ಈ ಹಿಂದೆ ಮಹಿರಾ ಎಂಬ ಸಿನಿಮಾ ನಿರ್ದೇಶನ ಮಾಡುವ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದವರು ಮಹೇಶ್ ಗೌಡ. ಈವತ್ತಿಗೂ ಆ ಸಿನಿಮಾವನ್ನು ಕನ್ನಡದ ಸಿನಿಮಾಸಕ್ತರು ಆಗಾಗ ನೆನಪಿಸಿಕೊಳ್ಳುತ್ತಾರೆ. ಈ ಕಾರಣದಿಂದಲೇ ಅವರು ನಿರ್ದೇಶನ ಮಾಡಿ, ಮುಖ್ಯಭೂಮಿಕೆಯಲ್ಲಿ ನಟಿಸಿರುವ `ಬಿಳಿಚುಕ್ಕಿ ಹಳ್ಳಿಹಕ್ಕಿ’ ಆರಂಭಿಕವಾಗಿಯೇ ಗಮನ ಸೆಳೆದುಕೊಂಡಿತ್ತು. ಆರಂಭಿಕವಾಗಿ ಜಾಹೀರಾಗಿದ್ದ ಒಂದಷ್ಟು ವಿಚಾರಗಳ ಮೂಲಕವೇ ಇಲ್ಲಿ ಮಹೇಶ್ ಭಿನ್ನ ಕಥಾನಕವೊಂದನ್ನು ಮುಟ್ಟಿದ್ದಾರೆಂಬ ಸ್ಪಷ್ಟ ಸೂಚನೆ ಸಿಕ್ಕಿತ್ತು. ಇದೀಗ ಪೋಸ್ಟರ್ ಒಂದರ ಮೂಲಕ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ!
ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರ ಇದೇ ಅಕ್ಟೋಬರ್ ೨೪ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗಾಣಲಿದೆ. ಈಗಾಗಲೇ ಬಿಳಿಚುಕ್ಕಿ ಹಳ್ಳಿಹಕ್ಕಿಯ ಅಸಲೀ ಕಥಾನಕ ಏನಿರಬಹುದೆಂಬ ಕುತೂಹಲವೊಂದು ಮೂಡಿಕೊಂಡಿದೆ. ಈ ಬಗ್ಗೆ ಖುದ್ದು ನಿರ್ದೇಶಕರು ಒಂದಷ್ಟು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದು ಈ ಸಮಾಜದಲ್ಲಿ ಒಂದಷ್ಟು ಮಂದಿಯನ್ನು ಕಾಡುತ್ತಿರುವ ವಿಟಿಲಿಗೋ ಎಂಬ ಕಾಯಿಲೆಯಲ್ಲದ ಖಾಯಿಲೆಯನ್ನು ಕೇಂದ್ರವಾಗಿಟ್ಟುಕೊಂಡಿರುವ ಕಥನ. ಬಿಳಿತೊನ್ನು ಅಂತ ಕರೆಸಿಕೊಳ್ಳುವ ಈ ಬಾಧೆಗೀಡಾದವರು ಪಡುವ ಮಾನಸಿಕ ವೇದನೆಯಿದೆಯಲ್ಲಾ? ಅದು ಅವರಿಗೆ ಮಾತ್ರವೇ ಗೊತ್ತಿರಲು ಸಾಧ್ಯವೇನೋ…
ಮಹೇಶ್ ಗೌಡ ಅವರು ಅಂಥಾದ್ದೊಂದು ಖಾಯಿಲೆಯನ್ನೇ ಕೇಂದ್ರವಾಗಿಟ್ಟುಕೊಂಡು, ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಈ ಸಿನಿಮಾವನ್ನು ರೂಪಿಸಿದ್ದಾರಂತೆ. ವಿಟಿಲಿಗೋ ಎಂಬ ಸಮಸ್ಯೆಯ ಕಥನ ಎಂದಾಕ್ಷಣ ಬೇರೆ ಧಾಟಿಯ ಸಿನಿಮಾ ಅಂದುಕೊಳ್ಳಬೇಕಿಲ್ಲ. ಇದೊಂದು ಪಕ್ಕಾ ಕಮರ್ಶಿಯಲ್ ಸಿನಿಮಾ. ಸೂಕ್ಷ್ಮಾತಿ ಸೂಕ್ಷ್ಮ ಕಥನವಿದ್ದರೂ ಕೂಡಾ, ಮನೋರಂಜನೆಯನ್ನೇ ಮೂಲ ಧಾತುವಾಗಿಸಿಕೊಂಡು ಮಹೇಶ್ ಗೌಡ ಈ ಚಿತ್ರವನ್ನು ರೂಪಿಸಿದ್ದಾರಂತೆ. ಈ ಹಿಂದೆ ಮಹಿರಾ ಕೂಡಾ ತನ್ನೊಳಗಿನ ಹೊಸತನದ ಮೂಲಕ ಮೈಲಿಗಲ್ಲು ಸೃಷ್ಟಿಸಿತ್ತು. ಬಿಳಿಚುಕ್ಕಿ ಹಳ್ಳಿಹಕ್ಕಿ ಕೂಡಾ ಮತ್ತೊಂದು ಆಯಾಮದಲ್ಲಿ ಪ್ರೇಕ್ಷಕರನ್ನು ತಾಕುವ ಸಾಧ್ಯತೆಗಳಿದ್ದಾವೆ.
ಸ್ವತಃ ವಿಟಿಲಿಗೋ ಬಾಧೆಗೀಡಾಠಗಿರುವ ಮಹೇಶ್ ಗೌಡ ಅವರೇ ಇಲ್ಲಿನ ಪ್ರಧಾನ ಪಾತ್ರಕ್ಕೆ ಜೀವ ತುಂಬಿರುವುದು ವಿಶೇಷ. ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಈ ಸಿನಿಮಾವನ್ನು ಅವರೇ ನಿರ್ಮಾಣ ಮಾಡಿದ್ದಾರೆ. ರಂಗಭೂಮಿ ಪ್ರತಿಭೆ ಕಾಜಲ್ ಕುಂದರ್ ಇಲ್ಲಿ ಕವಿತಾ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸ್ವತಃ ವಿಟಿಲಿಗೋ ಸಮಸ್ಯೆ ಹೊಂದಿರುವ ಮಹೇಶ್ ಗೌಡ ಅವರೇ ಈ ಸಿನಿಮಾದ ನಾಯಕನಾಗಿ ನಟಿಸಿರೋದು ವಿಶೇಷ. ಇಂಥಾದ್ದೊಂದು ವಿಶಿಷ್ಟವಾದ ಕಥೆಯನ್ನು ಪಕ್ಕಾ ಕಮರ್ಶಿಯಲ್ ಧಾಟಿಯಲ್ಲಿ, ಭರಪೂರ ಮನೋರಂಜನಾತ್ಮಕ ಅಂಶಗಳೊಂದಿಗೆ ಕಟ್ಟಿಕೊಡಲಾಗಿದೆಯಂತೆ. ಪ್ರಶಸ್ತಿ ವಿಜೇತ ಕಲಾವಿದರಾದ ವೀಣಾ ಸುಂದರ್, ಜಹಾಂಗೀರ್, ರವಿ ಭಟ್ ಮುಂತಾದವರು ಮಹತ್ವದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಈ ಸಿನಿಮಾ ಅಕ್ಟೋಬರ್ ೨೪ರಂದು ರಾಜ್ಯಾದ್ಯಂತ ತೆರೆಗಾಣಲಿದೆ!