ಪ್ರಭಾಸ್ (prabhas) ಅಭಿಮಾನಿಗಳೆಲ್ಲ ವರ್ಷಗಳ ನಂತರ ಕಲ್ಕಿ (kalki movie) ಚಿತ್ರದ ಗೆಲುವಿನ ಮೂಲಕ ನಿಸೂರಾಗಿದ್ದರು. ಅಲ್ಲಿಯವರೆಗೂ ಅದೊಂದು ತೆರನಾದ ಪ್ರಕ್ಷುಬ್ಧ ವಾತಾವರಣ ಅಭಿಮಾನಿ ಬಳಗದಲ್ಲಿತ್ತು. ಬಾಹುಬಲಿಯಂಥಾ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ತಮ್ಮ ಹೀರೋ ಅಡಿಗಡಿಗೆ ಮುಗ್ಗರಿಸುತ್ತಿರುವ ಸಂಕಟ, ಯಾಕೆ ಈ ಆಸಾಮಿ ಪದೇ ಪದೆ ಕಳಪೆ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾನೆ ಎಂಬಂಥಾ ಸಿಟ್ಟು ಅಭಿಮಾನಿಗಳನ್ನು ಆವರಿಸಿಕೊಂಡಿತ್ತು. ಕಲ್ಕಿಯ ನಂತರದಲ್ಲಿ ಪ್ರಭಾಸ್ ಮತ್ತೆ ಯಶಸ್ಸಿನ ಟ್ರ್ಯಾಕಿಗೆ ಮರಳಿದಂತಿದ್ದಾರೆ. ಒಂದೇ ಸಲಕ್ಕೆ ಮೂರ್ನಾಲಕ್ಕು ಸಿನಿಮಾಗಳನ್ನು ಒಪ್ಪಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಹುರುಪು ತುಂಬಿಕೊಳ್ಳುವಂತಾಗಿದೆ. ಆದರೀಗ ಅದೆಲ್ಲವೂ ಮತ್ತೆ ತುಸು ಮಂಕಾದಂತಿದೆ. ಅದಕ್ಕೆ ಕಾರಣವಾಗಿರೋದು ಬಹುನಿರೀಕ್ಷಿತ (raja saab movie) ರಾಜಾಸಾಬ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್!
ಈ ಪೋಸ್ಟರಿನಲ್ಲಿ ಪ್ರಭಾಸ್ (prabhas) ರಾಜನ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಎಣಿಕೆಯಂತೆಯೇ ಆಗಿದ್ದರೆ, ಸದರಿ ಪೋಸ್ಟರ್ ನೋಡಿ ಸಿನಿಮಾ ಪ್ರೇಮಿಗಳೆಲ್ಲ ಹುಚ್ಚೆದ್ದು ಕೂನಿಯಬೇಕಿತ್ತು. ಆದರೆ, ಖುದ್ದು ಪ್ರಭಾಸ್ ಅಭಿಮಾನಿಗಳೇ ನಿರಾಸೆಗೊಂಡಿದ್ದಾರೆ. ಪ್ರಭಾಸ್ ರಾಜನ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರೋ ಈ ಪೋಸ್ಟರ್ ಗೆ ಹೇಳಿಕೊಳ್ಳುವಂಥಾ ಖದರ್ ಇಲ್ಲ ಎಂಬಂಥಾ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಪುರಾತನ ದೊರೆಯಾಗಿ ಕಂಗೊಳಿಸಿರುವ ಪ್ರಭಾಸ್ ಲುಕ್ಕಿಗೆ ಭಾರೀ ಪ್ರತಿಕ್ರಿಯೆ ಬರುತ್ತದೆಂಬ ನಿರೀಕ್ಷೆ ಚಿತ್ರತಂಡದಲ್ಲಿತ್ತು. ಆದರೆ, ಈಗ ಹಬ್ಬಿಕೊಂಡಿರೋದು ಅಕ್ಷರಶಃ ನಿರಾಸಾದಾಯಕ ವಾತಾವರಣ. ಈ ವಿಚಾರವಾಗಿ ಹಬ್ಬಿಕೊಳ್ಳುತ್ತಿರುವ ನೆಗೆಟಿವ್ ಅಂಶಗಳು ಪ್ರಭಾಸ್ ಅಭಿಮಾನಿಗಳನ್ನು ಕಂಗಾಲು ಮಾಡಿಡೋದಂತೂ ಸತ್ಯ.
ಈ ಚಿತ್ರವನ್ನು ನಿರ್ದೇಶನ ಮಾಡಿರುವಾತ ಮಾರುತಿ. ಲೋ ಬಜೆಟ್ ಸಿನಿಮಾಗಳ ಮೂಲಕ ಒಂದಷ್ಟು ಚಾಲ್ತಿಯಲ್ಲಿದ್ದ ನಿರ್ದೇಶಕನೀತ. ಇಂಥಾ ಮಾರುತಿಗೆ ಪ್ರಭಾಸ್ ಕಾಲ್ ಶೀಟ್ ಸಿಗುತ್ತಲೇ ಟಾಲಿವುಡ್ಡಿನ ತುಂಬೆಲ್ಲ ಅಚ್ಚರಿ ಮೂಡಿಕೊಂಡಿತ್ತು. ಇಂಥಾದ್ದೊಂದು ದೊಡ್ಡ ಅವಕಾಶ ಸಿಕ್ಕಿರೋದರಿಂದ ಅದನ್ನು ಮಾರುತಿ ಚೆಂದಗೆ ಬಳಸಿಕೊಳ್ಳಬಹುದೆಂಬಂಥಾ ನಿರೀಕ್ಷೆ ಇದ್ದೇ ಇತ್ತು. ಆದರೆ, ಮೊದಲ ಹೆಜ್ಜೆಯಲ್ಲಿಯೇ ಮಾರುತಿ ಕೊಂಚ ಎಡವಿದಂತಿದೆ. ಹಾಗಂತ ಇದೊಂದರಿಂದಲೇ ಮಾರುತಿಯ ನಿರ್ದೇಶನದ ಕಸುವನ್ನು ಸಾರಾಸಗಟಾಗಿ ಅಲ್ಲಗಳೆಯುವಂತಿಲ್ಲ. ಮುಂದಿನ ದಿನಗಳಲ್ಲಿ ಈಗ ಆಗಿರೋ ಹಿನ್ನಡೆಯನ್ನು ಮೀರಿಕೊಳ್ಳುವ ವಾತಾವರಣ ಸೃಷ್ಟಿಯಾದರೂ ಅಚ್ಚರಿಯೇನಿಲ್ಲ!