ಗೊಂದು ಆರೇಳು ವರ್ಷಗಳ ಹಿಂದೆ ಸರಿದೊಮ್ಮೆ ಯೋಚಿಸಿ ನೋಡಿ; ಆ ದಿನಮಾನದಲ್ಲಿ ಶುರುವಾಗಿದ್ದ ಬಿಗ್ ಬಾಸ್ ( bigboss show) ಎಂಬ ಶೋ ಬಗೆಗೊಂದು ಕುತೂಹಲವಿದ್ದದ್ದು ನಿಜ. ಅದರಲ್ಲಿಯೂ ( kiccha sudeep) ಕಿಚ್ಚಾ ಸುದೀಪ್ ಆ ಕಾರ್ಯಕ್ರಮದ ಸಾರಥ್ಯ ವಹಿಸಿಕೊಂಡಿದ್ದರಿಂದಾಗಿ ಅದರ ಆಕರ್ಷಣೆ ಮತ್ತಷ್ಟು ಹೆಚ್ಚಿಕೊಂಡಿತ್ತು. ಹಾಗೆ ನೋಡಿದರೆ, ಆರಂಭದ ಒಂದೆರಡು ಸೀಜನ್ನುಗಳಲ್ಲಿ ಒಂದಷ್ಟು ಪ್ರತಿಭಾನ್ವಿತ ಸ್ಪರ್ಧಿಗಳಿದ್ದರು. ಅದು ಯಥಾವತ್ತಾಗಿ ಭಟ್ಟಿ ಇಳಿಸಿದ ವಿದೇಶಿ ಮೂಲಕ ಶೋ ಆದರೂ ಕೂಡಾ, ಕನ್ನಡ ಮಟ್ಟಿಗದು ತುಂಬಾನೇ ಹೊಸತೆನ್ನಿಸಿತ್ತು. ಆದರೆ, ಮೂರು ಸೀಜನ್ನು ದಾಟಿಕೊಂಡ ನಂತರ ಆ ಶೋನ ಅಭಿಮಾನಿಗಳೇ ಬೋರೆದ್ದು ಹೋಗಿದ್ದರು. ಟಿಆರ್‍ಪಿ ಕೂಡಾ ಬೋರಲು ಬಿದ್ದೇಟಿಗೆ ಚಾನೆಲ್ ಮಂದಿಯ ನವರಂಗಿ ಆಟಗಳು ಶುರುವಾದ ಮೇಲಂತೂ ಇದೊಂದು ಪರಮ ಬೂಸಾ ಶೋ ಎಂಬಂತೆ ಬಿಂಬಿತಗೊಂಡಿದೆ. ಇದೆಲ್ಲದರ ನಡುವೆಯೇ ಬಿಗ್ ಬಾಸ್ (bigboss season 10)  ಹತ್ತನೇ ಸೀಜನ್ನಿಗೆ ಭರದಿಂದ ತಯಾರಿಗಳು ನಡೆದಿವೆ!

ಎರಡ್ಮೂರು ಸೀಜನ್ನಿನ ಬಿಗ್ ಬಾಸ್ ಶೋ ಸಂಪನ್ನಗೊಂಡಾಗಲೇ, ಇನ್ನು ಮುಂದೆ ಕಿಚ್ಚ ಈ ಶೋನಿಂದ ದೂರವಿದ್ದರೇ ಚೆನ್ನ ಎಂಬಂಥಾ ಮಾತುಗಳು ಕೇಳಿಬರಲಾರಂಭಿಸಿದ್ದವು. ಆ ಬಳಿಕ ಕಿಚ್ಚನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬರಲಾರಂಭಿಸಿದ್ದ ನೆಗೆಟಿವ್ ಕಮೆಂಟುಗಳನ್ನು ಕಂಡು ಖುದ್ದು ಅಭಿಮಾನಿಗಳೇ ಬೇಸರಗೊಂಡಿದ್ದರು. ಈವತ್ತಿಗೆ ಅಂಥಾ ಅಭಿಮಾನಿ ಬಳಗಕ್ಕೆ ಕೂಡಾ ಕಿಚ್ಚ ಈ ಬೂಸಾ ಶೋನ ಸಾರಥ್ಯ ವಹಿಸೋದು ಕಿಂಚಿತ್ತೂ ಇಷ್ಟವಿಲ್ಲ. ಆದರೆ ವರ್ಷದ ಬಹುಭಾಗವನ್ನು ಈ ಶೋನಲ್ಲಿಯೇ ಕಳೆಯುತ್ತಿರೋ ಕಿಚ್ಚನಿಗೆ ತನ್ನ ಅಭಿಮಾನಿಗಳ ಮನದಾಅರ್ಥವಗದಿರೋದು ನಿಜಕ್ಕೂ ದುರಂತ.

ಹೊರ ಜಗತ್ತಿನಲ್ಲಿ ಇಂಥಾ ಪಲ್ಲಟಗಳಾಗುತ್ತಿರುವಾಗ, ಬಿಗ್ ಬಾಸ್ ಹತ್ತನೇ ಆವೃತ್ತಿಗೆ ಸಕಲ ತಯಾರಿಗಳೂ ನಡೆಯುತ್ತಿದ್ದಾವೆ. ಆರಂಭದ ದಿನಗಳಲ್ಲಿ ಹೀಗೆ ಹೊಸಾ ಆವೃತ್ತಿ ಶುರುವಾಗುವಾಗ, ಈ ಬಾರಿ ಯಾರೆಲ್ಲಾ ಬರ್ತಾರೆ ಎಂಬಂಥಾ ಕುತೂಹಲ ಇರುತ್ತಿದ್ದದ್ದು ನಿಜ. ಆದರೀಗ ಹಾಗೆ ಬರುವವರಲ್ಲಿ ಬಹುತೇಕರು ತಿಕ್ಕಲು ಆಸಾಮಿಗಳೇ ಎಂಬ ವಿಚಾರ ಎಲ್ಲರಿಗೂ ಮನದಟ್ಟಾಗಿದೆ. ಕಳೆದ ಬಾರಿ ಓಟಿಟಿ ಅಂತೊಂದು ಹೊಸಾ ವರಸೆ ಶುರುವಿಟ್ಟುಕೊಂಡಿದ್ದರಲ್ಲಾ? ಅದಕ್ಕೆ ಸೆಲೆಬ್ರಿಟಿಗಳ ಹೆಸರಲ್ಲಿ ದಾಂಗುಡಿಯಿಟ್ಟವರ ಮುಸುಡಿ ನೋಡಿಯೇ ಪ್ರೇಕ್ಷಕರು ಬೆಚ್ಚಿಬಿದ್ದಿದ್ದರು. ಯಾವಾಗ ಟಿಕ್ ಟಾಕ್ ಮೂಲಕ ಚೆಲ್ಲಾಟ ಆರಂಭಿಸಿದ್ದ ಸೋನು ಗೌಡ ಕೂಡಾ ಬಿಗ್ ಬಾಸ್ ಮಂದಿಯ ಕಣ್ಣಲ್ಲಿ ಸೆಲೆಬ್ರಿಟಿಯಾದಳೋ, ಆ ಕ್ಷಣದಿಂದಲೇ ಬಿಗ್ ಬಾಸ್ ಶೋನ ಅಳಿದುಳಿದ ಘನತೆಯೂ ಮಣ್ಣುಪಾಲಾಗಿದೆ.

ಒಂದೆಡೆ ಯಾವುದೋ ಹಾಡಿಗೆ ಪ್ರಯಾಸ ಪಟ್ಟು ಲಿಪ್ ಸಿಂಕ್ ಮಾಡುತ್ತಾ, ಕೆಕರು ಮಕರಾಗಿ ಕುಣಿಯೋ ಸೋನು ಗೌಡ, ಇನ್ನೊಂದು ಕಡೆ ಸಿನಿಮಾ ಮಂದಿರದೆದುರು ಫಿಟ್ಸ್ ಬಂದವನಂತಾಡುತ್ತಾ, ಶಿಶುಪ್ರಾಸ ಉದುರಿಸೋ ನವಾಜ್ ಎಂಬ ತಿಕ್ಕಲು ಆಸಾಮಿ… ಇವರಂತೂ ಹಳೇಯ ಬಿಗ್ ಬಾಸ್ ಸ್ಪರ್ಧಿ ಫಟಿಂಗ ಪ್ರಥಮನನ್ನೇ ಮೀರಿಸುವ ಮಹಾನ್ ಪ್ರತಿಭೆಗಳು. ಇಂಥವರನ್ನೆಲ್ಲ ಗುಡ್ಡೆ ಹಾಕಿಕೊಳ್ಳುವ ಮೂಲಕ ಬಿಗ್ ಬಾಸ್ ಮಂದಿ ಸೆಲೆಬ್ರಿಟಿ ಎಂಬ ಪದದ ಪರಿಭಾಷೆಯನ್ನೇ ಬದಲಿಸಿ ಬಿಟ್ಟಿದ್ದರು. ಇಂಥವೆಲ್ಲ ಈ ಜನರ ಕಣ್ಣಿಗೆ ಅದು ಹೇಗೆ ಸೆಲೆಬ್ರಿಟಿಗಳಂತೆ, ಪ್ರತಿಭಾವಂತರಂತೆ ಕಾಣಿಸುತ್ತಾರೋ ಭಗವಂತನೇ ಬಲ್ಲ. ಚಾಲ್ತಿಯಲ್ಲಿರಲು ಈ ಸೈಕ್ ಗಿರಾಕಿಗಳು ಏನು ಮಾಡಲೂ ಹೇಸೋದಿಲ್ಲ. ಸರಕೆಲ್ಲ ಖಾಲಿಯಾದರೆ ವಾರ್ಡ್‍ರೋಬಿನಲ್ಲಿ ಬೂಸಲು ಹಿಡಿದ ಹಳೇ ಕಾಚಗಳ ಕಲೆಕ್ಷನ್ನು ಪ್ರದರ್ಶಿಸಲೂ ಈ ಅಸಹ್ಯದ ಪ್ರತಿಭೆಗಳು ಹಿಂದೆಮುಂದೆ ನೋಡುವುದಿಲ್ಲ!

ಇಂಥಾ ಕೆಲಸಕ್ಕೆ ಬಾರದವರನ್ನು ಒಂದು ಮನೆಯಲ್ಲಿ ಗುಡ್ಡೆ ಹಾಕಿಕೊಂಡು, ಅವುಗಳ ತಿಪ್ಪರಲಾಗವನ್ನು ಸೆನ್ಸೇಷನ್ ಎಂಬಂತೆ ತೋರಿಸುತ್ತಾ, ವಾರಕ್ಕೆರಡು ದಿನ ಘನ ಗಾಂಭೀರ್ಯದಿಂದ ಪಂಚಾಯ್ತಿ ನಡೆಸೋ ಕಿಚ್ಚ ಬಹಳಷ್ಟು ಸಲ ಕಾಮಿಡಿ ಪೀಸಿನಂತೆ ಕಾಣಿಸುತ್ತಾರೆ. ನಿಖರವಾಗಿ, ನಿಷ್ಠುರವಾಗಿ ಹೇಳಬೇಕೆಂದರೆ, ಬಿಗ್ ಬಾಸ್ ಎಂಬುದು ಕಿಚ್ಚನ ಘನತೆಯನ್ನು ಪಾತಾಳಕ್ಕಿಳಿಸುತ್ತಿದೆ. ಈ ಶೋವನ್ನು ಬರಖತ್ತಾಗಿಸಲು ನಾನಾ ಪಟ್ಟುಗಳನ್ನು ಪ್ರದರ್ಶಿಸಿದ್ದ ಪರಮೇಶ್ವರ್ ಗುಂಡ್ಕಲ್ ಈಗ ಬೇರೆಡೆಯಲ್ಲಿ ಪ್ರತಿಷ್ಟಾಪಿಸಲ್ಪಟ್ಟಿದ್ದಾರೆ. ಅವರ ಅವಧಿಯಲ್ಲಿಯೇ ಈ ಶೋನ ಮರ್ಯಾದೆ ಮಾಸಲಾಗಿ ಬಿಟ್ಟಿತ್ತು. ಇನ್ನು ಮುಂದೆ ಅದ್ಯಾರೇ ಇದರ ಸಾರಥ್ಯ ವಹಿಸಿದರೂ ಬಿಗ್ ಬಾಸ್ ಮೇಲೆ ನಿರೀಕ್ಷೆಯಿಟ್ಟುಕೊಳ್ಳುವಂತಿಲ್ಲ. ಯಾಕೆಂದರೆ, ಅದೀಗ ಬಿಗ್ ಬೂಸಾ ಶೋ ಆಗಿ ರೂಪಾಂತರಗೊಂಡು ಅಕ್ಷರಶಃ ಸವಕಲಾಗಿ ಬಿಟ್ಟಿದೆ. ಹೀಗಿದ್ದರೂ ಕಿಚ್ಚ ಮತ್ತೊಂದು ಸೀಜನ್ನಿಗೆ ಸಂಭ್ರಮದಿಂದ ತಯಾರಾಗುತ್ತಿರುವಾಗ ಅವರನ್ನು ಇಷ್ಟಪಡುವ ಮಂದಿಯ ಮನಸಿಗೆ ವಿಷಾದವೊಂದರ ಮುಳ್ಳು ಚುಚ್ಚಿದಂತಾಗಿದೆ. ಪ್ರೇಕ್ಷಕರೇ ಈ ಪರಿಯಾಗಿ ಉಗಿಯುತ್ತಿದ್ದರೂ ನಾಚಿಕೆಯಾಗೋದಿಲ್ಲವೇ ಸ್ವಾಮಿ?

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!