಳಿದ್ದಾವೆ!