ಪೂಜಾ ಹೆಗ್ಡೆಯಂಥಾ ಸ್ಟಾರ್ ನಟಿಯರೇ ಅವಕಾಶ ಸಿಗದೆ ಮಂಕಾಗಿಬಿಟ್ಟಿದ್ದಾರೆ. ಅಷ್ಟಕ್ಕೂ, ಒಂದು ಉತ್ತುಂಗದ ಸ್ಥಿತಿಯ ನಂತರ, ಪಾತಾಳ ಖಚಿತ ಎಂಬ ವಿಚಾರ ಎಲ್ಲ ನಟ ನಟಿಯರ ಪಾಲಿಗೂ ಬೆಂಬಿಡದ ವಾಸ್ತವ. ಒಂದು ಘಟ್ಟದಲ್ಲಿ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣಗೂ ಅಂಥಾದ್ದೇ ಸ್ಥಿತಿ ಎದುರಾಯ್ತು ಎಂಬಂಥಾ ವಾತಾವರ್ಣ ಸೃಷ್ಟಿಯಾಗಿತ್ತು. ಯಾಕೆಂದರೆ, ಏಕಾಏಕಿ ಮುಗ್ಗರಿಸಿದ್ದ ರಶ್ಮಿಕಾ ಅಂಥಾದ್ದೊಂದು ಪಾತಾಳದ ಅಂಚಿಗೆ ಬಂದು ನಿಂತಿದ್ದಳು. ಆದರೆ, ಅಚ್ಚರಿಯೆಂಬಂತೆ ಸಾವರಿಸಿಕೊಂಡಿದ್ದ ಈಕೆಯೀಗ ಮತ್ತೆ ಫಾರ್ಮಿಗೆ ಮರಳಿದಂತಿದೆ. ರಶ್ಮಿಕಾ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವಾಗಲೇ, ಆಕೆ ನಟಿಸಿರೋ ಎರಡು ಸಿನಿಮಾಗಳು ಒಂದರ ಹಿಂದೊಂದರಂತೆ ಓಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿವೆ!
ರಶ್ಮಿಕಾ ಮಂದಣ್ಣ ದ ಗರ್ಲ್ ಫ್ರೆಂಡ್ ಎಂಬೊಂದು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಳು. ಮಹಿಳಾ ಪ್ರಧಾನ ಕಥೆ ಹೊಂದಿದ್ದ ಆ ಸಿನಿಮಾ ಇತ್ತೀಚೆಗೆ ತಗೆರೆಗಂಡು ವ್ಯಾಪಕ ಮೆಚ್ಚುಗೆ ಗಳಿಸಿಕೊಂಡಿತ್ತು. ಒಂದು ಹಂತದಲ್ಲಿ ರಶ್ಮಿಕಾಳ ನಟನೆ ಅಷ್ಟಕ್ಕಷ್ಟೇ ಅಂತ ವಿಮರ್ಶೆ ಮಾಡುತ್ತಿದ್ದವರೂ ಕೂಡಾ ಚಕಿತಗೊಳ್ಳುವಂತೆ ನಟಿಸೋ ಮೂಲಕ ರಶ್ಮಿಕಾ ಪ್ಯಾನಿಂಡಿಯಾ ಮಟ್ಟದಲ್ಲಿ ಗಮನ ಸೆಳೆದಿದ್ದಳು. ಇದೊಂದು ಸಿನಿಮಾ ಮೂಲಕವೇ ಈಕೆಯ ಛಾರ್ಮ್ ಇಮ್ಮಡಿಸಿದೆ. ಇಂಥಾ ಸಿನಿಮಾ ಗಳಿಕೆಯಲ್ಲಿಯೂ ಸಹ ಗಣನೀಯ ಸಾಧನೆ ಮಾಡಿದೆ. ಇದೀಗ ದ ಗರ್ಲ್ ಫ್ರೆಂಡ್ ಚಿತ್ರ ಇದೇ ಡಿಸೆಂಬರ್ ಐದರಂದು ಓಟಿಟಿಗೆ ಅಡಿಯಿರಿಸಲು ಮುಹೂರ್ತ ನಿಗಧಿಯಾಗಿದೆ.
ದ ಗರ್ಲ್ ಫ್ರೆಂಡ್ ಓಟಿಟಿಗೆ ಆಗಮಿಸುವ ಎರಡು ದಿನಕ್ಕೆ ಮುಂಚಿತವಾಗಿ ಅಂದರೆ, ಡಿಸೆಂಬರ್ ೨ರಂದು ರಶ್ಮಿಕಾ ನಟನೆಯ ಮತ್ತೊಂದು ಹಿಟ್ ಸಿನಿಮಾ ಥಮಾ ಓಟಿಟಿಗೆ ಎಂಟರಿ ಕೊಡಲಿದೆ. ಹಾಗೆ ನೋಡಿದರೆ, ಥಮಾ ಕೂಡಾ ರಶ್ಮಿಕಾಳ ವೃತ್ತಿ ಬದುಕಿನಲ್ಲಿ ಭಿನ್ನ ಸಿನಿಮಾ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ಈ ಚಿತ್ರದಲ್ಲಿ ರಶ್ಮಿಕಾ ಈ ಹಿಂದೆ ಎಂದೂ ಕಾಣಿಸದಷ್ಟು ಹಾಟ್ ಅವತಾರದಲ್ಲಿ ಮಿಂಚಿದ್ದಳು. ಹಾರರ್ ಶೇಡಿನಲ್ಲಿ ಆಕೆಯ ನಟನೆ ಕೂಡಾ ಪ್ರಶಂಸೆಗೆ ಪಾತ್ರವಾಗಿತ್ತು. ಈ ಚಿತ್ರ ಅಮೇಜಾನ್ ಪೈಂನಲ್ಲಿ ಪ್ರದರ್ಶನ ಕಾಣಲಿದೆ. ಹೀಗೆ ಒಂದರ ಬೆನ್ನಿಗೊಂದರಂತೆ ಹಿಟ್ ಸಿನಿಮಾ ಭಾಗವಾಗುತ್ತಿರೋ ರಶ್ಮಿಕಾ ಸದ್ಯಕ್ಕೆ ತೆಲುಗಿನ ಪ್ಯಾನಿಂಡಿಯಾ ಸಿನಿಮಾ ಮೈಸಾದಲ್ಲಿ ನಟಿಸುತ್ತಲೇ, ಬಾಲಿವುಡ್ಡಲ್ಲಿಯೂ ಬ್ಯುಸಿಯಾಗಿದ್ದಾಳೆ.


