ಟನೆಯ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದ ಅನೇಕ ನಟ ನಟಿಯರು ಅನಾರೋಗ್ಯದಿಂದ ನರಳಿ ನಿರ್ಗಮಿಸಿದ ಅನೇಕ ಉದಾಹರಣೆಗಳಿದ್ದಾವೆ. ಇಲ್ಲಿ ಝಗಮಗಿಸೋ ಬೆಳಕಿನ ಮುಂದೆ ಹರಿಯೋ ಖೊಟ್ಟಿ ಕಣ್ಣೀರು, ಭ್ರಾಮಕ ಕಕ್ಕುಲಾತಿಗಳು ಒಬ್ಬಂಟಿಯಾಗಿ ಅಸಹಾಯಕರಾಗಿ ಮಲಗಿದ ಕಲಾವಿದರಿಗೆ ಸಿಗುವುದಿಲ್ಲ. ಹೀಗೆ ಹಠಾತ್ತನೆ ಅನಾರೋಗ್ಯಕ್ಕೀಡಾದ ಕಲಾವಿದರಿಗೆ ನೆರವಾಗೋ ಸಾಂಘಿಕ ಪ್ರಯತ್ನಗಳೂ ಕೂಡಾ ಕನ್ನಡದಲ್ಲಿಲ್ಲ. ಅದೆಲ್ಲದರ ಫಲವಾಗಿಯೇ ಕನ್ನಡ ಕಿರುತೆರೆ ಕಂಡ ಸ್ಫುರದ್ರೂಪಿ ನಟ ಶ್ರೀಧರ್ ನಾಯಕ್ ನೋವಿನ ಕುಲುಮೆಯಲ್ಲಿ ತಿಂಗಳುಗಟ್ಟಲೆ ನರಳಿ ನಿರ್ಗಮಿಸಿದ್ದಾರೆ. ಕೋಟಿ ಮನಸುಗಳ ಹಾರೈಕೆ, ಕೆಲವರ ನಿಸ್ವಾರ್ಥ ಸಹಾಯದಾಚೆಗೂ ಶ್ರೀಧರ್ ನಿನ್ನೆ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಉಸಿರು ನಿಲ್ಲಿಸಿದ್ದಾರೆ.

ಶ್ರೀಧರ್ ಕಿರುತೆರೆ ಜಗತ್ತಿನ ಪಾಲಿಗೆ ಚಿರಪರಿಚಿತರಾಗಿದ್ದ ನಟ. ಸಿನಿಮಾ ರಂಗಕ್ಕೂ ಕೂಡಾ ಅವರು ಹೊಸಬರೇನಲ್ಲ. ವರ್ಷಗಟ್ಟಲೆ ಯಶಸ್ವಿಯಾಗಿ ಪ್ರಸಾರವಾಗಿದ್ದ ಪಾರು ಧಾರಾವಾಹಿಯ ಮೂಲಕ ಶ್ರೀಧರ್ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದರು. ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಿದ್ದ ವಧು ಎಂಬ ಸೀರಿಕಯಲ್ಲಿನಲ್ಲಿಯೂ ಕೂಡಾ ಅವರಿಗೆ ಒಳ್ಳೆ ಪಾತ್ರವೇ ಸಿಕ್ಕಿತ್ತು. ಆದರೆ ವಿಧಿಯೆಂಬುದು ಈ ಸೀರಿಯಲ್ಲಿನ ಚಿತ್ರೀಕರಣದ ಸಂದರ್ಭದಲ್ಲಿಯೇ ಅವರನ್ನು ಕಾಡಿಸಿತ್ತು. ಒಂದು ಸಣ್ಣ ಮಟ್ಟದಲ್ಲಿ ಕಾಣಿಸಿಕೊಂಡಿದ್ದ ಇನ್ಫೆಕ್ಷನ್ ಅತ್ಯಂತ ವೇಗವಾಗಿ ಅವರ ಇಡೀ ದೇಹವನ್ನು ಆವರಿಸಿಕೊಂಡಿತ್ತು. ಅದೆಂಥಾ ರಕ್ಕಸ ಸ್ವರೂಪದ ಮಾರಿಯೆಂದರೆ, ಹದಿನೈದು ದಿನ ಕಳೆಯೋದರಳೊಗಾಗಿ ಶ್ರೀಧರ್ ಅವರ ದೇಹ ಕೃಶವಾಗಿತ್ತು. ಹೊಳೆಯೋ ಚರ್ಮ ಸಂಪೂರ್ಣವಾಗಿ ನಿಸ್ತೇಜಗೊಂಡು ಮೂಳೆಗಂಟಿಕೊಂಡಂತಾಗಿತ್ತು.

ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಧರ್ ಅದರ ವೆಚ್ಚ ಭರಿಸಲಾಗದೆ ಮತ್ತಷ್ಟು ಕುಗ್ಗಿ ಹೋಗಿದ್ದರು. ಯಾಕೆಂದರೆ, ಒಂದು ದಿನದ ಚಿಕಿತ್ಸೆಯ ಖರ್ಚು ಹದಿನೈದು ಸಾವಿರವಾಗಿತ್ತು. ಶ್ರೀಧರ್ ಕಡುಗಷ್ಟದಿಂದ ಬದುಕು ನಡೆಸುತ್ತಿದ್ದವರು. ಅವರಿಗೆ ಅದೆಷ್ಟೇ ಬೇಡಿಕೆ ಇದ್ದರೂ ಅಷ್ಟೊಂದು ಹಣ ಹೊಂದಿಸಲು ಶಕ್ತರಾಗಿರಲಿಲ್ಲ. ಉಳಿಸಿಕೊಂಡಿದ್ದ ಚೂರು ಪಾರು ಹಣವನ್ನ ಗೋರಿಕೊಂಡಿದ್ದ ಪತ್ನಿ ಪುಟ್ಟ ಮಗುವಿನ ಸಮೇತ ಬಿಟ್ಟು ನಡೆದಿದ್ದಳು. ಖಾಸಗಿ ಬದುಕಿನ ದುರಂತದಿಂದ ಕಂಗಾಲಾಗಿದ್ದರೂ ಮುಖದ ತುಂಬ ನಗು ತುಂಬಿಕೊಂಡಿದ್ದವರು ಶ್ರೀಧರ್. ಮಾನಸಿಕ ಆಘಾತವನ್ನು ಅವುಡುಗಚ್ಚಿ ಸಹಿಸಿಕೊಂಡಿದ್ದವರನ್ನು ದೈಹಿಕ ಬಾಧೆ ಹಿಂಡಿ ಹಾಕಿತ್ತು. ಕಡೆಗೂ ತಿಂಗಳುಗಟ್ಟಲೆ ನರಕ ಅನುಭವಿಸಿದ್ದ ಶ್ರೀಧರ್ ಶಾಶ್ವತವಾಗಿ ಕಣ್ಮುಚ್ಚಿದ್ದಾರೆ… ಅವರ ಅಗಲಿಕೆಯಿಂದ ಕನ್ನಡದ ಕಿರುತೆರೆ ಮತ್ತು ಸಿನಿಮಾ ಜಗತ್ತು ಓರ್ವ ಪ್ರತಿಭಾನ್ವಿತ ಕಲಾವಿದ, ಸ್ನೇಹಶೀಲ ವ್ಯಕ್ತಿತ್ವವನ್ನು ಕಳೆದುಕೊಂಡಂತಾಗಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!