ಸೀರಿಯಲ್ ಮೂಲಕ ಒಂದಷ್ಟು ಹೆಸರು ಮಾಡುತ್ತಲೇ ಹಿರಿತೆರೆಯತ್ತ ಹೊರಳಿಕೊಳ್ಳೋದು ಮಾಮೂಲು. ಅಷ್ಟಕ್ಕೂ ಸೀರಿಯಲ್ಲುಗಳಲ್ಲಿ ನಾಯಕ ನಾಯಕಿಯರಾಗಿ ಅಭಿನಯಿಸುವ ಬಹುತೇಕರಿಗೆ ಸಿನಿಮಾ ರಂಗದಲ್ಲಿ ಮಿಂಚುವ ಆಸೆ ಇದ್ದೇ ಇರುತ್ತದೆ. ಇದೇ ಬಯಕೆಯಿಂದ ವರ್ಷಕ್ಕೊಂದಷ್ಟು ಮಂದಿ ಹಿರಿತೆರೆಯಲ್ಲಿ ಅದೃಷ್ಟ ಪರೀಕ್ಷೆಗಿಳಿಯುತ್ತಿರುತ್ತಾರೆ. ಗಿಣಿರಾಮ ಖ್ಯಾತಿಯ ರಿತ್ವಿಕ್ ಮಠದ್ ಕೂಡಾ ಅದೇ ಹಾದಿಯಲ್ಲಿದ್ದಾರೆ. ಅದರ ಭಾಗವಾಗಿ ಅವರೀಗ `ಮಾರ್ನಮಿ’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಸದ್ದಿಲ್ಲದೆ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರತಂಡವೀಗ ಬಿಡುಗಡೆಯ ತಯಾರಿಯಲ್ಲಿದೆ. ಇದೇ ಹೊತ್ತಿನಲ್ಲಿ ನಾಯಕ ನಟ ರಿತ್ವಿಕ್ ಮಠದ್ ಹುಟ್ಟುಹಬ್ಬಕ್ಕೆ ಉಡುಗೊರೆ ಎಂಬಂತೆ ಚಿತ್ರತಂಡ ಟೀಸರ್ ಬಿಡುಗಡೆಗೊಳಿಸಿದೆ.
ಈಗಾಗಲೇ ಹಲವಾರು ಧಾರಾವಾಹಿಗಳ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವ ರಿಷಿತ್ ಶೆಟ್ಟಿ ಮಾರ್ನಮಿ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ರಿತ್ವಿಕ್ ಮಠದ್ ನಾಯಕನಾಗಿ ನಟಿಸಿದ್ದ ಗಿಣಿರಾಮ ಚಿತ್ರದಲ್ಲಿ ರಿಒಷಿತ್ ಶೆಟ್ಟಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರಂತೆ. ಈ ಸಂದರ್ಭದಲ್ಲಿಯೇ ಮಾರ್ನಮಿ ಚಿತ್ರದ ಮುಖ್ಯ ಕೊಂಡಿಯೊಂದು ಬೆಸೆದುಕೊಂಡಿತ್ತು. ಈ ಹಂತದಲ್ಲಿಯೇ ಕಥೆ ಸಿದ್ಧಪಡಿಸಿಕೊಂಡಿದ್ದ ರಿಷಿತ್ ಶೆಟ್ಟಿ ಕಡೆಗೂ ಅದಕ್ಕೆ ಸಿನಿಮಾ ರೂಪ ಕೊಟ್ಟಿದ್ದಾರೆ. ಮಾರ್ನಮಿ ಟೀಸರ್ ಗೀಗ ಒಂದಷ್ಟು ಮೆಚ್ಚುಗೆಗಳೂ ಮೂಡಿಕೊಂಡಂತಿದೆ. ಮುಗ್ಧತೆ ಹಾಗೂ ಕೋಪದ ಪರಾಕಾಷ್ಠೆ ಹೊಂದಿರುವ ಚೇತು ಎಂಬ ಪಾತ್ರದಲ್ಲಿ ರಿತ್ವಿಕ್ ಮಿಂಚಿದ್ದಾರಂತೆ.
ಅಂದಹಾಗೆ, ಗುಣಾಧ್ಯ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಶಿಲ್ಪಾ ನಿಶಾಂತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚೈತ್ರಾ ಆಚಾರ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಪ್ರಕಾಶ್ ತುಮಿನಾಡು, ರಾಧಾ ರಾಮಚಂದ್ರ, ಯಶ್ ಶೆಟ್ಟಿ, ಚೈತ್ರಾ ಶೆಟ್ಟಿ, ಮೈಮ್ ರಾಮದಾಸ್ ಮುಂತಾದವರು ಥರ ಥರದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಶಿವಸೇನಾ ಛಾಯಾಗ್ರಹಣ ಹಾಗೂ ಚರಣ್ ರಾಜ್ ಸಂಗೀತ ಈ ಚಿತ್ರಕ್ಕಿದೆ. ಗಿಣಿರಾಮ ಬಳಿಕ ಒಂದಷ್ಟು ಕಾಲ ರಿತ್ವಿಕ್ ವಿರಾಮ ತೆಗೆದುಕೊಂಡಿದ್ದರು. ಅದರ ಹಿಂದಿದ್ದದ್ದು ಸದರಿ ಸಿನಿಮಾಗಾಗಿನ ತಯಾರಿ. ಆ ನಂತರ ಮಾರ್ನಮಿ ಚಿತ್ರೀಕರಣ ಮುಕ್ತಾಯದ ಬಳಿಕವಷ್ಟೇ ಅವರು ನಿನಗಾಗಿ ಸೀರಿಯಲ್ಲಿನತ್ತ ಹೊರಳಿಕೊಂಡಿದ್ದರು. ಇದೀಗ ಅವರ ಕನಸಿನ ಮಾರ್ನಮಿ ಬಿಡುಗಡೆಗೆ ತಯಾರಾಗಿ ನಿಂತಿದೆ!