ಟ್ರೈಲರ್ ನಲ್ಲಿನ ತಾಜಾತನ, ಹೊಸಾ ಬಗೆಯ ಕಥೆಯ ಸುಳಿವಿನೊಂದಿಗೆ ಸಿನಿಮಾ ಪ್ರೇಮಿಗಳನ್ನು ಸೆಳೆದುಕೊಂಡಿರುವ ಚಿತ್ರ `ಎಲ್ಲೋ ಜೋಗಪ್ಪ ನಿನ್ನರಮನೆ’. ಅಗ್ನಿಸಾಕ್ಷಿ, ನಾಗಿಣಿ, ಕಮಲಿಯಂಥಾ ಹಿಟ್ ಧಾರಾವಾಹಿಗಳನ್ನು ನಿರ್ದೇಶನ ಮಾಡಿ ಕಿರುತೆರೆಯಲ್ಲಿ ಸ್ಟಾರ್ ನಿರ್ದೇಶಕರೆನ್ನಿಸಿಕೊಂಡಿರುವ ಹಯವದನ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಮೂಲಕ ಗಟ್ಟಿ ಕಥೆಯೊಂದಿಗೆ, ವ್ಯವಸ್ಥಿತವಾಗಿ ಎಂಟರಿ ಕೊಟ್ಟಿರುವ ಲಕ್ಷಣಗಳು ಟ್ರೈಲರ್ ನಲ್ಲಿ ಢಾಳಾಗಿಯೇ ಗೋಚರಿಸಿವೆ. ಹಿಮಾಲಯದವರೆಗೂ, ನಾನಾ ಪ್ರದೇಶಗಳನ್ನು ಹಾದು ಹೋಗುವ ಈ ಕಥೆಯ ನಾಯಕಿಯಾಗಿ ನಟಿಸಿರುವಾಕೆ ಮಂಗಳೂರು ಹುಡುಗಿ ವೆನ್ಯಾ ರೈ. ಪಂಡರಾಪುರದ ಟಿಪಿಕಲ್ ಮರಾಠಿ ಹುಡುಗಿಯಾಗಿ, ಲವಲವಿಕೆಯ ಪಾತ್ರವನ್ನು ಆವಾಹಿಸಿಕೊಂಡು ಖುಷಿ ವೆನ್ಯಾಗಿದೆ.

ನಿರ್ದೇಶಕ ಹಯವದನ ಈ ಸಿನಿಮಾಗಾಗಿ ಕಥೆಯನ್ನು ಸಿದ್ಧಪಡಿಸಿ, ಸ್ಕ್ರಿಫ್ಟ್ ಸೇರಿದಂತೆ ಎಲ್ಲವೂ ತಯಾರಾದ ಬಳಿಕ ಆಯಾ ಪಾತ್ರಕ್ಕೊಪ್ಪುವ ಕಲಾವಿದರ ಹುಡುಕಾಟಕ್ಕಿಳಿದಿದ್ದರು. ಹೆಚ್ಚೂಕಡಿಮೆ ಎಲ್ಲ ಪಾತ್ರಗಳಿಗೂ ಕಲಾವಿದರು ನಿಕ್ಕಿಯಾಗಿದ್ದರೂ, ನಾಯಕಿಯ ಪಾತ್ರ ಮಾತ್ರ ಪ್ರಶ್ನೆಯಾಗುಳಿದಿತ್ತು. ಅದೊಂದು ಸಾರಿ ಹಯವದನ ನಿರ್ದೇಶಕ ಚೇತನ್ ಮುಂಡಾಡಿ ಅವರನ್ನು ಭೇಟಿಯಾಗಿದ್ದಾಗ ನಾಯಕಿ ಪಾತ್ರಕ್ಕೆ ಫ್ರೆಶ್ ಫೇಸಿನ ಹುಡುಕಾಟದಲ್ಲಿರುವ ವಿಚಾರವನ್ನು ಹೇಳಿಕೊಂಡಿದ್ದರಂತೆ. ಆ ಕ್ಷಣವೇ ಚೇತನ್ ಮುಂಡಾಡಿ ಸೂಚಿಸಿದ್ದು ವೆನ್ಯಾ ರೈ ಹೆಸರನ್ನು. ವೆನ್ಯಾ ಅದಾಗಲೇ ಚೇತನ್ ನಿರ್ದೇಶನದ ಭಾವಪೂರ್ಣ ಚಿತ್ರದಲ್ಲಿ ನಟಿಸಿದ್ದರು. ಅದರ ಒಂದಷ್ಟು ತುಣುಕುಗಳನ್ನು ಕಂಡ ಹಯವದನ ಈಕೆಯೇ ಆ ಪಾತ್ರಕ್ಕೆ ಸೂಕ್ತ ಎಂಬಂಥಾ ನಿರ್ಧಾರಕ್ಕೆ ಬಂದಿದ್ದರಂತೆ.

ಆರಂಭದಲ್ಲಿ ಈ ಆಫರ್ ಒಪ್ಪಿಕೊಳ್ಳಲು ವೆನ್ಯಾ ತಂದೆ ಚೇತನ್ ರೈ ಹಿಂದೇಟು ಹಾಕಿದರೂ, ಕಥೆ ಮತ್ತು ಆ ಪಾತ್ರದ ಬಗ್ಗೆ ತಿಳಿದ ನಂತರ ಒಪ್ಪಿಗೆ ಸೂಚಿಸಿದ್ದರಂತೆ. ವೆನ್ಯಾ ತಂದೆ ಚೇತನ್ ರೈ ಮಾಣಿ ಕೂಡಾ ತುಳು ಚಿತ್ರರಂಗದ ಖ್ಯಾತ ನಟ. ಯಕ್ಷಗಾನದಲ್ಲಿಯೂ ಛಾಪು ಮೂಡಿಸಿರುವವರು. ಹೀಗೊಂದು ಬೆಳವಣಿಗೆ ನಡೆಯುತ್ತಲೇ ಆನ್‌ಲೈನ್ ಮೂಲಕವೇ ವೆನ್ಯಾಗೆ ನಿರ್ದೇಶಕ ಹಯವದನ ರಿಹರ್ಸಲ್ ನಡೆಸುತ್ತಾ ಬಂದಿದ್ದರಂತೆ. ಕಡೆಗೂ ಚಿತ್ರೀಕರಣದಲ್ಲಿ ಭಾಗಿಯಾದ ವೆನ್ಯಾ ಪಂಡಟಾಪುರದ ಟೆಂಪಲ್ ಟೌನಿನ ಮರಾಠಿ ಹುಡುಗಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಸದ್ಯಕ್ಕೆ ಓದಿನತ್ತ ಗಮನ ಹರಿಸುತ್ತಿದ್ದರೂ ನಟಿಯಾಗ ಬೇಕೆಂಬ ಹಂಬಲ ಹೊಂದಿರುವ ವೆನ್ಯಾ ಪಾಲಿಗೆ ಈ ಸಿನಿಮಾದ ಅವಕಾಶ ವರವೆಂಬಂತೆ ಒಲಿದು ಬಂದಿದೆ. ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರ ಆಕೆಯ ಮುಂದಿನ ಹಾದಿಗೆ ಮತ್ತಷ್ಟು ಕಸುವು ತುಂಬುವ ಲಕ್ಷಣಗಳೂ ಕಾಣಿಸುತ್ತಿವೆ. ಟ್ರೈಲರಿನಲ್ಲಿ ಈಕೆಯ ಪಾತ್ರದ ಒಂದಷ್ಟು ಚಹರೆಗಳು ಜಾಹೀರಾಗಿವೆ. ಪ್ರೇಕ್ಷಕರ ಕಡೆಯಿಂದ ಮೆಚ್ಚುಗೆಯೂ ಹರಿದು ಬರಲಾರಂಭಿಸಿದೆ. ಪವನ್ ಶಿಮಿಕೇರಿ ಮತ್ತು ಸಿಂಧು ಹಯವದನ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸೃಜನ್ ರಾಘವೇಂದ್ರ, ಚೇತನ್, ಹಯವದನ ಚಿತ್ರಕಥೆ, ವೇಣು ಹಸ್ರಾಳಿ ಸಂಭಾಷಣೆ, ನಟರಾಜು ಮದ್ದಾಲ ಛಾಯಾಗ್ರಹಣ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಶಿವಪ್ರಸಾದ್ ಸಂಗೀತ ನಿರ್ದೇಶನವಿರುವ ಈ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!