ನ್ನಡ ಚಿತ್ರರಂಗದ (kannada filme industry) ಪಾಲಿಗಿದು ಹಳೇಯ ಕೊಂಡಿಗಳೆಲ್ಲ ಕಳಚಿಕೊಳ್ಳುತ್ತಾ ಸಾಗುತ್ತಿರುವ ಸೂತಕದ ಕಾಲಮಾನ. ಪ್ರಾಕ್ಟಿಕಲ್ ಆಗಿ ಯೋಚಿಸಿದರೆ, ಅದೊಂದು ಸಹಾಜಾತಿ ಸಹಜ ಪಲ್ಲಟದಂತೆ ಕಾಣುತ್ತದೆ. ಆದರೆ, ಭಾವುಕತೆಯ ಪರಿಧಿಗದು ಅಕ್ಷರಶಃ ಸೂತಕದ ಛಾಯೆಯಲ್ಲಿಯೇ ನಿಲುಕುತ್ತೆ. ತಮ್ಮದೇ ರೀತಿಯಲ್ಲಿಗದ ಏಳಿಗೆಗೆ ಕಾರಣರಾಗಿದ್ದ ಅನೇಕರು ಇತ್ತೀಚಿನ ವರ್ಷಗಳಲ್ಲಿ ಒಬ್ಬರ ಹಿಂದೊಬ್ಬರು ಎದ್ದು ನಡೆಯುತ್ತಿದ್ದಾರೆ. ಅದೆಲ್ಲದರ ಮಧ್ಯೆ ಇಳೀವಯಸ್ಸಿನಲ್ಲೆದುರಾದ ಆಘಾತ, ಪದೇ ಪದೆ ಕಾಡುತ್ತಿದ್ದ ಅನಾರೋಗ್ಯವನ್ನೆಲ್ಲ ಜಯಿಸಿಕೊಂಡು ಎಂಭತ್ತರ ಇಳಿಗಾಲದಲ್ಲಿಯೂ ಲವಲವಿಕೆಯಿಂದಿದ್ದವರು (dwarakish) ದ್ವಾರಕೀಶ್. ಕೊರೋನಾ ಕಾಲಘಟ್ಟದಲ್ಲಿಯೇ ಆಗಾಗ ದ್ವಾರಕೀಶ್ ಇನ್ನಿಲ್ಲವೆಂಬಂಥಾ ಸುದ್ದಿ ಹಬ್ಬಿಕೊಂಡಿತ್ತು. ಆದರೆ, ಪ್ರಚಂಡ ಕುಳ್ಳ ಮಾತ್ರ ಒಂದಿನಿತೂ ಬೇಸರಿಸಿಕೊಳ್ಳದೆ ತಾನು ಗಟ್ಟಿಮುಟ್ಟಾಗಿರುವ ಶುಭ ಸುದ್ದಿಯನ್ನು ಖುದ್ದಾಗಿ ಹಂಚಿಕೊಂಡಿದ್ದರು. ಈ ಬಾರಿ ಮಾತ್ರ ಅವರು ಇನ್ನಿಲ್ಲವೆಂಬ ಸುದ್ದಿ ಸುಳ್ಳಾಗಲು ಸಾಧ್ಯವಿಲ್ಲ!
ಬದುಕಿದ್ದಷ್ಟೂ ದಿನ ಪ್ರತೀ ಕ್ಷಣಗಳನ್ನೂ ವರ್ಣರಂಜಿತವಾಗಿ ಆವಾಹಿಸಿಕೊಂಡವರು ದ್ವಾರಕೀಶ್. ನಟನಾಗಬೇಕೆಂಬ ತೀರ್ವ ಬಯಕೆಯ ಸೆಳವಿಗೆ ಸಿಕ್ಕು ತಾನಾತಾನಾಗಿ ಒಂದಿಡೀ ಬದುಕನ್ನು ಅನಿಶ್ಚಿತತೆಯ ತಿರುಗಣಿಗೆ ಒಪ್ಪಿಸಿಬಿಟ್ಟಿದ್ದ ಪ್ರಚಂಡ ಕುಳ್ಳನದ್ದು ನಿಜಕ್ಕೂ ಸ್ಫೂರ್ತಿದಾಯಕ ಹೆಜ್ಜೆಗುರುತು. ಚಿತ್ರರಂಗ ಸೀಮಿತ ಚೌಕಟ್ಟಿನೊಳಗೆ ಗಿರಕಿ ಹೊಡೆಯುತ್ತಿದ್ದ ಕಾಲದಲ್ಲಿಯೇ, ನಟನೆಯಾಚೆಗೂ ಹೊಸಾ ಸಾಹಸಗಳಿಗೆ ಕೈ ಹಾಕಿದ್ದು ಅವರ ಹೆಗ್ಗಳಿಕೆ. ಅದೇನು ಯಡವಟ್ಟುಗಳಾದವೋ ಗೊತ್ತಿಲ್ಲ; ಒಂದು ಹಂತದಲ್ಲಿ ಮುಟ್ಟಿದ್ದೆಲ್ಲ ಮಣ್ಣಾಗಿ, ಗಳಿಸಿದ್ದನ್ನೆಲ್ಲ ಕಳೆದುಕೊಳ್ಳುವ ಸಂದಿಗ್ಧ ಸ್ಥಿತಿ ದ್ವಾರಕೀಶ್ ಅವರನ್ನು ಆವರಿಸಿಕೊಂಡಿತ್ತು. ಅದು ತಂದಿಟ್ಟ ಸಂಕಟವನ್ನೆಲ್ಲ ಮತ್ತೆ ಸಿನಿಮಾ ತೆಕ್ಕೆಗೆ ಬೀಳುವ ಮುಖಾಂತರವೇ ನೀಗಿಕೊಂಡ ಅಪ್ಪಟ ಸಿನಿಮಾ ವ್ಯಾಮೋಹಿ ದ್ವಾರಕೀಶ್.

ಹುಣಸೂರಿನಿಂದ…
ಎಲ್ಲ ಮಿತಿಗಳನ್ನೂ ಮೀರಿಕೊಂಡು ಬೆಳೆದು ನಿಂತಿದ್ದ ದ್ವಾರಕೀಶ್ ಮೂಲತಃ ಮೈಸೂರು ಸೀಮೆಯ ಹುಣಸೂರಿನವರು. ಆ ಪ್ರದೇಶದಲ್ಲಿ ಕಣ್ಣುಬಿಟ್ಟ ಶಾಮಾ ರಾವ್ ದ್ವಾರಕನಾಥ ಎಂಬ ಹುಡುಗ, ಏಕಾಏಕಿ ಬದುಕಿನ ಪಥ ಬದಲಿಸಿ ದ್ವಾರಕೀಶ್ ಆಗಿ ಕನ್ನಡ ಚಿತ್ರರಂಗವನ್ನು ಆವರಿಸಿಕೊಂಡ ಪರಿ ಇದೆಯಲ್ಲಾ? ಅದು ಸಾರ್ವಕಾಲಿಕ ಅಚ್ಚರಿ. ಬದುಕಿನ ಸೆಳವಿಗೆ ಸಿಕ್ಕು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದ ದ್ವಾರಕೀಶ್, ಅದರ ಭಾಗವಾಗಿ ಭಾರತ್ ಆಟೋ ಸ್ಪೇರ್ಸ್ ಅಂತೊಂದು ಅಂಗಡಿ ಶುರುವಿಟ್ಟುಕೊಂಡಿದ್ದರು. ಬಹುಶಃ ಆ ವಲಯದಲ್ಲಿಯೇ ಮುಂದುವರೆದಿದ್ದರೆ ಅವರೊಬ್ಬ ಯಶಸ್ವೀ ಉದ್ಯಮಿಯಾಗೋ ಅವಕಾಶವಿತ್ತು. ಆದರೆ, ಅದಾಗಲೇ ತಲೆಗೆ ನುಸುಳಿಕೊಂಡಿದ್ದ ನಟನಾಗೋ ಗುಂಗೀಹುಳ ಆ ಯಾಂತ್ರಿಕ ವಲಯದಾಚೆ ಅಡಿಯಿರಿಸುವಂತೆ ಮಾಡಿಬಿಟ್ಟಿತ್ತು.
ಯಾವಾಗ ತಾನು ತೆರೆದಿದ್ದ ಅಂಗಡಿ ಒಂದಷ್ಟು ಸಲೀಸಾಗಿ ಮುಂದುವರೆಯಲಾರಂಭಿಸಿತ್ತೋ, ಆವಾಗಿನಿಂದಲೇ ಅದು ತಗನ್ನ ಬದುಕನ್ನು ಆಪೋಶನ ತೆಗೆದುಕೊಳ್ಳುತ್ತದೆಂಬ ಸತ್ಯ ದ್ವಾರಕೀಶ್ ಅವರಿಗೆ ನಿಚ್ಚಳವಾಗಲಾರಂಭಿಸಿತ್ತು. ಆ ಹೊತ್ತಿನಲ್ಲಿಯೇ ನಟನಾಗೋದಷ್ಟೇ ಬದುಕಿನ ಗುರಿಯೆಂದುಕೊಂಡ ಅವರು, ಗಂಭೀರವಾಗಿ ಪ್ರಯತ್ನಿಸಲಾರಂಭಿಸಿದ್ದರು. ಆ ಕಾಲಕ್ಕೆ ಖ್ಯಾತಿ ಹೊಂದಿದ್ದ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ವರಸೆಯಲ್ಲಿ ದ್ವಾರಕೀಶ್ ಗೆ ಮಾವನಾಗುತ್ತಿದ್ದರು. ಕಡೆಗೂ ಅವರ ಮುಂದೆ ನಟನಾಗೋ ಬಯಕೆ ತೋಡಿಕೊಂಡಿದ್ದ ದ್ವಾರಕೀಶ್ ಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಬಿಟ್ಟಿತ್ತು. ಅದರ ಭಾಗವಾಗಿಯೇ, ಹುಣಸೂರು ಕೃಷ್ಣಮೂರ್ತಿಗಳು ತಾವು ನಿರ್ದೇಶಿಸಿದ್ದ `ವೀರ ಸಂಕಲ್ಪ’ ಚಿತ್ರದಲ್ಲಿ ಅಳಿಯನಿಗೊಂದು ಪುಟ್ಟ ಪಾತ್ರ ಕೊಟ್ಟಿದ್ದರು. ಆ ಪಾತ್ರದ ಮೂಲಕವೇ ದ್ವಾರಕೀಶ್ ಪಾಲಿಗೆ ಸಿನಿಮಾರಂಗದ ಹೆಬ್ಬಾಗಿಲು ತೆರೆದಂತಾಗಿತ್ತು!

ಆ ನಂತರದ್ದೆಲ್ಲ ಸಾಹಸ!
ಈವತ್ತಿಗೆ ನಟನಾಗಿ ನೆಲೆ ಕಂಡುಕೊಳ್ಳಲು ರೂಪ, ಮೈಕಟ್ಟು ಮುಂತಾದವುಗಳೇ ಮಾನದಂಡ ಎಂಬಂತಿವೆ. ಆದರೆ, ಆ ಕಾಲಕ್ಕೆ ಪ್ರತಿಭೆಯಿಂದಲೇ ಎಲ್ಲವನ್ನೂ ಮೀರಿಕೊಳ್ಳುವ ಅವಕಾಶಗಳಿದ್ದವು. ಅದಕ್ಕೆ ಸಾಕಷ್ಟು ಕಲಾವಿದರು ಉದಾಹರಣೆಯಾಗಿ ನಿಲ್ಲುತ್ತಾರೆ. ಆ ಸಾಲಿನಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುವವರು ದ್ವಾರಕೀಶ್. ತನ್ನ ಮಾವನ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಪಡೆದುಕೊಂಡರೂ, ಆ ನಂತರದಲ್ಲವರು ಸ್ವತಂತ್ರವಾಗಿ ಬೆಲೆದು ನಿಂತಿದ್ದರು. ಆರಂಭಿಕ ವರ್ಷಗಳಲ್ಲಿ ಸಹ ಕಲಾವಿದನಾಗಿ, ಹಾಸ್ಯ ನಟನಾಗಿ ಸಿಕ್ಕ ಅವಕಾಶಗಳೆಲ್ಲವನ್ನೂ ದ್ವಾರಕೀಶ್ ಸದುಪಯೋಗ ಪಡಿಸಿಕೊಳ್ಳುತ್ತಾ ಸಾಗಿದ್ದರು. ಆ ಹೊತ್ತಿಗೆಲ್ಲ ಸಿನಿಮಾ ರಂಗದ ಆಳ ಅಗಲಗಳನ್ನು ಅರಿತು ಅರಗಿಸಿಕೊಂಡಿದ್ದ ಅವರು, ನಂತರ ಮೆಲ್ಲಗೆ ಸಿನಿಮಾ ನಿರ್ಮಾಣಕ್ಕೆ ಮುಂದಾಗಿಬಿಟ್ಟಿದ್ದರು.
ಅಂದುಕೊಂಡಿದ್ದನ್ನು ಹಿಂದೆ ಮುಂದೆ ನೋಡದೆ ಕಾರ್ಯರೂಪಕ್ಕೆ ತರುವುದು, ಅದಕ್ಕಾಗಿ ಎಂಥಾ ಸವಾಲುಗಳನ್ನಾದರೂ ಎದುರಿಸಲು ಸನ್ನದ್ಧರಾಗೋದು ದ್ವಾರಕೀಶ್ ಜಾಯಮಾನ. ಅದಕ್ಕೆ ತಕ್ಕುದಾಗಿಯೇ 1966ರಲ್ಲಿ `ಮಮತೆಯ ಬಂಧನ’ ಎಂಬ ಚಿತ್ರವನ್ನವರು ನಿರ್ಮಾಣ ಮಾಡಿದ್ದರು. ಆದರೆ, ನಿರ್ಮಾಪಕರಾಗಿ ದ್ವಾರಕೀಶ್ ಗೆ ದೊಡ್ಡ ಮಟ್ಟದ ಗೆಲುವು ತಂದುಕೊಟ್ಟಿದ್ದದ್ದು 1969ರಲ್ಲಿ ತೆರೆಗಂಡಿದ್ದ `ಮೇಯರ್ ಮುತ್ತಣ್ಣ’ ಚಿತ್ರ. ಡಾ ರಾಜ್ ಕುಮಾರ್ ಮತ್ತು ಭಾರತಿ ನಟಿಸಿದ್ದ ಆ ಚಿತ್ರ ದಾಖಲೆಯಂಥಾ ಗೆಲುವು ತನ್ನದಾಗಿಸಿಕೊಂಡಿತ್ತು. ಆ ನಂತರದಲ್ಲಿ ದಶಕಗಟ್ಟಲೆ ಯಶಸ್ಸಿನ ಯಾನದಲ್ಲಿ ತಲ್ಲೀನರಾಗಿದ್ದ ದ್ವಾರಕೀಶ್‍ಗೆ ಆ ನಂತರದಲ್ಲಿ ವಿಶ್ನುವರ್ಧನ್ ಜೊತೆಯಾಗಿದ್ದರು. ತೆರೆ ಮೇಲೆ ಮಾತ್ರವಲ್ಲದೇ, ತೆರೆಯ ಹಿಂದೆಯೂ ಅವರಿಬ್ಬರೂ ಆಪ್ತ ಮಿತ್ರರಾಗಿ ಪ್ರಸಿದ್ಧಿ ಪಡೆದುಕೊಂಡಿದ್ದರು. ಈ ನಡುವೆ ಇದ್ದಕ್ಕಿದ್ದಂತೆ ದ್ವಾರಕೀಶ್ ವ್ಯವಹಾರ ಹಳಿತಪ್ಪಿ ನಾನಾ ಕಷ್ಟಕೋಟಲೆಗಳನ್ನು ಅನುಭವಿಸಿದ್ದರು.

ಆಪ್ತಮಿತ್ರ ಮುನಿಸು!
ಸಿನಿಮಾ ರಂಗಕ್ಕೆ ನಟನಾಗಿ ಆಗಮಿಸಿ, ನಿರ್ಮಾಪಕರಾಗಿ ಅವತರಿಸಿದ್ದ ದ್ವಾರಕೀಶ್ ದಶಕಗಟ್ಟಲೆ ಲಾಭದ ಹಾದಿಯಲ್ಲಿ ಮುಂದುವರೆದಿದ್ದರು. ಆದರೆ, ಅಂಥಾ ಗೆಲುವಿನ ಪರ್ವದ ರೂವಾರಿಯಾಗಿದ್ದ ಅವರನ್ನು ಅಡಿಗಡಿಗೆ ಅನಿರೀಕ್ಷಿತ ಲುಕ್ಸಾನುಗಳು ಕಂಗೆಡಿಸಿ ಹಾಕಿದ್ದವು. ಆಸ್ತಿ ಪಾಸ್ತಿ ಮಾರಿಕೊಂಡು, ಪರ ರಾಜ್ಯಗಳಲ್ಲಿ ಅಜ್ಞಾತವಾಸ ಅನುಭವಿಸುವ ಸ್ಥಿತಿಯೂ ಬಂದೊದಗಿತ್ತು. ಇಂಥಾ ಘಳಿಗೆಯಲ್ಲಿ ವಿಷ್ಣುವರ್ಧನ್ ನಾಯಕನಾಗಿ ನಟಿಸಿದ್ದ ಆಪ್ತಮಿತ್ರ ಚಿತ್ರವನ್ನು ದ್ವಾರಕೀಶ್ ನಿರ್ಮಾಣ ಮಾಡಿದ್ದರು. ಆ ಚಿತ್ರಕ್ಕೆ ದಕ್ಕಿದ ಅಭೂತಪೂರ್ವ ಯಶಸ್ಸು ಏದುಸಿರು ಬಿಡುತ್ತಿದ್ದ ದ್ವಾರಕೀಶ್ ಪಾಲಿಗೆ ಆಕ್ಸಿಜನ್ನು ಕೊಟ್ಟಂತಾಗಿತ್ತು. ಅದೇ ರೀತಿ ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ವಿಷ್ಣು ಪಾಲಿಗೂ ಆ ಗೆಲುವು ಬಿಗ್ ರಿಲೀಫ್ ಕರುಣಿಸಿತ್ತೆಂಬುದು ಸತ್ಯ.
ಹಾಗೆ ನೋಡಿದರೆ, ಇಂಥಾದ್ದೊಂದು ಗೆಲುವು ನಿಜ ಜೀವನದ ಆಪ್ತ ಮಿತ್ರರಂತಿದ್ದ ದ್ವಾರಕೀಶ್ ಮತ್ತು ವಿಷ್ಣುವರ್ಧನ್ ಅವರನ್ನು ಮತ್ತಷ್ಟು ಹತ್ತಿರಾಗಿಸಬೇಕಿತ್ತು. ಒಳಗೊಳಗೇ ಅದೇನು ನಡೆಯಿತೋ ಗೊತ್ತಿಲ್ಲ; ದ್ವಾರಕೀಶ್ ಆಡಿದ ಒಂದಷ್ಟು ಮಾತುಗಳು ಈ ಸ್ನೇಹಕ್ಕೆ ಹುಳಿ ಹಿಂಡಿದ್ದವು. ಅದರ ಆಸುಪಾಸಲ್ಲಿ ಒಂದಷ್ಟು ಊಹಾಪೋಹಗಳು ಹರಿದಾಡಿದ್ದವು. ಮೂದಲಿಕೆಯ ಬಾಣಗಳು ಪ್ರಚಂಡ ಕುಳ್ಳನತ್ತಲೂ ತೂರಿಕೊಂಡಿದ್ದವು. ಒಂದು ವೇಳೆ ಇಂಥಾದ್ದೊಂದು ಕಿಸುರು ಉದ್ಭವಿಸದಿದ್ದರೆ, ನಿರ್ಮಾಪಕನಾಗಿ ದ್ವಾರಕೀಶ್ ಮತ್ತೆ ಮೈಕೊಡವಿಕೊಳ್ಳುತ್ತಿದ್ದರೋ ಏನೋ. ಆದರೆ, ಗೆಲುವಿನ ಸಾಧ್ಯತೆಗಳನ್ನೆಲ್ಲ ಮುನಿಸು ನುಂಗಿಕೊಂಡು ಬಿಟ್ಟಿತ್ತು.

ಒಂದಷ್ಟು ಯಡವಟ್ಟುಗಳು, ಚಾಣಾಕ್ಷತನದ ಮರೆಯಲ್ಲಿನ ಸ್ವಾರ್ಥದಾಚೆಗೂ ದ್ವಾರಕೀಶ್ ಅವರದ್ದು ಮೇರು ವ್ಯಕ್ತಿತ್ವ. ತನ್ನ ಸಿನಿಮಾಗಳಲ್ಲಿ ಯಾವುದೆಂದರೆ ಯಾವುದಕ್ಕೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದ, ಸ್ನೇಹಕ್ಕೆ ಮೆದುವಾಗುತ್ತಿದ್ದ, ಕಿರಿಯರನ್ನೂ ಬರಸೆಳೆದು ಪ್ರೀತಿ ತೋರಿಸುತ್ತಿದ್ದ ದ್ವಾರಕೀಶ್ ಕನ್ನಡ ಚಿತ್ರರಂಗದ ದಂತಕಥೆ. ಈವತ್ತಿಗೆ ಸಿನಿಮಾ ಎಂಬುದು ಬಹುತೇಕರ ಪಾಲಿಗೆ ಜೀವಮಾನದ ಕನಸಾಗಿದ್ದರೆ, ಮತ್ತೆ ಕೆಲ ಖದೀಮರಿಗೆ ಸಿಕ್ಕ ಗ್ಯಾಪಲ್ಲಿ ಕಾಸು ಗುಂಜುವ ರಹದಾರಿಯಂತಾಗಿದೆ. ಕದ್ದ ಕಥೆ ಹಿಡಿದು, ಯಾರದ್ದೋ ಕಾಸನ್ನು ಲಕ್ಷಣವಾಗಿ ಮೇಯ್ದು, ನಡುದಾರಿಯಲ್ಲೇ ಸಿನಿಮಾ ಕಾಲೆತ್ತಿಕೊಳ್ಳುವಂತೆ ಮಾಡೀ ಹಡಬೆಗಳೀಗ ಪಿತಗುಡುತ್ತಿದ್ದಾರೆ. ಇದೆಲ್ಲದರ ಪರಿಚಯವಿಲ್ಲದೆ ಸಿನಿಮಾವನ್ನು ಮೋಹಿಸುತ್ತಾ, ಅದಕ್ಕಾಗಿ ಬದುಕನ್ನೇ ಪಣವಾಗಿಟ್ಟಿದ್ದ ದ್ವಾರಕೀಶ್ ಸಿನಿಮಾ ಪ್ರೇಮಿಗಳಿಗೆ ಯಾವತ್ತಿಗೂ ಸ್ಫೂರ್ತಿಯಾಗುಳಿಯುತ್ತಾರೆ. ಅದು ಅವರ ಬದುಕಿನ ನಿಜವಾದ ಸಾರ್ಥಕತೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!