ಪ್ಯಾನಿಂಡಿಯಾ ಮಟ್ಟದಲ್ಲೀಗ ರಾಮಾಯಣ ಚಿತ್ರದ ಸುತ್ತ ಚರ್ಚೆಗಳು ನಡೆಯುತ್ತಿವೆ. ಅತ್ತ ಸದರಿ ಚಿತ್ರದ ಚಿತ್ರೀಕರಣ ಕೂಡಾ ಅತ್ಯಂತ ವೇಗವಾಗಿ ನಡೆಯುತ್ತಿದೆ. ಇದೊಂದು ಮಲ್ಟಿ ಸ್ಟಾರರ್ ಸಿನಿಮಾ. ವಿಶೇಷವೆಂದರೆ, ರಾಕಿಂಗ್ ಸ್ಟಾರ್ ಯಶ್ ಇಲ್ಲಿ ರಾವಣನಾಗಿ ಅಬ್ಬರಿಸಲಣಿಯಾಗಿದ್ದಾರೆ. ಇದು ಕರುನಾಡ ಪಾಲಿಗೆ ನಿಜಕ್ಕೂ ಹೆಮ್ಮೆಯ ಸಂಗತಿ. ಈ ಮೂಲಕ ರಾಕಿಂಗ್ ಸ್ಟಾರ್ ಅಭಿಮಾನಿಗಳ ಪಾಲಿನ ಖುಷಿ ದುಪ್ಪಟ್ಟಾಗಿದೆ. ಅತ್ತ ಟಾಕ್ಸಿಕ್ ಮತ್ತು ಇತ್ತ ರಾಮಾಯಣದ ಅಪ್‌ಡೇಟ್‌ಗಳಿಗಾಗಿ ಎಲ್ಲರೂ ಕಾತರರಾಗಿದ್ದಾರೆ. ರಾಮಾಯಣದ ವಿಚಾರಕ್ಕೆ ಬರೋದಾದರೆ, ಸಹಜವಾಗಿಯೇ ಇಲ್ಲಿ ದೊಡ್ಡ ಕ್ಯಾನ್ವಾಸಿನ ತುಂಬ ಥರ ಥರದ ಪಾತ್ರಗಳು ತುಂಬಿದ್ದಾವೆ. ಅದರಲ್ಲೊಂದು ಮಹತ್ವದ ಪಾತ್ರಕ್ಕೆ ಜೀವ ತುಂಬಿರುವವರು ಶಿಬಾ ಛಡ್ಡಾ!
ಬಾಲಿವುಡ್ಡಿನ ಹಿರಿಯ ನಟಿ ಶಿಭಾ ಛಡ್ಡಾ ರಾಮಾಯಣ ಚಿತ್ರದಲ್ಲಿ ನಮಂಥರೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ತಾನು ನಿರ್ವಹಿಸಿದ ಪಾತ್ರದ ಚಹರೆಗಳ ಬಗ್ಗೆ ಶಿಭಾ ಇತ್ತೀಚೆಗೆ ನಡೆದ ಸಂದರ್ಶನವೊಂದರ ಮೂಲಕ ಮಹತ್ವದ ಮಾಹಿತಿಗಳನ್ನು ಬಿಟ್ಟುಕೊಟ್ಟಿದ್ದಾರೆ. ರಾಮಾಯಣದಲ್ಲಿ ಮಂಥರೆಯ ಪಾತ್ರ ಚಿರಪರಿಚಿತ. ಈವರೆಗೂ ಸಿನಿಮಾಗಳಲ್ಲಿ ಮಾತ್ರವಲ್ಲದೇ, ಅನೇಕ ಗ್ರಂಥಗಳಲ್ಲಿ ಈ ಪಾತ್ರದ ಬಗ್ಗೆ ನಾನಾ ನಿಟ್ಟಿನಲ್ಲಿ ಪರಾಮರ್ಶೆ ಮಾಡಲಾಗಿದೆ. ಆದರೆ, ಸಿನಿಮಾದಲ್ಲಿ ಮಂಥರೆಯ ಭಾವುಕ ಜಗತ್ತಿನೊಳಗೆ ಪ್ರವೇಶ ಮಾಡುವ, ಅಂಥಾ ಭಾವ ತುಮುಲಗಳನ್ನೇ ಪ್ರಧಾನವಾಗಿಸಿ ಆ ಪಾತ್ರವನ್ನು ಕಟ್ಟಿ ಕೊಡುವ ಪ್ರಯತ್ನಗಳು ನಡೆದದ್ದಿಲ್ಲ. ಈ ಚಿತ್ರದಲ್ಲಿ ಆ ದಿಕ್ಕಿನಲ್ಲಿ ಪರಿಣಾಮಕಾರಿಯಾದ ಪ್ರಯತ್ನವಿದೆ ಅಂತ ಶಿಭಾ ಛಡ್ಡಾ ಹೇಳಿಕೊಂಡಿದ್ದಾರೆ.
ಮಂಥರೆಯ ನಕಾರಾತ್ಮಕ ವ್ಯಕ್ತಿತ್ವ ನಮ್ಮ ಪಾಲಿಗೆ ಹೊಸತೇನಲ್ಲ. ಆ ಪಾತ್ರ ಅದೆಷ್ಟು ಹಾಸುಹೊಕ್ಕಾಗಿದೆಯೆಂದರೆ, ಮಂಥರೆ ಅನ್ನೋದು ನಕಾರಾತ್ಮಕತೆಯ ರೂಪಕವೆಂಬಂತಾಗಿದೆ. ಆದರೆ, ಆಕೆಯ ಭಾವಲೋಕ ಎಂಥವರನ್ನೂ ಅದುರಿಸಿ ಹಾಕುವಂತಿದೆ. ಆ ಪಾತ್ರವನ್ನು ನಿಭಾಯಿಸುತ್ತಲೇ ಖುದ್ದು ಬೆರಗಾಗಿರೋದಾಗಿ ಶಿಭಾ ಹೇಳಿಕೊಂಡಿದ್ದಾರೆ. ಈ ಮೂಲಕ ರಾಮಾಯಣ ಮಾಮೂಲಿ ಧಾಟಿಯಲ್ಲಿ ಸಿದ್ಧಗೊಂಡಿಲ್ಲ; ಅದರಲ್ಲಿ ನಮ್ಮೆಲ್ಲರಿಗೆ ಪರಿಚಿತವಾಗಿರುವ ಪಾತ್ರಗಳನ್ನು ತೀರಾ ಭಿನ್ನಾಗಿ, ಬೆರಗಾಗಿಸುವಂಥಾ ಆಯಾಮದಲ್ಲಿ ಕಟ್ಟಿಕೊಡಲಾಗಿದೆ ಎಂಬ ಸ್ಪಷ್ಟ ಸಂದೇಶವನ್ನು ಶಿಭಾ ರವಾನಿಸಿದ್ದಾರೆ.