ಒಂದು ಸಿನಿಮಾ ರೂಪುಗೊಂಡು ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿತೆಂದರೆ, ಅದದ ಕಥೆ, ರೂಪುಗೊಂಡ ಬಗೆಗಳ ಸುತ್ತಲೇ ಪ್ರೇಕ್ಷಕರೆಲ್ಲರ ಚಿತ್ರ ನೆಟ್ಟಿರುತ್ತೆ. ತುಸು ಆಚೀಚೆ ಕಣ್ಣು ಹಾಯಿಸಿದರೂ ಸಾಕು; ಅಂಥಾ ಸಿನಿಮಾಗಳ ಭಾಗವಾಗಿರುವವರ ಬದುಕಿನ ಕಥೆಗಳು ಗರಿಬಿಚ್ಚಿಕೊಳ್ಳುತ್ತವೆ. ಸಿಹಿ ಕಹಿಗಳ ಹಾದಿಯೊಂದು ತಂತಾನೇ ತೆರೆದುಕೊಳ್ಳುತ್ತೆ. ಸಿನಿಮಾ ರಂಗ ಮಾತ್ರವಲ್ಲ, ಯಾವ ಕ್ಷೇತ್ರವೇ ಆದರೂ ಪ್ರತಿಭೆಯ ಜೊತೆಗೆ ಎಲ್ಲವನ್ನೂ ಅವುಡುಗಚ್ಚಿ ದಾಟಿಕೊಳ್ಳುವ ಛಲ, ಸೋತರೂ ಮತ್ತೆ ಮತ್ತೆ ಪುಟಿದೆದ್ದು ಪ್ರಯತ್ನಿಸುವ ಛಾತಿ ಇಲ್ಲದೇ ಹೋದರೆ ಗೆಲುವೆಂಬುದು ದಕ್ಕುವುದು ಕನಸಾಗಿ ಬಿಡುತ್ತದೆ. ಬಹುಶಃ ಒಂದು ಬಿಂದುವಿನಲ್ಲಿ ಸೋತು ಕೂತಿದ್ದರೆ (gowrishankar srgಗೌರಿಶಂಕರ್ ಕೆರೆಬೇಟೆ ನಾಯಕನಾಗಿ ಅವತರಿಸಲು ಖಂಡಿತವಾಗಿಯೂ ಸಾಧ್ಯವಾಗುತ್ತಿರಲಿಲ್ಲ!

ಈವತ್ತಿಗೆ ಗೌರಿಶಂಕರ್ ಕೆರೆಬೇಟೆಯ ಮಲೆನಾಡು ಶೈಲಿಯ ಪಾತ್ರವಾಗಿ ಭರವಸೆ ಮೂಡಿಸಿದ್ದಾರೆ. ಈ ಪಾತ್ರದ ಮೂಲಕವೇ ತಮ್ಮ ಇಷ್ಟೂ ವರ್ಷಗಳ ಪರಿಶ್ರಮಕ್ಕೊಂದು ಬೆಲೆ ಸಿಕ್ಕೀತೆಂಬ ನಿರೀಕ್ಷೆ ಅವರಲ್ಲಿದೆ. ಈಗಿರುವ ವಾತಾವರಣವನ್ನು ಆಧರಿಸಿ ಹೇಳುವುದಾದರೆ, ಅದು ಕೈಗೂಡುವ ಸ್ಪಷ್ಟ ಸೂಚನೆಗಳು ಕಾಣಿಸುತ್ತಿವೆ. ಗೌರಿಶಂಕರ್ ಮಲೆನಾಡಿನ ಗರ್ಭದಲ್ಲಿರುವ ತೀರ್ಥಹಳ್ಳಿಯವರು. ಪಿಯುಸಿ ಮುಗಿಯೋ ಹೊತ್ತಿಗೆಲ್ಲ ಸಿನಿಮಾ ಕನಸನ್ನು ಅಪಾದಮಸ್ತಕ ತುಂಬಿಕೊಂಡಿದ್ದ ಅವರ ಪಾಲಿಗೆ ಗಾಂಧಿನಗರದ ಸೆಳೆತ ವಿಪರೀತವಾಗಿತ್ತು. ಆ ಕ್ಷಣದಲ್ಲಿ ಅವರೊಳಗಿದ್ದದ್ದು ನಟನಾಗಬೇಕೆಂಬ ಗಾಢ ಹಂಬಲ.

ಪುಟ್ಟ ವಯಸ್ಸಿನಲ್ಲಿಯೇ ಅಂಥಾ ದೊಡ್ಡ ಕನಸು ಸಾಕಿಕೊಂಡು ಗಾಂಧಿನಗರಕ್ಕೆ ಬಂದಿಳಿದಿದ್ದ ಗೌರಿಶಂಕರ್, ಒಂದಷ್ಟು ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ಹಾಗೆ ಒಂದಷ್ಟು ವರ್ಷಗಳ ಕಾಲ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ನಂತರ ಕನಸಿನಾಚೆಯ ವಾಸ್ತವಕ್ಕೆ ತೆರೆದುಕೊಳ್ಳಲೇ ಬೇಕಾದ ಸಂದರ್ಭ ಎದುರಾಗಿತ್ತು. ತನ್ನ ಗುರಿಯನ್ನು ಮನಸಲ್ಲಿ ಹೊಳಪಾಗಿಟ್ಟುಕೊಂಡೇ ಸಿನಿಮಾ ರಂಗದಿಂದ ಹೊರಬಂದಿದ್ದ ಗೌರಿಶಂಕರ್, ಆ ನಂತರದಲ್ಲಿ ಖಾಸಗಿ ವಲಯದಲ್ಲಿ ಉದ್ಯೋಗ ಮಾಡಲಾರಂಭಿಸಿದ್ದರು. ಹಾಗೆ ಕೆಲ ವರ್ಷಗಳ ಕಾಲ ಬೇರೆ ವಲಯದಲ್ಲಿ ಸಕ್ರಿಯರಾಗಿದ್ದ ಗೌರಿಶಂಕರ್, ಅದರ ನಡುವಲ್ಲಿಯೂ ನಟನಾಗುವ ಕನಸನ್ನು ಚಾಲ್ತಿಯಲ್ಲಿಟ್ಟುಕೊಂಡಿದ್ದರು. ಅದರ ಫಲವಾಗಿಯೇ ಅಣಜಿ ನಾಗರಾಜ್ ನಿರ್ಮಾಣದಲ್ಲಿ ಮೂಡಿ ಬಂದಿದ್ದ `ಜೋಕಾಲಿ’ ಚಿತ್ರದ ನಾಯಕನಾಗೋ ಅವಕಾಶ ಕೂಡಿ ಬಂದಿತ್ತು. ಆ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿಕೊಂಡಿತ್ತು.

ಆ ಬಳಿಕ ಒಂದಷ್ಟು ಗ್ಯಾಪಿನ ನಂತರ ಮತ್ತೆ ಗೌರಿಶಂಕರ್ ರಾಜಹಂಸ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಆ ಸಿನಿಮಾ ಕೂಡಾ ಚೆನ್ನಾಗಿದೆ ಎಂಬ ಅಭಿಪ್ರಾಯ ಹೊಮ್ಮಿಕೊಂಡಿತ್ತು. ಇಷ್ಟೆಲ್ಲ ಆದರೂ ಕೂಡಾ ನಿರೀಕ್ಷಿತ ಪ್ರಮಾಣದಲ್ಲಿ ಗೆಲುವು ದಕ್ಕಲಿಲ್ಲ ಅಂತೊಂದು ಕೊರಗು ಗೌರಿಶಂಕರ್ ಅವರಲ್ಲಿ ಇದ್ದೇ ಇತ್ತು. ಮುಂದಿನ ಸಿನಿಮಾವನ್ನು ತಮ್ಮ ಸಹೋದರನ ಜನಮನ ಸಿನಿಮಾಸ್‍ನಲ್ಲಿ ನಿರ್ಮಾಣ ಮಾಡಲು ತಯಾರಿ ಮಾಡಿಕೊಂಡ ಗೌರಿಶಂಕರ್ ಒಂದೊಳ್ಳೆ ಕಥೆಗಾಗಿ ಅರಸುತ್ತಿದ್ದರು. ಆಗ ಎದುರಾದವರು ಮಲೆನಾಡು ಭಾಗದವರೇ ಆದ ರಾಜ್ ಗುರು. 2021ರಲ್ಲಿ ಎದುರಾದ ರಾಜ್ ಗುರು ಆರಂಭಿಕವಾಗಿ ಹೇಳಿದ್ದದ್ದು ಒಂದೇ ಒಂದು ಸಾಲಿನ ಕಥೆಯ ಎಳೆಯನ್ನು ಮಾತ್ರ. ಅದನ್ನು ಕೇಳಿ ಥ್ರಿಲ್ ಆಗಿದ್‍ದ ಗೌರಿಶಂಕರ್ ತಾವೇ ಖುದ್ದಾಗಿ ಎಲ್ಲದರಲ್ಲಿಯೂ ಭಾಗಿಯಾಗಿ, ಅತ್ಯಂತ ಆಸ್ಥೆಯಿಂದ ರೂಪಿಸಿರುವ ಚಿತ್ರ ಕೆರೆಬೇಟೆ.

ಕೆರೆಬೇಟೆ ಎಂಬುದು ಗೌರಿಶಂಕರ್ ಪಾಲಿಗೆ ನಿರ್ಣಾಯಕ ಚಿತ್ರ. ಇಷ್ಟು ವರ್ಷಗಳ ಪರಿಶ್ರಮದ ಫಲವೆಂಬಂತೆ ಅದ್ಭುತ ತಾಂತ್ರಿಕ ವರ್ಗ, ನಿರ್ದೇಶನ ವಿಭಾಗ, ಕಲಾವಿದರ ಸಾಥ್ ಸಿಕ್ಕಿದೆ. ಪ್ರತಿಭಾನ್ವಿತ ನಿರ್ದೇಶಕರೂ ಜೊತೆಯಾಗಿದ್ದಾರೆ. ಈಗಾಗಲೇ ಪ್ರೀಮಿಯರ್ ಶೋನಲ್ಲಿ ಕೆರೆಬೇಟೆ ನೋಡಿದವರೆಲ್ಲ ಥ್ರಿಲ್ ಆಗಿದ್ದಾರೆ. ಗೌರಿಶಂಕರ್ ನಟನೆಯೂ ಸೇರಿದಂತೆ ಒಂದಿಡೀ ಸಿನಿಮಾವನ್ನು ಕೊಂಡಾಡಿದ್ದಾರೆ. ಇದೀಗ ಇದೇ 15ರಂದು ಕೆರೆಬೇಟೆ ಬಿಡುಗಡೆಗೊಳ್ಳುತ್ತಿದೆ. ಆ ಸಂದರ್ಭದಲ್ಲಿ ಪ್ರೀಮಿಯರ್ ಶೋನಲ್ಲಿ ಕಾಣಿಸಿದ ಪ್ರತಿಕ್ರಿಯೆಗಳೇ ಪ್ರತಿಫಲಿಸೋ ಲಕ್ಷಣಗಳಿದ್ದಾವೆ. ಹಾಗಾದಲ್ಲಿ, ಗೌರಿಶಂಕರ್ ಅವರ ಇಷ್ಟೂ ವರ್ಷಗಳ ಶ್ರಮ, ಶ್ರದ್ಧೆಗಳಿಗೆಲ್ಲ ಫಲ ಸಿಕ್ಕಂತಾಗಲಿದೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!