ಕನ್ನಡದಲ್ಲಿ ಕಿಸ್ ಅಂತೊಂದು ಸಿನಿಮಾದಲ್ಲಿ ನಟಿಸಿ, ಆ ನಂತರ ಸೀದಾ ತೆಲುಗು ಚಿತ್ರರಂಗಕ್ಕೆ ಹಾರಿದ್ದ ಶ್ರೀಲೀಲಾ ಈಗ ಅಲ್ಲಿಯೇ ನೆಲೆ ಕಂಡುಕೊಂಡಿದ್ದಾಳೆ. ಕನ್ನಡ ಚಿತ್ರರಂಗಹದಿಂದ ಹಾಗೆ ತೆಲುಗಿಗೆ ಹಾರೋ ನಟಿಯರಿಗೇನೂ ಕೊರತೆಯಿಲ್ಲ. ಹಾಗಂತ, ತೆಲುಗಿಗೆ ಹೋದವರೆಲ್ಲ ಮಿರಮಿರನೆ ಮಿಂಚುತ್ತಾರೆಂದೂ ಅಂದುಕೊಳ್ಳುವಂತಿಲ್ಲ. ಆದರೆ, ರಶ್ಮಿಕಾ ಮಂದಣ್ಣಳಂಥವರಿಗೆ ಮಹಾ ಗೆಲುವೇ ದಕ್ಕಿ ಬಿಡೋದೂ ಇದೆ. ಅಂಥಾ ರಶ್ಮಿಕಾಳನ್ನೇ ಮಂಕಾಗಿಸುವಂತೆ ಮಿಂಚಿದ್ದಾಕೆ ಶ್ರೀಲೀಲಾ. ಏಕಾಏಕಿ ಈ ಹುಡುಗಿ ಬಾಚಿಕೊಳ್ಳಲಾರಂಭಿಸಿದ್ದ ಅವಕಾಶಗಳನ್ನು ಕಂಡು ಎಲ್ಲರೂ ಅವಾಕ್ಕಾಗಿದ್ದರು. ಹೀಗೆ ಅಚಾನಕ್ಕಾದ ಯಶಸ್ಸಿನ ಅಲೆಯಲ್ಲಿ ಮಿಂದೇಳುತ್ತಿದ್ದ ಶ್ರೀಲೀಲಾ ಪಾಲಿಗೆ ಇತ್ತೀಚಿನ ದಿನಗಳಲ್ಲಿ ಕೊಂಚ ಹಿನ್ನಡೆ ಉಂಟಾಗಿದೆ.
ಇಂಥಾ ಶ್ರೀಲೀಲಾ ಬಗ್ಗೆ ಈಗ ಮತ್ತೊಂದು ತೆರನಾದ ಚರ್ಚೆಗಳೂ ಆರಂಭವಾಗಿವೆ. ಅದಕ್ಕೆ ಕಾರಣವಾಗಿರೋದು ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೆಡ್ಡಿ. ಈ ಚಿತ್ರದ ವಿಶೇಷ ಹಾಡೊಂದರಲ್ಲಿ ಶ್ರೀಲೀಲಾ ನಟಿಸಲು ಒಪ್ಪಿಕೊಂಡಿದ್ದಾಳೆಂಬ ಸುದ್ದಿಯೊಂದು ತೆಲುಗು ಚಿತ್ರರಂಗದಲ್ಲಿ ಇಟ್ಟಾಡಲಾರಂಭಿಸಿದೆ. ವಿಶೇಷ ಹಾಡೆಂದರೆ ಅದು ಐಟಂ ನಂಬರ್ ಅನ್ನೋದನ್ನು ಬಿಡಿಸಿ ಹೇಳುವ ಅವಶ್ಯಕತೆಯೇನಿಲ್ಲ. ನಿರ್ದೇಶಕ ಬುಚ್ಚಿಬಾಬು ಈ ಹಾಡಿಗೆ ಒಪ್ಪುವಂಥಾ ನಟಿಯರಿಗಾಗಿ ಆರಂಭದಿಂದಲೂ ಹುಡುಕಾಟ ನಡೆಸುತ್ತಾ ಬಂದಿದ್ದರು. ಆದರೆ, ಪುಷ್ಪಾ೨ ಚಿತ್ರದಲ್ಲಿನ ಶ್ರೀಲೀಲಾಳ ಕುಣಿತ ನೋಡಿದ್ದ ಬುಚ್ಚಿ, ಆಕೆಯನ್ನೇ ತನ್ನ ಸಿನಿಮಾದ ಹಾಡಿಗೂ ನಿಕ್ಕಿಯಾಗಿಸಿಕೊಂಡಿದ್ದಾರಂತೆ!
ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲವಾದರೂ, ಶ್ರೀಲೀಲಾ ಹಾಡಿನಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾಳೆ. ಅದಕ್ಕಾಗಿ ದೊಡ್ಡ ಮೊತ್ತದ ಸಂಭಾವನೆಯ ಮಾತು ಕತೆಗಳೂ ನಡೆದಿವೆ. ಗುಂಟೂರು ಖಾರಂ ನಂತರ ಶ್ರೀಲೀಲಾಗೆ ನಾಯಕಲಿಯಾಗಿ ಸೋಲಿನ ಗ್ರಹಣ ಕವುಚಿಕೊಂಡಿದೆ. ಆದರೆ, ಪುಷ್ಪಾ೨ ಹಾಡಿನ ಮೂಲಕ ಆಕೆಯ ಖ್ಯಾತಿ ಮತ್ತಷ್ಟು ಹೆಚ್ಚಿಕೊಂಡಿದೆ. ಈ ದೆಸೆಯಿಂದಾಗಿ ಶ್ರೀಲೀಲಾ ಐಟಂ ಸಾಂಗುಗಳಲ್ಲಿ ಕುಣಿಯೋದರಲ್ಲೇ ಆನಂದ ಪಡೆದುಕೊಳ್ಳುತ್ತಿದ್ದಾಳಾ? ಹೀಗೊಂದು ಚರ್ಚೆ ಸಿನಿಮಾ ಪ್ರೇಮಿಗಳ ನಡುವೆ ಜೋರಾಗಿದೆ. ಇದೀಗ ಒಂದೇ ವೇಗದಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಸಿದ್ದ ಪೆಡ್ಡಿ ಚಿತ್ರತಂಡ ರಿಲ್ಯಾಕ್ಸ್ ಮೂಡಿನಲ್ಲಿದೆ. ಈ ತಿಂಗಳ ಕಡೇ ಭಾಗದಲ್ಲಿ ವಿಶೇಷ ಹಾಡಿನ ಚಿತ್ರೀಕರಣ ಲಂಡನ್ನಿನಲ್ಲಿ ನಡೆಯಲಿದೆ.