ಸಿನಿಮಾ, ಕಿರುತೆರೆ ಜಗತ್ತಿನ ಕಾಮಪುರಾಣಗಳು ಆಗಾಗ ಹೊರ ಜಗತ್ತಿನೆದುರು ಜಾಹೀರಾಗುತ್ತಿರುತ್ತವೆ. ಇದೀಗ ಕಿರುತೆರೆ ಲೋಕವನ್ನು ಅಪಾದಮಸ್ತಕ ಆವರಿಸಿಕೊಂಡಿರುವ ರಿಯಾಲಿಟಿ ಶೋಗಳ ಪ್ರಭೆಯಲ್ಲಿಯೂ ಅಂಥಾದ್ದೇ ಕಾಮಚೇಷ್ಠೆಗಳು ಮೇರೆ ಮೀರಿಕೊಂಡಿವೆ. ಹಾಗೆನೋಡಿದರೆ, ಕನ್ನಡದ ಬಹುತೇಕ ಕಾಮಿಡಿ ಶೋಗಳಲ್ಲಿ ಡೈಲಾಗುಗಳ ಮೂಲಕವೇ ಸಾರ್ವಜನಿಕ ಮೈಥುನ ನಡೆಸುವಂಥಾ ವಿಕೃತಿಯ ಪ್ರದರ್ಶನವಾಗುತ್ತಿದೆ. ಇಂಥಾ ಶೋಗಳನ್ನು ಕುಟುಂಬ ಸಮೇತರಾಗಿ ಕೂತು ನೋಡಲೂ ಅಸಹ್ಯವಾಗುವಂಥಾ ವಾತಾವರಣ ಸೃಷ್ಟಿಯಾಗಿದೆ. ಇಂಥಾದ್ದೊಂದು ದುರಾದೃಷ್ಟಕರ ಪಲ್ಲಟಕ್ಕೆ ಮುನ್ನುಡಿ ಬರೆದ ಕುಖ್ಯಾತಿ ನವರಸ ನಾಯಕ ಜಗ್ಗೇಶ್ ಸಾರಥ್ಯದ ಕಾಮಿಡಿ ಕಿಲಾಡಿಗಳು ಎಂಬ ಶೋಗೆ ಸಲ್ಲುತ್ತೆ. ಇಂಥಾ ಶೋನ ಸೀಜನ್ನೊಂದರ ವಿನ್ನರ್ ಆಗಿದ್ದಾತ ಮಡೇನೂರು ಮನು. ಹಳ್ಳಿ ಪ್ರತಿಭೆ, ಕಷ್ಟದಿಂದ ಬಂದವಬನು ಅಂತೆಲ್ಲ ಸಿಂಪಥಿ ಗಿಟ್ಟಿಸಿಕೊಂಡಿದ್ದ ಮಡೇನೂರು ಮನುವಿನ ಕಾಮಪುರಾಣ ಕಂಡು ಮಾನವಂತ ಮಂದಿ ಅಸಹ್ಯ ಪಟ್ಟುಕೊಳ್ಳಲಾರಂಭಿಸಿದ್ದಾರೆ!

ಇಂಥಾ ಪ್ರಖಾಂಡ ಪ್ರತಿಭೆಯನ್ನು ಕರ್ನಾಟಕಕ್ಕೆ ಪರಿಚಯಿಸಿದ್ದ ಕಾಮಿಡಿ ಕಿಲಾಡಿಗಳು ಶೋ ಒಂದು ಹಂತದ ವರೆಗೆ ನಿಜಕ್ಕೂ ಚೆಂದಗಿತ್ತು. ಶಿವರಾಜ್ ಕೆಆರ್ ಪೇಟೆ, ನಯನಾ ಸೇರಿದಂತೆ ಒಂದಷ್ಟು ಅಪ್ಪಟ ಪ್ರತಿಭಾನ್ವಿತರಿಗೆ ವೇದಿಕೆ ಕಲ್ಪಿಸಿತ್ತು. ಆದರೆ, ಬರಬರುತ್ತಾ ಈ ಶೋನಲ್ಲಿ ಕಾಮಿಡಿಯ ಹೆಸರಲ್ಲಿ ಪ್ರದರ್ಶನಗೊಂಡಿದ್ದು ಥರ್ಡ್‌ಗ್ರೇಡ್ ಸ್ಕಿಟ್ಟುಗಳು ಮಾತ್ರ. ಚಿತ್ರವಿಚಿತ್ರ ಆಂಗಿಕ ಅಭಿನಯ, ಕಾಮದ ಕಿಸುರಿಂದಲೇ ಉದ್ಭವವಾದಂತಿರೋ ಡೈಲಾಗುಗಳಿಂದಲೇ ಈ ಶೋ ಮಾನ ಕಳೆದುಕೊಂಡಿದ್ದೀಗ ಇತಿಹಾಸ. ಇಂಥಾ ಶೋಗಳ ಮೂಲಕ ಒಂದಷ್ಟು ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ಅನ್ನದ ದಾರಿ ಕಂಡುಕೊಂಡಿದ್ದಾರೆ. ಕಲೆಯನ್ನೇ ದೇವರೆಂದುಕೊಂಡು ಲಕ್ಷಣವಾಗಿ ಬದುಕು ನಡೆಸುತ್ತಿದ್ದಾರೆ. ಆದರೆ, ಅದರಾಚೆಯ ಕೊಚ್ಚೆಗೆ ಕಾಲಿಡುವ ಮೂಲಕ ಎಲ್ಲವನ್ನೂ ಹಾಳುಗೆಡವಿಕೊಂಡವನು ಮಡೇನೂರು ಮನು.

ಈತ ಮದುವೆಯಾಗಿದ್ದ. ಚೆಂದದ ಮಡದಿಯಿದ್ದರೂ ಹಗ್ಗ ಕಡಿಯೋ ಚಾಳಿಯಿಂದ ಸಹ ನಟಿ ಮಿಂಚು ಎಂಬಾಕೆಯ ತೆಕ್ಕೆಗೆ ಬಿದ್ದಿದ್ದ. ಹಠಾತ್ತನೆ ಸಿಕ್ಕ ಖ್ಯಾತಿಯ ಅಮಲು ಮತ್ತು ನಾನಾ ಶೋಗಳ ಮೂಲಕ ಕೈ ಸೇರುತ್ತಿದ್ದ ಕಾಸಿನ ಹಬೆಯಲ್ಲಿ ಈ ಹುಡುಗಿ ಮಿಂಚು ಮೈ ಮರೆತಿದ್ದಳಾ? ಆಕೆ ಮುಖ ಮುಚ್ಚಿಕೊಂಡು ಮಾಧ್ಯಮಗಳ ಮುಂದೆ ಹೇಳಿಕೊಂಡ ಪ್ರವರಗಳನ್ನ ಗಮನಿಸಿದರೆ ಮೇಲ್ಕಂಡ ಗುಮಾನಿ ನಿಜವಾಗುತ್ತೆ. ಮಿಂಚು ಮನು ಮೇಲೆ ಮಾಡುತ್ತಿರೋ ಆರೋಪಗಳೆಲ್ಲವೂ ಇದೊಂದು ಒಪ್ಪಿತ ಕೂಡಿಕೆ ಎಂಬುದನ್ನು ಸ್ಪಷ್ಟವಾಗಿಯೇ ಧ್ವನಿಸುವಂತಿವೆ. ವಯಸ್ಸಿನ ಮದದಲ್ಲಿ ವರ್ಷಗಟ್ಟಲೆ ತೊನೆದಾಡಿ, ಕಡೇಗೆ ಅತ್ಯಾಚಾರವಾಯ್ತೆಂಬಂತೆ ಸಾರ್ವಜನಿಕವಾಗಿ ಹಲುಬುವ ಇಂಥಾ ಮನಃಸ್ಥಿತಿಗಳು ಕೇವಲ ಅಸಹ್ಯಕ್ಕೆ ಮಾತ್ರವೇ ಅರ್ಹವಾದಂತೆ ಕಾಣಿಸುತ್ತೆ.

ಇದೀಗ ಮಡೇನೂರು ಮನು ಜೈಲುಪಾಲಾಗಿದ್ದಾನೆ. ಹೀರೋ ಆಗಿ ತನ್ನ ಮೊದಲ ಸಿನಿಮಾವನ್ನು ಸಂಭ್ರಮಿಸಲಾಗದ ಸ್ಥಿತಿ ತಲುಪಿಕೊಂಡಿದ್ದಾನೆ. ಇದುವರೆಗೂ ಜಾಹೀರಾಗಿರುವ ಆತನ ಆಡಿಯೋಗಳನ್ನ ಗಮನಿಸಿದರೆ ಮಡೇನೂರನ ಅಸಲೀ ವ್ಯಕ್ತಿತ್ವದ ಅಂದಾಜು ಸಿಗುತ್ತದೆ. ಈತ ಪಕ್ಕಾ ಫಟಿಂಗ ಅನ್ನೋದಕ್ಕೆ ಬೇರ್‍ಯಾವ ಸಾಕ್ಷಿಗಳೂ ಬೇಕಾದಂತೆ ಕಾಣಿಸೋದಿಲ್ಲ. ಒಂದು ಕಾಲದಲ್ಲಿ ಇಂಥಾ ರಿಯಾಲಿಟಿ ಶೋಗಳು ಹಳ್ಳಿಗಾಡಿನ ಪ್ರತಿಭೆಗಳಿಗೆ ಅಸಲೀ ವೇದಿಕೆಯಂತಿದ್ದವು. ಆದರೆ, ಬರಬರುತ್ತಾ ಅವುಗಳ ಚಹರೆಯೂ ಬದಲಾಗಿದೆ; ಅಂಥವುಗಳಲ್ಲಿ ಸ್ಪರ್ಧಿಗಳಾಗುವವರ ಮನಃಸ್ಥಿತಿಯೂ ಬದಲಾಗಿವೆ. ಹೆತ್ತವರು ದೂರದ ಅದ್ಯಾವುದೋ ಹಳ್ಳಿಯಲ್ಲಿರುತ್ತಾರೆ. ಇಂಥವರು ಬೆಂಗಳೂರಲ್ಲಿ ಏಕಾಂಗಿಯಾಗಿ ಬದುಕುತ್ತಾರೆ. ಈ ರಂಗೀನ್ ಜಗತ್ತಿನ ಥಳುಕುಬಳುಕುಗಳಲ್ಲಿ ಬಹುಬೇಗನೆ ಕಳೆದು ಹೋಗುತ್ತಾರೆ.

ಎಲ್ಲರನ್ನೂ ಒಂದೇ ತಕ್ಕಡಿಯಯಲ್ಲಿಟ್ಟು ತೂಗುವಂತಿಲ್ಲ. ಆದರೆ, ಬೆಂಗಳೂರು ಸೇರಿಕೊಂಡು, ಈವೆಂಟು, ಶೋಗಳು ಅಂತೆಲ್ಲ ಸುತ್ತಾಡುವ ಕೆಲ ಮಂದಿ ಸ್ವೇಚ್ಛೆಯ ತೆಕ್ಕೆಗೆ ಸಿಕ್ಕುಬಿಡುತ್ತಾರೆ. ಅಂಥವರ ಜಗತ್ತಿನಲ್ಲಿ ನಶೆಯೆಂಬುದು ನಿತ್ಯೋತ್ಸವ ಆಚರಿಸುತ್ತೆ. ಹಾಗೆ ನಶೆಯೆಂಬುದು ನೆತ್ತಿಗೇರಿದ ಉನ್ಮತ್ತ ಘಳಿಗೆಯಲ್ಲಿ ಒಂದಷ್ಟು ಹಡಬೇ ಅಫೇರುಗಳು ಬಿಗಿದಪ್ಪಿಕೊಳ್ಳುತ್ತವೆ. ವರ್ಷಗಟ್ಟಲೆ ಅದೇ ನಶೆಯಲ್ಲಿ ಮಿಂದೆದ್ದ ಬಳಿಕ ಕಡೆಗೊಂದು ದಿನ ಯಾರೋ ಮುಖ ಮುಚ್ಚಿಕೊಂಡು ಮಾಧ್ಯಮದ ಮುಂದೆ ಬಂದು ಗೊಳೋ ಅನ್ನುತ್ತಾರೆ. ಮತ್ಯಾವನೋ ಜೈಲು ಪಾಲಾಗುತ್ತಾನೆ. ಅಂತೂ ಈ ಪ್ರಕರಣದಲ್ಲಿ ಚೆಂದಗೆ ಬದುಕು ಕಟ್ಟಿಕೊಳ್ಳುವ ಅವಕಾಶ, ನಟನಾಗಿ ನೆಲೆ ಕಂಡುಕೊಳ್ಳುವ ಪ್ರತಿಭೆ ಹೊಂದಿದ್ದ ಮಡೇನೂರು ಮನು ಮಾನಕಳೆದುಕೊಂಡಿದ್ದಾನೆ. ಆತನ ಸಖಿ ಕೂಡಾ ಅಂಥಾದ್ದೇ ಸ್ಥಿತಿ ತಲುಪಿಕೊಂಡಿದ್ದಾಳೆ. ಯಾವುದಕ್ಕೂ ಪೋಶಕರು ತಮ್ಮ ಮಕ್ಕಳನ್ನು ಇಂಥಾ ಶೋಗಳಿಗೆ ಕಳಿಸೋ ಮುನ್ನ ಸಾವಿರ ದಿಕ್ಕುಗಳಲ್ಲಿ ಆಲೋಚಿಸೋದೊಳಿತು!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!