ಸಿನಿಮಾ ಮಂದಿ ತೋಪು ಪ್ರಾಡಕ್ಟನ್ನು ಬಚಾವು ಮಾಡಲು ಯಾವ್ಯಾವ ಥರದ ನೌಟಂಕಿ ನಾಟಕವಾಡಲೂ ಹಿಂದೆಮುಂದೆ ನೋಡುವವರಲ್ಲ. ಅಗತ್ಯ ಬಿದ್ದರೆ ಸ್ಟಾರ್ ನಟರೂ ಕೂಡಾ ಮೂರೂ ಬಿಟ್ಟವರಂತೆ ಇಂಥಾ ಬೃಹನ್ನಾಟಕದ ಪಾತ್ರಧಾರಿಗಳಾಗಿ ಬಿಡುತ್ತಾರೆ. ಈ ಮಾತಿಗೆ ಸದ್ಯದ ವಾತಾವರಣದಲ್ಲಿ ತಾಜಾ ಉದಾಹರಣೆಯಂತಿರುವಾತ ಉಳಗನಾಯಗನ್ ಕಮಲ್ ಹಾಸನ್. ಈ ಕ್ಷಣದ ತಕರಾರುಗಳೇನೇ ಇರಬಹುದು. ಅದರಾಚೆಗೆ ಕಮಲ್ ಓರ್ವ ಅದ್ಭುತ ನಟ. ಆದರೆ, ಸಿನಿಮಾ ಆಯ್ಕೆಯ ವಿಚಾರದಲ್ಲಿ ಅಷ್ಟೇ ಕೆಟ್ಟ ಟೇಸ್ಟು ಹೊಂದಿರುವ ನಟನೂ ಹೌದು. ಚಿತ್ರವಿಚಿತ್ರ ಪಾತ್ರಗಳಲ್ಲಿ ತನ್ನನ್ನು ತಾನು ಮೆರೆಸಬೇಕೆಂಬ ಇಚ್ಛೆ ಹೊಂದಿರೋ ಕಮಲ್, ಕಥೆಯ ಬಗ್ಗೆ ತಾತ್ಸಾರ ವಹಿಸುತ್ತಾರೆಂಬ ಮಾತಿದೆ. ಅಂಥಾದ್ದೊಂದು ಆರೋಪ ಥಗ್ ಲೈಫ್ ಚಿತ್ರದ ವಿಚಾರದಲ್ಲಿ ಅಕ್ಷರಶಃ ಸಾಬೀತಾಗಿ ಬಿಟ್ಟಿದೆ!

ಥಗ್ ಲೈಫ್ ಅನ್ನು ಕರ್ನಾಟಕದಲ್ಲಿ ಬಿಡುಗಡೆಗೊಳಿಸುವ ಭೂಮಿಕೆಯಲ್ಲಿ ಕಮಲ್ ಕನ್ನಡಿಗರನ್ನು ಕೆಣಕಿದ್ದರು. ಯಾವ ಕಾರಣವೂ ಇಲ್ಲದೆ ಏಕಾಏಕಿ ಭಾಷಾ ತಜ್ಞನಂತೆ ಪೋಸು ಕೊಟ್ಟಿದ್ದ ಕಮಲ್, ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂಬರ್ಥದ ಅಪದ್ಧ ಮಾತುಗಳನ್ನಾಡಿದ್ದರು. ಇಷ್ಟಾದದ್ದೇ ಕನ್ನಡಿಗರೆಲ್ಲ ಸಾರಾಸಗಟಾಗಿ ಕಮಲ್ ಜುಟ್ಟು ಹಿಡಿದ ಝಾಡಿಸಲಾರಂಭಿಸಿದ್ದರು. ಅವಕಾಶ ಸಿಕ್ಕಾಗೆಲ್ಲ ಕಮಲ್ ಹಾಸನ್‌ನನ್ನು ಹೀನಾಮಾನ ನಿಂದಿಸಿ ಸೇಡು ತೀರಿಸಿಕೊಳ್ಳಲಾರಂಭಿಸಿದ್ದರು. ಇದೆಲ್ಲದರ ನಡುವೆ ಥಗ್ ಲೈಫಿಗೆ ಕರ್ನಾಟಕದಲ್ಲಿ ಬ್ಯಾನ್ ಭಾಗ್ಯ ಮುಂದುವರೆದಿದೆ. ಇದೇ ಹೊತ್ತಿನಲ್ಲಿ ಅತ್ತ ತಮಿಳುನಾಡಿನಲ್ಲಿ ಬಿಡುಗಡೆಗೊಂಡಿದೆ. ಅದನ್ನು ನೋಡಿದ ತಮಿಳ್ ಮಕ್ಕಳ್ ಕಂಗಾಲಾಗಿ ಹಾದಿಬೀದಿಗಳಲ್ಲಿ ಗುಣಗಾನ ಮಾಡುತ್ತಿರೋ ಪರಿ ಕಂಡು ಸಮಸ್ತ ಕನ್ನಡಿಗರಿಗೂ ಕಮಲ್ ಅದೆಂಥಾ ಕರುಣಾಮಯಿ ಎಂಬ ಜ್ಞಾನೋದಯವಾಗಿದೆ!

ಎಲ್ಲವೂ ಸರಿಯಾಗಿದ್ದಿದ್ದರೆ ಐದನೇ ತಾರೀಕಿನ ಮುಂಜಾನೆ ಹೊತ್ತಿಗೆಲ್ಲ ಕರ್ನಾಟಕದಲ್ಲಿಯೂ ಥಗ್ ಲೈಫ್ ಹಾವಳಿ ಶುರುವಾಗುತ್ತಿತ್ತು. ಅದೆಂಥಾ ಕೆಟ್ಟ ವಾತಾವರಣವಿದ್ದರೂ ಒಂದಷ್ಟು ರೊಕ್ಕ ಉಳಗನಾಯಗನ್‌ನ ಉಡಿ ಸೇರುತ್ತಿತ್ತು. ಆದರೆ, ಬೆಳ್ಳಂಬೆಳಗ್ಗೆ ಕನ್ನಡದ ಪ್ರೇಕ್ಷಕರಿಗೆ ಥಗ್ ಲೈಫ್ ಮೂಲಕ ಬೀಭತ್ಸ ಅನುಭವ ಖಾಯಮ್ಮಾಗಿತ್ತು. ಅಂಥಾದ್ದೊಂದು ಕಂಟಕದಿಂದ ಕನ್ನಡಿಗರನ್ನು ಪಾರುಗಾಣಿಸಿದ ಪುಣ್ಯ ನಿಸ್ಸಂದೇಹವಾಗಿಯೂ ಕನ್ನಡ ವಿರೋಧಿಯ ಸ್ಥಾನದಲ್ಲಿ ನಿಂತಿರೋ ಕಮಲ್ ಖಾತೆಗೆ ಜಮಾವಣೆಗೊಳ್ಳುತ್ತೆ. ಬಿಟ್ಟಿ ಪ್ರಚಾರದ ಪಟ್ಟುಗಳನ್ನು ಭಾಷಾ ವಿವಾದದ ಬೆಂಕಿ ಹೊತ್ತಿಸುವ ಮೂಲಕ ಕಮಲ್ ಪ್ರದರ್ಶಿಸಿದ್ದೀಗ ಪಕ್ಕಾ ಆಗಿದೆ. ಈ ವಿಚಾರದಲ್ಲಿ ಖಂಡಿತವಾಗಿಯೂ ಯಾವ ಕನ್ನಡಿಗರಿಗೂ ಬೇಸರವೇನಿಲ್ಲ. ಯಾಕೆಂದರೆ, ಖಟ್ಟರ್ ಭಾಷಾಭಿಮಾನಿಗಳಾದ ತಮಿಳು ಪ್ರೇಕ್ಷಕರೇ ಥಗ್ ಲೈಫಿಗೆ ಮಂಗಳಾರತಿ ಎತ್ತುತ್ತಾ ಕನ್ನಡದ ಮಕ್ಕಳು ಹೇಗೋ ಬಚಾವಾದರೆಂದು ಮಮ್ಮಲ ಕರುಬಹತ್ತಿದ್ದಾರೆ!

ಥಗ್ ಲೈಫ್ ಅಸಲೀ ಹಣೆಬರಹ ಏನೆಂಬುದು ಈ ಹಿಂದೆ ಟ್ರೈಲರ್ ಬಿಡುಗಡೆಗೊಂಡಾಗಲೇ ತಿಳಿದು ಹೋಗಿತ್ತು. ಬೇರೆಯವರಿರಲಿ; ಖುದ್ದು ಕಮಲ್ ಆರಾಧಕರೇ ಅದನ್ನು ಕಂಡು ನಿರಾಸೆಗೀಡಾಗಿದ್ದರು. ಬಹುಶಃ ಕಮಲ್ ಮತ್ತು ಮಣಿರತ್ನಂ ಇಬ್ಬರನ್ನು ಬಿಟ್ಟು ಮಿಕ್ಕವರೆಲ್ಲರಿಗೂ ಇದು ಬರಖತ್ತಾಗೋ ಸರಕಲ್ಲ ಎಂಬ ವಿಚಾರ ಖಾತರಿಯಾಗಿತ್ತು. ಥಗ್ ಲೈಫ್ ಚಿತ್ರೀಕರಣದ ಸಂದರ್ಭದಲ್ಲಿಯೇ ಸೆಟ್ಟಿನಿಂದ ಒಂದಷ್ಟು ಸೂಕ್ಷ್ಮ ವಿಚಾರಗಳು ತೇಲಿ ಬಂದಿದ್ದವು. ಇದರಲ್ಲಿ ನಟ ಸಿಂಬು ಮುಖ್ಯ ಪಾತ್ರವೊಂದನ್ನು ನಿರ್ವಹಿಸಿದ್ದಾನೆ. ಆತನಿಗೆ ತಮಿಳುನಾಡಿನಲ್ಲೊಂದಷ್ಟು ಮಾರ್ಕೆಟ್ ವ್ಯಾಲ್ಯೂ ಇದೆ. ಆತನ ಪಾತ್ರಕ್ಕೆ ಬಿಲ್ಡಪ್ ಕೊಟ್ಟು, ಅದರ ಅವಧಿಯನ್ನು ಹಿಗ್ಗಲಿಸುವ ಸರ್ಕಸನ್ನು ಮಣಿರತ್ನಂ ಚಿತ್ರೀಕರಣ ಶುರುವಾದ ನಂತರವೇ ಮಾಡಿದ್ದರೆಂಬ ಮಾತಿದೆ. ಮಣಿರತ್ನಂರಂಥಾ ನಿರ್ದೇಶಕನಿಗೇ ತನ್ನ ಕಥೆಯ ಮೇಲೆ ನಂಬಿಕೆ ಇಲ್ಲದೇ ಹೋಯಿತಾ? ಸಿಂಬುನಂಥಾ ನಟರ ನೇಮು ಫೇಮನ್ನಾದರೂ ಬಳಸಿಕೊಂಡು ಒಂದಷ್ಟು ಬಚಾವಾಗಲು ಹವಣಿಸಿದರಾ ಗೊತ್ತಿಲ್ಲ. ಆದರೆ, ಚಿತ್ರೀಕರಣದ ಹಂತದಲ್ಲಿಯೇ ಈ ಕಥೆ ಮತ್ತಷ್ಟು ಕಲಸುಮೇಲೋಗರವಾದದ್ದಂತೂ ಸತ್ಯ!

ಅಂಥಾದ್ದೊಂದು ಹಳಸಲು ಕಥೆ ಕಂಡ ತಮಿಳ್ ಮಕ್ಕಳ ಮಿದುಳಿಗೆ ಅಕ್ಷರಶಃ ಹುಳ ಬಿದ್ದಂತಾಗಿದೆ. ಈ ಸಿನಿಮಾ ತಕ್ಕ ಮಟ್ಟಿಗಿದ್ದಿದ್ದರೂ ತಮಿಳರ ಭಾಷಾಭಿಮಾನದಿಂದಲೇ ಬಾಕ್ಸಾಫೀಸು ಭದ್ರವಾಗುತ್ತಿತ್ತು. ಅಂಥಾ ಅವಕಾಶವನ್ನು ಮಣಿರತ್ನಂ ಮತ್ತು ಕಮಲ್ ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಕಮಲ್ ವಿರುದ್ಧ ಸಿಡಿದೇಳುತ್ತಲೇ ತಮಿಳರ ಭಾಷಾಭಿಮಾನ ಜಾಗೃತಗೊಂಡಿತ್ತು. ಅಭಿಮಾನದಾಚೆಗೆ ಈ ಸಿನಿಮಾವನ್ನು ಗೆಲ್ಲಿಸಿಕೊಳ್ಳಬೇಕೆಂಬಂಥಾ ನಿರ್ಧಾರವೊಂದು ತಂತಾನೇ ವ್ಯಾಪಿಸಿಕೊಂಡಿತ್ತು. ಇಂಥಾ ಭಾಷಾಭಿಮಾನದಿಂದ ಸಿನಿಮಾ ನೋಡಿದವರಿಗೆ ನಿರಾಸೆಯಲ್ಲದೆ ಬೇರ್‍ಯಾವ ಅನುಭೂತಿಯೂ ದಕ್ಕಿಲ್ಲ. ಇದೊಂದು ಬುರ್ನಾಸು ಚಿತ್ರ ಅಂತ ತಮಿಳು ಪ್ರೇಕ್ಷಕರು ಘಂಟಾಘೋಶವಾಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಲ್ಲಿಗೆ ಸಿನಿಮಾ ಬ್ರಾಂಡಿಂಗಿಗೆ ಭಾಷೆಯ ಬೆಂಕಿಯನ್ನು ನೆಚ್ಚಿಕೊಂಡಿದ್ದ ಕಮಲ್ ಕಸರತ್ತು ಬೆಂಕಿಯಲ್ಲಿ ಬೆಂದು ಜೀರ್ಣವಾದಂತಾಗಿದೆ. ಆದರೆ, ಮೊದಲ ದಿನ ಈ ಸಿನಿಮಾ ನೋಡಿದ ಕೆಟ್ಟ ಅನುಭವವನ್ನು ಮಾತ್ರ ತಮಿಳ್ ಮಕ್ಕಳ ಪಾಲಿಗೆ ಅರಗಿಸಿಕೊಳ್ಳಕಾರದ ಅಗುಳಿನಂತಾಗಿ ಬಿಟ್ಟಿದೆ. ಇದು ಕಮಲ್ ಹಾಸನ್ ವೃತ್ತಿ ಬದುಕಿನ ಮೇಲೆ ರಾಚಿಕೊಂಡ ಬಗ್ಗಡವೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಅದು ಕಮಲ್ ವೃತ್ತಿ ಬದುಕಿನ ಸ್ಮೃತಿಯೊಂದಿಗೆ ಅನುಗಾಲವೂ ಅಚ್ಚಳಿಯದೆ ಉಳಿದುಕೊಳ್ಳುತ್ತೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!