ಕಾಂತಾರ (kanthara) ಚಿತ್ರದ ನಂತರ ಕಡಲಂಚಿನ ದೈವಗಳ ಮಾರುಕಟ್ಟೆ ವ್ಯಾಪ್ತಿ, ಘಟ್ಟದ ಮೇಲೇರಿ ಎತ್ತೆತ್ತಲೋ ವ್ಯಾಪಿಸಿಕೊಂಡಿದೆ. ಅದೆಲ್ಲ ಏನೇ ಇದ್ದರೂ, (kanthara) ಕಾಂತಾರಕ್ಕೆ ಸಿಕ್ಕ ಯಶಸ್ಸಿದೆಯಲ್ಲಾ? ಅದೊಂದು ಸಾರ್ವಕಾಲಿಕ ಅಚ್ಚರಿ. ಸಾಮಾನ್ಯಾಗಿ, ಇಂಥಾದ್ದೊಂದು ಯಶಸ್ವೀ ಸಿನಿಮಾ ತೆರೆಗಂಡ ನಂತರ ಆ ಬಗೆಯದೇ ಒಂದಷ್ಟು ಸಿನಿಮಾಗಳು ರೀಲು ಸುತ್ತಿಕೊಳ್ಳುತ್ತವೆ. ಅದು ಕನ್ನಡ ಚಿತ್ರರಂಗಕ್ಕಂಟಿದ ಶಾಪ. ಕಾಂತಾರಾ ನಂತರ ತುಳುನಾಡ (thulunadu) ದೈವಗಳ ಅಬ್ಬರದ ತುಣುಕಿನೊಂದಿಗೆ ಮತ್ತಷ್ಟು ಚಿತ್ರಗಳು ಮೈಲೇಜು ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿವೆ. ಆದರೆ, `ಆರ’ (aura) ಅಂತೊಂದು ಚಿತ್ರದ ಟ್ರೈಲರ್ ಹೊರ ಬಂದಾಗ, ಅದರಲ್ಲಿ ಭೂತ ಚೇಷ್ಟೆ ಕಾಣಿಸಿದ್ದರೂ ಕೂಡಾ, ಅದರ ಮೇಲೆ ಕಾಂತಾರದ ಛಾಯೆಯಿದೆ ಅನ್ನಿಸಿರಲಿಲ್ಲ. ಅಲ್ಲೊಂದು ಗಟ್ಟಿ ಕಥನದ ಸುಳಿವು ಸಿಕ್ಕಿತ್ತು. ಆರ (aura) ಈಗ ಬಿಡುಗಡೆಗೊಂಡಿದೆ. ಪರದೆಮೇಲೆಕೊಂಡಿರೋದು ಮಾತ್ರ ಕಾಂತಾರದ ಕಳಪೆ ನೆರಳಿನಂಥಾ ಕೃಶ ದೃಷ್ಯಾವಳಿ!
ಈಗಂತೂ ಕನ್ನಡ ಚಿತ್ರರಂಗದಲ್ಲಿ ಕಡಲರಿನ ಪ್ರತಿಭೆಗಳ ಪಾರುಪಥ್ಯ ಜೋರಾಗಿದೆ. ಕಿನಾರೆಯಿಂದೆದ್ದು ಬಂದವರೆಲ್ಲ ಕ್ರಿಯೇಟಿಯನ್ನು ಹೊದ್ದುಕೊಂಡೇ ಹುಟ್ಟಿರುತ್ತಾರೆಂಬಂಥಾ ವಾತಾವರಣವಿದೆ. ರಿಷಭ್ ಶೆಟ್ಟಿ, ರಾಜ್ ಶೆಟ್ಟಿಯಂಥವರೆಲ್ಲ ಅದನ್ನು ನಿಜವಾಗಿಸುತ್ತಲೂ ಇದ್ದಾರೆ. ಹಾಗಿರುವಾಗ `ಆರ’ ಚಿತ್ರದ ಮೂಲಕ ಕೋಸ್ಟಲ್ ಏರಿಯಾದಿಂದೊಂದು ಹೊಸಬರ ತಂಡ ಆಗಮಿಸಿದರೆ, ಅದರ ಬಗ್ಗೆ ಕುತೂಹಲ ಮೂಡದಿರಲು ಸಾಧ್ಯವೇ? ಅದಕ್ಕೆ ಸರಿಯಾಗಿ ಟ್ರೈಲರ್ ಕೊಂಚ ಕಟ್ಟುಮಸ್ತಾಗಿತ್ತಲ್ಲಾ? ಪ್ರೇಕ್ಷಕರ ನಿರೀಕ್ಷೆ ಮೇರೆ ಮೀರಿತ್ತು. ಅದಕ್ಕೆ ಸರಿಯಾಗಿ ಸಿನಿಮಾ ತಂಡದ ಕೆಲ ಭಾಷಣ ಪಟುಗಳು ರಸವತ್ತಾಗಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ಇದೆಲ್ಲದರಿಂದ ಉತ್ತೇಜಿತರಾಗಿ ಸಿನಿಮಾ ಮಂದಿರಕ್ಕೆ ದಾಂಗುಡಿಯಿಟ್ಟವರನ್ನೆಲ್ಲ ಈ ಚಿತ್ರ ಅಕ್ಷರಶಃ ದಂಗುಬಡಿಸಿದೆ.
ಇಲ್ಲೂ ಒಂದು ಕಾಂತಾರದಂಥಾದ್ದೇ ಕಾಡು. ಅದರ ಗರ್ಭದಲ್ಲಿ ಜೀವಿಸುತ್ತಾ, ಆ ಪರಿಸರದಲ್ಲಿರೋ ದೈವವನ್ನೇ ಉಸಿರಾಗಿಸಿಕೊಂಡಿರುವ ಒಂದು ಪಂಗಡ. ಆ ದೈವಸ್ಥಾನವನ್ನು ಪುಡಿಗಟ್ಟಿ, ಮಾಟ ಮಂತ್ರದ ಮೂಲಕ ಆ ಕಾಡಿ ಅನೂಹ್ಯ ಶಕ್ತಿಯನ್ನು ತಮ್ಮದಾಗಿಸಿಕೊಳ್ಳಲು ತಯಾರಾದ ಮತ್ತೊಂದು ಪಂಗಡ. ಆ ಎರಡು ಪಂಗಡಗಳ ನುವಿನ ಕದನಕ್ಕೆ ಶತಮಾನಗಳಷ್ಟು ಹಿಂದಿನ ಐತಿಹ್ಯವಿರುತ್ತೆ. ಅದನ್ನು ಗ್ರಾಫಿಕ್ಸ್ ಮೂಲಕ ಕನೆಕ್ಟ್ ಮಾಡೋ ಪ್ರಯತ್ನವೂ ನಡೆಯುತ್ತದೆ. ಅಲ್ಲಿ ದೈವಾರಾಧಕರ ಮನೆತನವಿರುತ್ತದಲ್ಲಾ? ಅದರ ವಾರಸೂದಾರನಾಗಿರುವ ಹೀರೋ ಒಂದಷ್ಟು ಹೆಣ್ಣಿನ ಗುಣಲಕ್ಷಣಗಳನ್ನು ಹೊಂದಿರುತ್ತಾನೆ. ಅತೀಂದ್ರಿಯರನ್ನು ಹಿಮ್ಮೆಟ್ಟಿಸುವ ಯಾವ ಗುಣಗಳೂ ಆತನಲ್ಲಿರೋದಿಲ್ಲ. ಇಂಥವನನ್ನು ನಡುದಾರಿಯಲ್ಲಿ ನಿಲ್ಲಿಸುವ ಅತೀಂದ್ರಿಯರು ಹೊಡೆದು ಅವಮಾನಿಸಿದ ನಂತರ ಕಥೆ ಮತ್ತೊಂದು ಮಗ್ಗುಲಿನತ್ತ ವಾಲಿಕೊಳ್ಳುತ್ತೆ. ಇಂಟರ್‌ವಲ್ ಹೊತ್ತಿಗೆಲ್ಲ ಈ ಕಥೆ ಬೆಂಗಳೂರಿಗೆ ಶಿಪ್ಟಾಗಿ, ಬೇರೆಯದ್ದೊಂದು ಚಹರೆಯನ್ನ ಕಾಣಿಸುತ್ತೆ.
ಆ ನಂತರ ಏನಾಗುತ್ತದೆ? ಹೆಣ್ಣು ಗುಣದ ಹೀರೋ ಮತ್ತೆ ಕಾಡಿಗೆ ಮರಳುತ್ತಾನಾ? ಅತೀಂದ್ರಿಯರನ್ನು ಹಿಮ್ಮೆಟ್ಟಿಸಿ ತನ್ನ ಕುಟುಂಬವನ್ನು ಕಾಪಾಡಿಕೊಳ್ಳತ್ತಾನಾ ಅನ್ನೋದು ಒಟ್ಟಾರೆ ಸಿನಿಮಾದ ಸಾರ. ಆದರೆ, ಅದನ್ನು ಸಿನಿಮಾ ಮಂದಿರಕ್ಕೆ ಹೋಗಿ ನೋಡಿ ಅಂತ ಶಿಫಾರಸ್ಸು ಮಾಡೋದಕ್ಕೂ ಧೈರ್ಯ ಸಾಲುವುದಿಲ್ಲ. ಯಾಕೆಂದರೆ, ಅಂಥಾ ಶಿಫಾರಸ್ಸನ್ನ ಮನ್ನಿಸಿ ನೋಡ ಹೋದವರ ಮೈಯೊಳಗೆ ಅಸಹನೆಯ ದೈವದ ಆವಾಹನೆಯಾಗಿ ಹಾವಳಿಯಿಡುವ ಸಾಧ್ಯತೆಗಳೇ ಹೆಚ್ಚಾಗಿವೆ. ನಿಖರವಾಗಿ ಹೇಳಬೇಕೆಂದರೆ, ಈ ಕಥೆಯ ಒನ್‌ಲೈನ್ ಸ್ಟೋರಿ ಮಜವಾಗಿದೆ. ಆದರೆ ಅದನ್ನು ದೃಷ್ಯರೂಪಕ್ಕಿಳಿಸುವಲ್ಲಿ ಸಾಲು ಸಾಲು ಯಡವಟ್ಟುಗಳು ಸಂಭವಿಸಿವೆ. ತೀವ್ರವಾಗಿ ಕಾಡಬಹುದಾದ ದೃಷ್ಯಗಳೇಇಲ್ಲಿ ಸವಕಲಾಗಿವೆ. ಹೀರೋ ಬೆಗಳೂರಿಗೆ ಬಂದ ನಂತರದಲ್ಲಾಗುವ ಕಥರೆಯೂ ಒಂದಷ್ಟು ಪರಿಣಾಮಕಾರಿಯಾಗಿದೆ. ಕೆಲ ದೃಷ್ಯಗಳು ಮನಸಿಗೆ ತಾಕುತ್ತವೆ. ಆದರೆ, ಅದರ ಬೆನ್ನಿಗೇ ಸವಕಲು ದೃಷ್ಯಗಳೂ ಹಾವಳಿಯಿಡುತ್ತವೆ.
ಇಲ್ಲಿ ಮುಂದಿನ ದೃಷ್ಯವಾದರೂ ಪರಿಣಾಮಕಾರಿಯಾಗಿರಬಹುದಾ ಎಂಬ ಪ್ರಶ್ನೆ, ನಾಯಕನಿಗೆ ಗಂಡಸ್ತನ ಬಂದೀತೆಂಬ ನಿರೀಕ್ಷೆಯಂತೆಯೇ ನಿರಾಸೆ ಮೂಡಿಸುತ್ತೆ. ಕಡೆಗೊಂದು ಘಟ್ಟದಲ್ಲಿ ದೈ ಬಲದ ಮೂಲಕ ಹೀರೋ ಗಂಡಸ್ತನದ ಪ್ರಭೆತಯಲ್ಲಿ ಹ್ಞೂಂಕರಿಸುತ್ತಾನೆ. ಆದರೆ ದೃಷ್ಯಗಳಿಗೆ ಮಾತ್ರ ಯಾವ ದೈವವೂ ಸಾಥ್ ಕೊಟ್ಟಂತಿಲ್ಲ. ಒಂದು ಹಂತದಲ್ಲಿ ಈ ಚಿತ್ರದ ಕಥೆಯನ್ನು ಕಾಂತಾರ ಚಿತ್ರ ನೋಡಿ ಪ್ರಭಾವಿತರಾಗೇ ಬರೆದಂತೆ ಕಾಣಿಸುತ್ತದೆ. ಆದರೆ ಈ ಬಗ್ಗೆ ಚಿತ್ರತಂಡ ಬಿಡುಗಡೆಗೆ ಮುನ್ನವೇ ಆಂಟಿಸಿಪೇಟರಿ ಬೇಲ್ ತೆಗೆದುಕೊಂಡು ಬಿಟ್ಟಿದೆ. ಅದರ ಪ್ರಕಾರ ಹೇಳೋದಾದರೆ, ಆರ ಕಾಂತಾರಕ್ಕಿಂತಲೂ ಮುಂಚೆಯೇ ಬರವಣಿಗೆಗಿಳಿದು ಚಿತ್ರೀಕರಣ ಆರಂಭಿಸಿದ ಸಿನಿಮಾವಂತೆ. ಅದೆಷ್ಟು ಸತ್ಯವೋ ಗೊತ್ತಿಲ್ಲ. ಆದರೆ, `ಆg’ದ ಅಲ್ಲಲ್ಲಿ ಕಾಂತಾರ ನೆರಳಂತೂ ಇದ್ದೇ ಇದೆ. ಅದೂ ಕೂಡಾ ಕಳಪೆಯಾಗಿದೆ ಅನ್ನೋದಷ್ಟೇ ನೋಡುಗರ ತಕರಾರು.
ಕಾಂತಾರ ಪ್ರಭೆಯ ವಿಚಾರ ಒತ್ತಟ್ಟಿಗಿರಲಿ; ಅದರಾಚೆಗೂ ಒಂದೊಳ್ಳೆ ಚಿತ್ರವಾಗುವ ಕಸುವು ಈ ಕಥೆಗಿದ್ದದ್ದು ಸುಳ್ಳಲ್ಲ. ಎಲ್ಲವನ್ನೂ ಒಬ್ಬೊಬ್ಬರೇ ನಿಭಾಯಿಸುವ ಉಮೇದುವಾರಿಕೆಯೋ, ಬಜೆಟ್ಟಿನ ಕೊರತೆಯೋ ಗೊತ್ತಿಲ್ಲ; ಒಂದೊಳ್ಳೆ ಚಿತ್ರವಾಗಬಹುದಾಗಿದ್ದ ಅವಕಾಶವನ್ನು ಆರ ಕಳೆದುಕೊಂಡಿದೆ. ಮೇಕಿಂಗ್, ನಿರ್ದೇಶನ, ನಿರೂಪಣೆ ಸೇರಿದಂತೆ ಎಲ್ಲದರಲ್ಲಿಯೂ ಈ ಚಿತ್ರ ಸಪ್ಪೆ ಸಪ್ಪೆ. ಕಥೆಯಂತೂ ಅಲ್ಲಲ್ಲಿ ಎಳೆದಾಡಿದೆ. ಅದರ ಸೆಳವಿಗೆ ಸಿಕ್ಕ ದೃಷ್ಯಗಳು ಕಂಗೆಟ್ಟಂತೆ ಭಾಸವಾಗುತ್ತದೆ. ಇನ್ನುಳಿದಂತೆ, ನಾಯಕನ ಹೆಣ್ತನದ ನಡವಳಿಕೆಯನ್ನು ಕಡೆಯವರೆಗೆ ತಡೆದುಕೊಳ್ಳೋದೇ ಪ್ರೇಕ್ಷಕರ ಪಾಲಿಗೆ ತ್ರಾಸದಾಯಕ ಸಂಗತಿಯಾಗಿ ಕಾಡುತ್ತದೆ. ಹೀರೋಗೆ ಗಂಡಸ್ತನ ಬರಬಹುದೆಂಬ ಕ್ಷೀಣ ಆಸೆಯ ಮುಂದೆ ಕ್ಲೈಮ್ಯಾಕ್ಸು ರಾಚಿ ಬಿಡುತ್ತದೆ.
ಅದ್ಭುತವಾಗಿ ದಾಖಲಾಗಬಹುದಾಗಿದ್ದ ಅವಕಾಶವನ್ನು ಕಳಪೆ ಗುಣಮಟ್ಟದ ಕ್ಯಾಮೆರಾ ನುಂಗಿಕೊಂಡಿದೆ. ಅದಕ್ಕೆ ಬಜೆಟ್ಟಿನ ಬಾಧೆ ಕಾರಣವಿದ್ದಿರಬಹುದು. ಆರ ಆರಂಭದಿಂದಲೂ ಅದೆಷ್ಟು ಬೋರು ಹೊಡೆಸುತ್ತದೆಂದರೆ, ಇಂಟರ್‌ವಲ್ ನಂತರ ಬುದ್ಧಿವಂತರನೇಕರು ಸಿನಿಮಾ ಮಂದಿರಗಳಿಂದ ಎಗರಿಕೊಂಡು ಬಿಟ್ಟಿದ್ದರು. ಹೀರೋ, ರೈಟರ್, ಪ್ರೊಡ್ಯೂಸರ್ ಹೀಗೆ ತ್ರಿಪಾತ್ರಗಳನ್ನು ರೋಹಿತ್ ನಿಭಾಯಿಸಿದ್ದಾರೆ. ಅವರ ನಟನೆಯೂ ಚೆನ್ನಾಗಿದೆ. ಓರ್ವ ಬರಹಗಾರರಾಗಿ ರೋಹಿತ್ ಕಮರ್ಶಿಯಲ್ ಚೌಕಟ್ಟಿನಲ್ಲಿಯೇ ನೆಲೆಗಾಣುವ ಸಾಧ್ಯತೆಗಳಿವೆ. ಅದಕ್ಕೊಂದಷ್ಟು ತಯಾರಿ, ಪರಿಶ್ರಮ ಬೇಕಷ್ಟೆ. ಬಹುಶಃ ಒಬ್ಬ ನುರಿತ ನಿರ್ದೇಶಕ ಮತ್ತು ಅಗತ್ಯಕ್ಕೆತಕ್ಕಷ್ಟು ಬಜೆಟ್ಟು ಸಿಕ್ಕಿದ್ದರೆ ಆರ ಚಿತ್ರದ ಖದರ್ರೇ ಬೇರೆಯದ್ದಿರುತ್ತಿತ್ತು. ಇದೆಲ್ಲದರಾಚೆಗೆ ಸಿನಿಮಾ ನೋಡಿಯಾದ ಮೇಲೆ ಪ್ರೇಕ್ಷಕರ ಮನಸಲ್ಲುಳಿಯೋದು ಒಂದಷ್ಟು ನಿರಾಸೆ ಮತ್ತು ದೃಷ್ಯಗಳಿಂದ ದಾಟಿಕೊಂಡ ಮಬ್ಬು ಮಾತ್ರ!