ವರ್ಷದ ಆರಂಭದಿಂದಲೇ ಒಂದಷ್ಟು ಭಿನ್ನ ಧಾಟಿಯ ಚಿತ್ರಗಳು ತೆರೆಗಾಣುತ್ತಿವೆ. ಸೋಲುಗೆಲುವುಗಳಾಚೆಗೆ ಇಂಥಾ ಪ್ರಯತ್ನಗಳು ಚಿತ್ರರಂಗದ ಒಳಿತಿನ ದೃಷ್ಟಿಯಿಂದ ಮಹತ್ವದ್ದಾಗಿ ದಾಖಲಾಗುತ್ತದೆ. ಅಡಿಗಡಿಗೆ ಹೊಸಾ ಬಗೆಯ ಕಥೆಗಳತ್ತ ಹೊರಳಿಕೊಳ್ಳುತ್ತಾ, ಪ್ರೇಕ್ಷಕರ ಮುಂದೆ ಅಚ್ಚರಿಯಂತೆ ಅರಳಿಕೊಳ್ಳುವ ಸಿನಿಮಾಗಳಿವೆಯಲ್ಲಾ? ಚಿತ್ರರಂಗವೊಂದನ್ನು ಜೀವಂತವಾಗಿಡುವುದೇ ಇಂಥಾ ಪಲ್ಲಟಗಳು. ಅಂಥಾದ್ದೊಂದು ಸಾಧ್ಯತೆಯ ಸುಳಿವಿನೊಂದಿಗೆ ಈ ವಾರ ಬಿಡುಗಡೆಗೆ ತಯಾರಾಗಿರುವ ಚಿತ್ರ `ಕೆರೆಬೇಟೆ’. ಮಲೆನಾಡು ಭಾಗದಲ್ಲಿ ಘಟಿಸುವ ಕಥೆಯನ್ನೊಳಗೊಂಡಿರುವ ಕೆರೆಬೇಟೆಯ ಮೂಲಕ (bindu shivaram) ಬಿಂದು ಶಿವರಾಮ್ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ!

ಈಗಾಗಲೇ ಟ್ರೈಲರ್ ಮೂಲಕ, ಚಿತ್ರತಂಡವೇ ಖುದ್ದಾಗಿ ಹಂಚಿಕೊಂಡಿರುವ ಒಂದಷ್ಟು ವಿವರಗಳ ಮೂಲಕ ಬಿಂದು ಶಿವರಾಮ್ ಪಾತ್ರದ ಚಹರೆಗಳು ಜಾಹೀರಾಗಿವೆ. ಇತ್ತೀಚೆಗೆ ಬಿಡುಗಡೆಗೊಂಡಿದ್ದ ಟ್ರೈಲರ್ ನಲ್ಲಿ ಬಿಂದು ಕಾಣಿಸಿಕೊಂಡಿದ್ದ ರೀತಿ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದೆ. ಈ ವಿಚಾರವಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡಾ ಬಿಂದು ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ನಟಿಯಾಗಿ ನೆಲೆ ಕಂಡುಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ ಬಿಂದು ಪಾಲಿಗೆ ಇದೆಲ್ಲವೂ ಸಕಾರಾತ್ಮಕ ಬೆಳವಣಿಗೆಯಾಗಿ ಗೋಚರಿಸುತ್ತಿದೆ. ಈ ಸಿನಿಮಾ ಮೂಲಕವೇ ತನ್ನ ಕನಸಿನ ಹಾದಿಗೆ ಸರಿಕಟ್ಟಾದ್ದೊಂದು ಪ್ರವೇಶ ಸಿಗಲಿದೆ ಎಂಬ ತುಂಬು ನಂಬಿಕೆಯೂ ಬಿಂದು ಶಿವರಾಮ್ ರಲ್ಲಿದೆ.

ನಿರ್ದೇಶಕ ರಾಜ್ ಗುರು ಕೆರೆಬೇಟೆಯ ಪ್ರತೀ ಪಾತ್ರಗಳಿಗೂ ಅಳೆದೂ ತೂಗಿ ಕಲಾವಿದರನ್ನು ಆಯ್ಕೆ ಮಾಡಿದ್ದಾರೆ. ಅದರಲ್ಲಿಯೂ ನಾಯಕಿಯ ಪಾತ್ರಕ್ಕೆ ಮುಗ್ಧತೆ, ಗಟ್ಟಿತನ ಬೆರೆತ, ಎಲ್ಲ ಭಾವಗಳನ್ನೂ ಸಮರ್ಥವಾಗಿ ಅಭಿವ್ಯಕ್ತಿಗೊಳಿಸುವ ಕಲಾವಿದೆಯೇ ಬೇಕಿತ್ತು. ಈ ಪಾತ್ರಕ್ಕಾಗಿ ಆಡಿಷನ್ ಮೂಲಕವೇ ಬಿಂದು ಪ್ರಯತ್ನಿಸಿದ್ದರಂತೆ. ಆ ನಂತರದಲ್ಲಿ ಸದಾಶಿವ ನೀನಾಸಂ ಅವರ ಬಳಿ ನಟನೆಯ ತರಬೇತಿ ಪಡೆದುಕೊಂಡಿದ್ದ ಬಿಂದು, ಈ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಿರ್ದೇಶಕ ರಾಜ್ ಗುರು, ನಾಯಕ ಗೌರಿಶಂಕರ್ ಸೇರಿದಂತೆ ಒಂದಿಡೀ ತಂಡ ಹೆಜ್ಜೆ ಹೆಜ್ಜೆಗೂ ಸಾಥ್ ಕೊಟ್ಟು, ತಿದ್ದಿತೀಡಿದ್ದರಿಂದಲೇ ಆ ಪಾತ್ರ ಅಷ್ಟು ಚೆಂದಗೆ ಮೂಡಿ ಬಂದಿದೆ ಎಂಬುದು ಬಿಂದು ಧನ್ಯತೆ!

ಹೀಗೆ ಕೆರೆಬೇಟೆಯ ಮೂಲಕ ನಾಯಕಿಯಾಗಿ ಭರವಸೆ ಮೂಡಿಸುತ್ತಿರುವ ಬಿಂದು ಶಿವರಾಮ್ ಅಪ್ಪಟ ಬೆಂಗಳೂರಿನ ಹುಡುಗಿ. ಮೌಂಟ್ ಕಾರ್ಮೆಲ್ ಸ್ಕೂಲಿನಲ್ಲಿ ಓದಿದ್ದ ಬಿಂದು, ಶಾಲಾ ದಿನಗಳಲ್ಲಿ ಕ್ರೀಡೆಯತ್ತ ಹೆಚ್ಚು ಆಕರ್ಷಿತರಾಗಿದ್ದರು. ಶಾಲಾ ಕಾಲೇಜು ವಾತಾವರಣದಲ್ಲಿಯೇ ನಟನೆ, ರ್ಯಾಂಪ್ ವಾಕ್ ಮುಂತಾದವುಗಳಿಗೂ ಅವಕಾಶ ಸಿಕ್ಕಿತ್ತಂತೆ. ಅದೆಲ್ಲವನ್ನೂ ಚೆಂದಗೆ ಬಳಸಿಕೊಂಡು ಸಾಗಿ ಬಂದಿರುವ ಅವರು ಇವೆಂಟ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಬಿಬಿಅ ಪದವಿ ಪೂರೈಸಿಕೊಂಡಿದ್ದಾರೆ. ಇದೀಗ ಇವೆಂಟ್ ಮ್ಯಾನೇಜ್ಮೆಂಟ್ ಕಂಪೆನಿಯೊಂದನ್ನೂ ನಡೆಸುತ್ತಿದ್ದಾರೆ. ಒಂದಷ್ಟು ಜಾಹೀರಾತುಗಳಲ್ಲಿಯೂ ನಕಾಣಿಸಿಕೊಂಡಿರುವ ಬಿಂದು, ಹೊಸಾ ಬಗೆಯ ಪಾತ್ರಗಳ ಮೂಲಕ ನಾಯಕಿಯಾಗಿ ನೆಲೆ ಕಂಡುಕೊಳ್ಳುವ ಹಂಬಲ ಹೊಂದಿದ್ದಾರೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!