ಕಳೆದ ವರ್ಷ ತೆರೆಗಂಡಿದ್ದ `ಬ್ಲಿಂಕ್’ ಎಂಬ ಚಿತ್ರ ಪ್ರೇಕ್ಷರ ಮೆಚ್ಚುಗೆ ಗಳಿಸಿಕೊಂಡಿತ್ತು. ಹೊಸತನದ ಕಥನದ ಮೂಲಕ ಒಂದು ಮಟ್ಟದ ಗೆಲುವನ್ನೂ ದಾಖಲಿಸಿತ್ತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಶ್ರೀನಿಧಿ ಬೆಂಗಳೂರು. ಇದೊಂದು ಚಿತ್ರದ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಶ್ರೀನಿಧಿ ಪಾಲಿಗೆ ಭರಪೂರ ಮೆಚ್ಚುಗೆ ಸಿಕ್ಕಿತ್ತು. ಅದಾದ ಬಳಿಕ ಸುದೀರ್ಘಾವಧಿಯಲ್ಲಿ ಮತ್ತೊಂದು ಸಿನಿಮಾ ರೂಪಿಸುವಲ್ಲಿ ಶ್ರೀನಿಧಿ ನಿರತವಾಗಿದ್ದರು. ಅದರ ಫಲವಾಗಿಯೇ ವೀಡಿಯೋ ಅಂತೊಂದು ಸಿನಿಮಾ ತಯಾರಾಗಿದೆ. ಸದ್ದೇ ಇಲ್ಲದಂತೆ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರತಂಡವೀಗ ಟೀಸರ್ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ.
ಮೊದಲ ಚಿತ್ರದ ಮೂಲಕವೇ ಗಮನ ಸೆಳೆದ ನಿರ್ದೇಶಕನ ಎರಡನೇ ಹೆಜ್ಜೆಯ ಬಗ್ಗೆ ಅಗಾಧ ನಿರೀಕ್ಷೆಗಳಿರೋದು ಮಾಮೂಲು. ಈ ನಿಟ್ಟಿನಲ್ಲಿ ನೋಡ ಹೋದರೆ ಶ್ರೀನಿಧಿ ನಿರ್ದೇಶನದ ವೀಡಿಯೋ ಚಿತ್ರದ ಟೀಸರ್ ಪ್ರೇಕ್ಷಕರ ನಿರೀಕ್ಷೆಯನ್ನ ಮಟ್ಟವನ್ನು ಮುಟ್ಟಿದಂತಿದೆ. ಅದಕ್ಕೆ ಕೇಳಿ ಬರುತ್ತಿರುವ ಸದಭಿಪ್ರಾಯಗಳನ್ನು ಗಮನಿಸಿದರೆ ಪ್ರೇಕಕರೊಂದಷ್ಟು ತೃಪ್ತರಾದಂತಿದೆ. ಬ್ಲಿಂಕ್ ಚಿತ್ರದಲ್ಲಿ ಶ್ರೀನಿಧಿ ಟೈಮ್ ಟ್ರಾವೆಲಿಂಗ್ ಕಥೆಯ ಚುಂಗು ಹಿಡಿದು ಗೆದ್ದಿದ್ದರು. ಎರಡನೇ ಸಿನಿಮಾದಲ್ಲವರು ಹಾರರ್ ಕಥನದ ಮೊರೆ ಹೋದಂತಿದೆ. ಹಾಗಂತ ಅದನ್ನು ಸಿದ್ಧಸೂತ್ರಗಳ ಹಾರರ್ ಚಿತ್ರಗಳ ಸಾಲಿಗೆ ಸೇರಿಸುವಂತಿಲ್ಲ. ಅಂಥಾದ್ದೊಂದು ಭಿನ್ನ ಛಾಯೆ ಈ ಟೀಸರ್ ಮೂಲಕ ಸ್ಪಷ್ಟವಾಗಿಯೇ ಕಾಣಿಸಿದೆ.
ಫೌಂಡ್ ಫೋಟೇಜ್ ಶೈಲಿಯಲ್ಲಿ ರೂಪುಗೊಂಡಿರುವ ಈ ಸಿನಿಮಾದ ಟೀಸರ್ ಗೆ ಬಹುತೇಕ ಸಕಾರಾತ್ಮಕ ಪ್ರತಿಕ್ರಿಯೆ ಹರಿದು ಬರುತ್ತಿದೆ. ವಿಶೇಷವೆಂದರೆ, ಬ್ಲಿಂಕ್ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ದೀಕ್ಷಿತ್ ಶೆಟ್ಟಿ ಶ್ರೀನಿಧಿಯ ಎರಡನೇ ಹೆಜ್ಜೆಗೂ ಜೊತೆಯಾಗಿದ್ದಾರೆ. ಅವರೇ ಸ್ವಂತ ನಿರ್ಮಾಣ ಸಂರ್ಸತೆಯ ಮೂಲಕ ವೀಡಿಯೋವನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಟೀಸರ್ ಮೂಲಕ ಸದ್ದು ಮಾಡುತ್ತಿರುಉವ ವೀಡಿಯೋ ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿದೆ. ಉಳಿಕೆ ಕೆಲಸ ಕಾರ್ಯಗಳನ್ನುಉ ಬೇಗನೆ ಮುಗಿಸಿಕೊಂಡು ಈ ವರ್ಷವೇ ವೀಡಿಯೋವನ್ನು ತೆರೆಗಾಣಿಸಲು ಚಿತ್ರತಂಡ ನಿರ್ಧರಿಸಿದೆಯಂತೆ.