ಸಿನಿಮಾವೊಂದು ಆರಂಭವಾದ ಬಳಿಕ ಕ್ರಿಯಾಶೀಲತೆಯ ಹಾದಿಯಲ್ಲಿಯೇ ಪ್ರೇಕ್ಷಕರನ್ನು ಹಂತ ಹಂತವಾಗಿ ಸೆಳೆಯೋದಿದೆಯಲ್ಲಾ? ಅದು ನಿಜಕ್ಕೂ ಸವಾಲಿನ ಸಂಗತಿ. ಈ ನಿಟ್ಟಿನಲ್ಲಿ ನೋಡ ಹೋದರೆ, (arun amuktha) ಅರುಣ್ ಅಮುಕ್ತ ನಿರ್ದೇಶನ ಮಾಡಿರುವ (vidyarthi vidyarthiniyare) `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಹಂತ ಹಂತವಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಾ ಬಂದ ರೀತಿ ಮೆಚ್ಚಿಗೆಯಾಗುವಂತಿದೆ. ಹಾಗೆ ಸಾಗಿಬಂದಿರುವ ಈ ಸಿನಿಮಾವೀಗ ಅತ್ಯಂತ ವೇಗವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಕುಂಬಳ ಕಾಯಿ ಒಡೆದ ನಂತರದಲ್ಲಿ ಮುಂದಿನ ಕೆಲಸಗಳಿಗೆ ನಿಖರ ರೂಪುರೇಷೆ ಹಾಕಿಕೊಂಡಿರುವ ಚಿತ್ರತಂಡವೀಗ ಪತ್ರಿಕಾಗೋಷ್ಠಿಯ ಮೂಲಕ ಮಾಧ್ಯಮವನ್ನು ಮುಖಾಮುಖಿಯಾಗಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದೆ.
ನಾಯಕ (chandan shetty) ಚಂದನ್ ಶೆಟ್ಟಿ ಸೇರಿದಂತೆ ಚಿತ್ರತಂಡವೆಲ್ಲ ಹಾಜರಿದ್ದ ಈ ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಬಗೆಗಿದ್ದ ಒಂದಷ್ಟು ಕುತೂಹಲ ತಣಿಯುವಂಥಾ ವಿವರಗಳು ಜಾಹೀರಾಗಿವೆ. ಇದರಲ್ಲಿ ಪ್ರಧಾನ ಪಾತ್ರಗಳನ್ನು ನಿರ್ವಹಿಸಿರುವ ಪ್ರಶಾಂತ್ ಸಂಬರ್ಗಿ, ಹಿರಿಯ ನಟಿ ಭವ್ಯ, ಸುನೀಲ್ ಪುರಾಣಿಕ್ ಮುಂತಾದವರು ತಮ್ಮ ಪಾತ್ರ ಮತ್ತು ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಒಂದಷ್ಟು ಪಾತ್ರಗಳು ರಿವೀಲ್ ಆಗಿದ್ದರೂ ಕೂಡಾ ಒಟ್ಟಾರೆ ಅಷ್ಟೂ ಪಾತ್ರಗಳ ಬಗ್ಗೆ ಪ್ರೇಕ್ಷಕರಲ್ಲೊಂದು ಕುತೂಹಲ ಇದ್ದೇ ಇತ್ತು. ಪಾತ್ರ ವರ್ಗವನ್ನು ಪರಿಚಯಿಸುವಂಥಾ ವೀಡಿಯೋ ಹಾಗೂ, ತಾಂತ್ರಿಕ ವರ್ಗದ ವೀಟಿ ಪ್ರದಶೀಸುವ ಮೂಲಕ ಅದನ್ನು ಚಿತ್ರತಂಡ ತಣಿಸಿದೆ.
ಇದೇ ಸಂದರ್ಭದಲ್ಲಿ ಈ ಸಿನಿಮಾದ ಕಾರ್ಯಕಾರಿ ನಿರ್ಮಾಪಕರಾದ ಶ್ರೀಕಾಂತ್ ಜಿ ಕಶ್ಯಪ್ ಒಟ್ಟಾರೆ ಚಿತ್ರೀಕರಣದ ಬಗೆಗಿನ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರನ್ವಯ ಹೇಳೋದಾದರೆ, ನಿರ್ದೇಶಕ ಅರುಣ್ ಅಮುಕ್ತ ಅಂದುಕೊಂಡಂತೆಯೇ ಅಚ್ಚುಕಟ್ಟಾಗಿ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಬೆಂಗಳೂರು, ಮೂಸೂರು, ಮಂಗಳೂರು, ಚಿಕ್ಕಮಗಳಳೂರು ಮುಂತಾದೆಡೆಗಳಲ್ಲಿ ಐವತ್ತು ದಿನಗಳ ಕಾಲ ಬಿಡುವಿರದಂತೆ ಚಿತ್ರೀಕರಣ ನಡೆಸಲಾಗಿದೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳಿಗೆ ಚಾಲನೆ ಸಿಕ್ಕಿದೆ. ಜೂನ್ ತಿಂಗಳೊಳಗೆ ಅದೆಲ್ಲವನ್ನೂ ಮುಗಿಸಿಕೊಂಡು, ಲೀಕಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದಾದ ನಂತರದಲ್ಲಿ ತೆರೆಗೆ ತರಲು ಚಿತ್ರತಂಡ ತೀರ್ಮಾನಿಸಿದೆ.
ಇನ್ನುಳಿದಂತೆ, ರ್ಯಾಪರ್ ಆಗಿ ಒಂದಷ್ಟು ಪ್ರಸಿದ್ಧಿ ಪಡೆದುಕೊಂಡಿದ್ದ ಚಂದನ್ ಶೆಟ್ಟಿ ಇದೀಗ ನಾಯಕನಾಗಿಯೂ ಅವತರಿಸಿದ್ದಾರೆ. ಈಗಾಗಲೇ ಒಂದೆರಡು ಸಿನಿಮಾಗಳಲ್ಲಿ ನಾಯಕಮಮನಾಗಿ ನಟಿಸಿರುವ ಚಂದನ್, ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದಲ್ಲಂತೂ ಸವಾಲಿನ ಪಾತ್ರವನ್ನು ಎದುರುಗೊಂಡಿದ್ದಾರೆ. ಇಲ್ಲಿ ಅವರ ಪಾತ್ರಕ್ಕೆ ಮೂರು ಶೇಡುಗಳಿವೆಯಂತೆ. ಒಂದಕ್ಕೊಂದು ಭಿನ್ನವಾಗಿರುವ ಅಷ್ಟೂ ಪಾತ್ರಗಳನ್ನು ಆವಾಹಿಸಿಕೊಳ್ಳುವ ಸಲುವಾಗಿ ತಿಂಗಳುಗಟ್ಟಲೆ ತಾಲೀಮು ನಡೆಸುವ ಮೂಲಕ ತಯಾರಾಗಿದ್ದರಂತೆ. ಕಡೆಗೂ ಆ ಪಾತ್ರವನ್ನು ಚಂದನ್ ಚೆಂದಗೆ ನಿರ್ವಹಿಸಿದ್ದಾರೆಂಬಂಥಾ ಮೆಚ್ಚುಗೆ ಚಿತ್ರತಂಡದಲ್ಲಿದೆ. ಈ ಬಗ್ಗೆ ಇದೀಗ ಜಾಹೀರಾಗಿರುವ ಒಂದಷ್ಟು ಅಂಶಗಳನ್ನು ಆಧರಿಸಿ ಹೇಳೋದಾದರೆ, ನಾಯಕನಾಗಿ ರೂಪಾಂತರಗೊಂಡಿರುವ ಚಂದನ್ ಪಾಲಿಗೆ ಈ ಚಿತ್ರ ಹೊಸಾ ಆವೇಗ ನೀಡುವ ಸಾಧ್ಯತೆಗಳಿದ್ದಾವೆ!
ಅರುಣ್ ಅಮುಕ್ತ ಅತ್ಯಂತ ಆಸ್ಥೆಯಿಂದ ಈ ಚಿತ್ರವನ್ನು ನಿರ್ದೇಸನ ಮಾಡಿದ್ದಾರೆ. ತಾರಾ ಬಳಗ, ತಾಂತ್ರಿಕತೆ ಸೇರಿದಂತೆ ಎಲ್ಲ ದಿಕ್ಕಿನಲ್ಲಿಯೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಭಿನ್ನವಾಗಿ ಮೂಡಿ ಬಂದಿವೆ ಎಂಬುದು ಚಿತ್ರತಂಡದ ಭರವಸೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ಮನೋಜ್ ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.