Karihaida Koragajja Movie: ಪತ್ರಿಕಾಗೋಷ್ಠಿಯಲ್ಲಿ ಜಾಹೀರಾಯ್ತು ಬೆರಗಿನ ಸಂಗತಿ!

Karihaida Koragajja Movie: ಪತ್ರಿಕಾಗೋಷ್ಠಿಯಲ್ಲಿ ಜಾಹೀರಾಯ್ತು ಬೆರಗಿನ ಸಂಗತಿ!

ಕೊಂಚ ಮಂಕಾದಂತೆ ಕಾಣಿಸುತ್ತಿದ್ದ ಕನ್ನಡ ಚಿತ್ರರಂಗವೀಗ ಮತ್ತೆ ಕಳೆಗಟ್ಟಿಕೊಳ್ಳುತ್ತಿದೆ. ಇದೇ ಹೊತ್ತಿನಲ್ಲಿ ನಿರೀಕ್ಷೆ ಇಡಬಹುದಾದ ಒಂದಷ್ಟು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿ ನಿಂತಿವೆ. ಆ ಸಾಲಿನಲ್ಲಿ ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಮೂಡಿ ಬಂದಿರುವ `ಕರಿಹೈದ ಕೊರಗಜ್ಜ’ ಚಿತ್ರ ಮುಂಚೂಣಿಯಲ್ಲಿದೆ. ಮೂರು ವರ್ಷಗಳ ಹಿಂದೆ ಆರಂಭವಾಗಿದ್ದ ಈ ಸಿನಿಮಾ ಸಾಕಷ್ಟು ಏಳುಬೀಳುಗಳ ಹಾದಿಯನ್ನು ಕ್ರಮಿಸುತ್ತಾ ಸಾಗಿಬಂದಿದೆ. ಅಷ್ಟಕ್ಕೂ ದೈವವೊಂದರ ಐತಿಹ್ಯವನ್ನು ಮುಕ್ಕಾಗದಂತೆ ಸಿನಿಮಾ ಚೌಕಟ್ಟಿಗೆ ಒಗ್ಗಿಸೋದೇ ಕಷ್ಟದ ಕೆಲಸ. ಅದನ್ನು ಅಂದುಕೊಂಡಂತೆಯೇ ಮಾಡಿ ಮುಗಿಸಿದ ಖುಷಿಯಲ್ಲಿರುವ ಚಿತ್ರತಂಡವೀಗ ತ್ರೀಡಿ ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ನಿಮಿತ್ತವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಲಾವಿದರು, ನಿರ್ದೇಶಕರು ಒಟ್ಟಾರೆ ಚಿತ್ರದ ಬಗೆಗಿನ ಒಂದಷ್ಟು ಕುತೂಹಲಕರ ವಿಚಾರಗಳನ್ನು ತೆರೆದಿಟ್ಟಿದ್ದಾರೆ.


ಕರಿಹೈದ ಕೊರಗಜ್ಜ ಸನಿಮಾದ ಕೇಂದ್ರರಬಿಂದುವಾಗಿರುವವರು ನಿರ್ದೇಶಕ ಸುಧೀರ್ ಅತ್ತಾವರ. ತುಳು ಚಿತ್ರರಂಗದಲ್ಲಿಯೂ ಕೂಡಾ ತಮ್ಮದೇ ಛಾಪು ಮೂಡಿಸಿರುವ ಅವರ ಪಾಲಿಗೆ ಸದರಿ ಸಿನಿಮಾ ಒಂದಷ್ಟು ಗಾಢವಾದ ಅನುಭವಗಳನ್ನು ಕಟ್ಟಿ ಕೊಟ್ಟಿದೆ. ನಾನಾ ಸವಾಲುಗಳನ್ನು ದಾಟಿಕೊಂಡು ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತ ವಿಚಾರವನ್ನು ಹೇಳುತ್ತಲೇ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮೊದಲೆನ್ನುವಂಥಾ ತ್ರೀಡಿ ಮೋಷನ್ ಪೋಸ್ಟರ್ ರೂಪಿಸಿದ ಬಗ್ಗೆಯೂ ಅವರು ಹೆಮ್ಮೆಯಯ ಮಾತುಗಳನ್ನಾಡಿದ್ದಾರೆ. ಈ ಸಿನಿಮಾದಲ್ಲಿ ಮಹತ್ವದ ಪಾತ್ರಗಳನ್ನು ನಿರ್ವಹಿಸಿರುವ ಶ್ರುತಿ, ಭವ್ಯಾ ಕೂಡಾ ತಂತಮ್ಮ ಅನುಭವಗಳನ್ನು ಹೇಳಿಕೊಂಡು, ನಿರ್ದೇಶಕರು ಮತ್ತು ನಿರ್ಮಾಪಕರು ಸೇರಿದಂತೆ ಒಂದಿಡೀ ಚಿತ್ರತಂಡದ ಧೀಶಕ್ತಿಯನ್ನು ಕೊಂಡಾಡಿದ್ದಾರೆ. ಮಾಜೀ ಸಚಿವೆ ಮೋಟಮ್ಮ ಕೂಡಾ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.


ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ಬಿಡುಗಡೆಗೊಂಡಿರುವ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಬಗ್ಗೆ ಈಗಾಗಲೇ ಸಿನಿಮಾ ಪ್ರೇಮಿಗಳ ಮಧ್ಯೆ ಚರ್ಚೆಗಳು ಶುರುವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡಾ ಕರಿಹೈದ ಕೊರಗಜ್ಜನ ಪ್ರಭೆ ಹಬ್ಬಿಕೊಂಡಿದೆ. ಈ ಪೋಸ್ಟರ್‌ನಲ್ಲಿ ಕೊರಗಜ್ಜನ ಮುಖ ಮಾತ್ರವೇ ಇದೆ. ಆದರೆ, ಅದರಲ್ಲಿ ಹೊಮ್ಮುವ ಕಳೆಯ ಮೂಲಕವೇ ಒಂದಿಡೀ ಸಿನಿಮಾದ ಕಂಟೆಂಟು ಹೊಳೆದಂತೆ ಭಾಸವಾಗುತ್ತದೆ. ಇದುವರೆಗೆ ಚಿತ್ರತಂಡ ಹಂಚಿಕೊಂಡಿರುವ ಒಂದಷ್ಟು ವಿಚಾರಗಳು ಮತ್ತು ಈಗ ಬಿಡುಗಡೆಗೊಂಡಿರುವ ಫಸ್ಟ್ ಲುಕ್ ಕರಿಹೈದ ಕೊರಗಜ್ಜ ಚಿತ್ರದ ಸುತ್ತಾ ಪಾಸಿಟಿವ್ ವಾತಾವರಣ ಸೃಷ್ಟಿಸಿರೋದಂತೂ ಸತ್ಯ.


ತುಳುನಾಡ ದೈವಗಳ ಇತಿಹಾಸ ಸಂಕೀರ್ಣವಾದದ್ದು. ಪ್ರತೀ ದೈವಗಳ ಹಿಂದೆಯೂ ರೋಚಕ ಕಥನಗಳಿದ್ದಾವೆ. ಅಂಥಾ ದೈವಗಳ ನಂಬಿಕೆಯನ್ನೇ ದಕ್ಷಿಣಕನ್ನಡದ ಮಂದಿ ಉಸಿರಾಗಿಸಿಕೊಂಡಿದ್ದಾರೆ. ಅಂಥಾ ಗಾಢ ನಂಬಿಕೆಗಳು ಕರಾವಳಿಯ ಸರಹದ್ದು ದಾಟಿ ಘಟ್ಟದ ಮೇಲೂ ವ್ಯಾಪಿಸಿಕೊಂಡಿದೆ. ಇಂಥಾ ದೈವಗಳ ಕಥೆಯನ್ನು ಸಿನಿಮಾಕ್ಕೆ ಒಗ್ಗಿಸುವಾಗ ಯಾವ ಹಂತದಲ್ಲಿಯೂ ಮೂಲ ನಂಬಿಕೆಗಳು ಅಸ್ತವ್ಯಸ್ತವಾಗದಂತೆ, ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿರ್ದೇಶಕರ ಮೇಲಿರುತ್ತದೆ. ಸ್ವತಃ ತುಳುನಾಡಿನವರಾಗಿದ್ದುಕೊಂಡು, ದೈವಗಳ ಚಾಕರಿಯ ವಾತಾವರಣದಲ್ಲಿಯೇ ಬೆಳೆದಿರುವ ನಿರ್ದೇಶಕರ ಮಾತುಗಳಲ್ಲಿ ಚೆಂದದ ಚಿತ್ರವೊಂದನ್ನು ರೂಪಿಸಿದ ತೃಪ್ತಿ ಎದ್ದು ಕಾಣಿಸುವಂತಿತ್ತು. ಈ ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್ ಟೀಸರ್‌ಗಳ ಬೆನ್ನಲ್ಲಿಯೇ ಮತ್ತೊಂದಷ್ಟು ಸರ್‌ಪ್ರೈಸ್‌ಗಳನ್ನು ಕೊಡಲು ಚಿತ್ರತಂಡ ಅಣಿಗೊಂಡಿದೆ. ಇಷ್ಟರಲ್ಲಿಯೇ ಬಿಡುಗಡೆ ದಿನಾಂಕ ಘೋಶಣೆಯಾಗುವ ಸಾಧ್ಯತೆಗಳೂ ಇದ್ದಾವೆ.

About The Author