ರಂಗಭೂಮಿ ಹಿನ್ನೆಲೆಯ ಪ್ರತಿಭಾನ್ವಿತ ನಟಿ ಅಕ್ಷತಾ ಪಾಂಡವಪುರ (akshatha pandavapura) ಈಗೊಂದಷ್ಟು ಕಾಲದಿಂದ ಭಾರೀ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣವಾಗಿರೋದು ಅವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ `ಪಿಂಕಿ ಎಲ್ಲಿ’ (pinki elli) ಚಿತ್ರ. ಈಗಾಗಲೇ ಈ ಸಿನಿಮಾ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿದೆ. ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪಾಲ್ಗೊಂಡು ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ. ಅದರಲ್ಲಿಯೂ ವಿಶೇಷವಾಗಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ (akshatha pandavapura) ನಟನೆಗೆ ಎಲ್ಲೆಡೆಯಿಂದಲೂ ಮೆಚ್ಚುಗೆಗಳು ಮೂಡಿಕೊಳ್ಳುತ್ತಿವೆ. ಈ ಪಾತ್ರದಿಂದಲೇ ಅಕ್ಷತಾರ ಕಲಾಬದುಕು ಮತ್ತಷ್ಟು ಕಳೆಗಟ್ಟಿಕೊಂಡಿದೆ. ಎಂಥಾ ಪಾತ್ರಕ್ಕಾದರ ಸೈ ಎಂಬಂಥಾ ಪ್ರತಿಭೆಯೊಂದಿಗೆ, ಸವಾಲಿನ ಪಾತ್ರಗಳನ್ನೇ ಬಯಸುತ್ತಾ ಬಂದಿರುವ ಅಕ್ಷತಾರನ್ನೀಗ ಪಿಂಕಿಯ ಧ್ಯಾನ ಸಂಪೂರ್ಣವಾಗಿ ಆವರಿಸಿಕೊಂಡಿದೆ.
ಸಾಮಾನ್ಯವಾಗಿ ರಂಗಭೂಮಿಯಲ್ಲಿ ತರಬೇತಿ ಪಡೆದುಕೊಂಡು, ಪಳಗಿಕೊಂಡವರೆಲ್ಲರ ಪ್ರಧಾನ ಉದ್ದೇಶ ಸಿನಿಮಾ ಆಗಿರುತ್ತೆ. ಅದರಲ್ಲಿಯೂ ಕಮರ್ಶಿಯಲ್ ಸಿನಿಮಾಗಳಲ್ಲಿ ಮಿರಮಿರನೆ ಮಿಂಚಬೇಕೆಂಬ ಬಯಕೆ ಬಹುತೇಕರನ್ನು ಆವರಿಸಿಕೊಂಡಿರುತ್ತದೆ. ಅಂಥಾದ್ದರಲ್ಲಿ ಪ್ರೇಕ್ಷಕರೆಲ್ಲ ಹೋದಲ್ಲಿ ಬಂದಲ್ಲಿ `ನೀವ್ಯಾಕೆ ಕಮರ್ಶಿಯಲ್ ಸಿನಿಮಾಗಳಲ್ಲಿ ನಟಿಸೋದಿಲ್ಲ?’ ಎಂಬಂಥಾ ಪ್ರಶ್ನೆ ಎಸೆದರೂ ಸವಾಲಿನ ಪಾತ್ರಗಳ ಧ್ಯಾನದಲ್ಲಿ ಮಗ್ನರಾಗಿರುವವರು (akshatha pandavapura) ಅಕ್ಷತಾ ಪಾಂಡವಪುರ. ಹೆಚ್ಚಾಗಿ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಅವರಿಗೆ ಪಿಂಕಿ ಎಲ್ಲಿ ಚಿತ್ರದ ಮೂಲಕ ಒಂದೊಳ್ಳೆ ಪಾತ್ರವೇ ಒಲಿದು ಬಂದಿದೆ. ಆ ಪಾತ್ರ ತಂದೊಡ್ಡಿದ ಎಲ್ಲ ಸವಾಲುಗಳನ್ನೂ ಕ್ರಿಯಾಶೀಲತೆಯಿಂದ ಸ್ವೀಕರಿಸಿ, ಸಾಕಷ್ಟು ತಯಾರಿ ನಡೆಸಿಯೇ ಕಳೆದು ಹೋದ ಕೂಸು ಪಿಂಕಿಯ ತಾಯಿಯಾಗಿ ಅಕ್ಷತಾ ಮನೋಜ್ಞವಾಗಿ ನಟಿಸಿದ್ದಾರೆ.
ಅಷ್ಟಕ್ಕೂ ನಿರ್ದೇಶಕ ಪೃಥ್ವಿ ಕೋಣನೂರು ಈ ಪಾತ್ರ ಸೃಷ್ಟಿಸಿಯಾದ ನಂತರ ಅದಕ್ಕೊಪ್ಪುವ ನಟಿಗಾಗಿ ಹುಡುಕಾಡಿದ್ದರಂತೆ. ಅದಾಗಲೇ ಪಲ್ಲಟ ಚಿತ್ರದ ಮೂಲಕ ರಾಜ್ಯ ಪ್ರಶಸ್ತಿ ಗಳಿಸಿಕೊಂಡಿದ್ದ ಅಕ್ಷತಾರೇ ಅದಕ್ಕೆ ಸೂಕ್ತ ಎಂಬಂಥಾ ತೀರ್ಮಾನಕ್ಕೂ ಬಂದಿದ್ದರಂತೆ. ಹಾಗೆ ಈ ವಿಚಾರವನ್ನು ಅಕ್ಷತಾರ ಮುಂದಿಟ್ಟಿದ್ದ ಪೃಥ್ವಿ, ಒಂದಷ್ಟು ವಿಚಾರಗಳನ್ನು ಹೇಳುತ್ತಲೇ ಸೆಳೆದು ಬಿಟ್ಟಿತ್ತು. ಸಾಮಾನ್ಯವಾಗಿ ಯಾವುದೇ ಪಾತ್ರ ಬಂದರೂ ಅಕ್ಷತಾ ಸ್ಕ್ರಿಪ್ಟ್ ನೋಡದೆ ಒಪ್ಪಿಗೆ ಸೂಚಿಸುವವರಲ್ಲ. ಅದೇ ರೀತಿ ಪಿಂಕಿ ಎಲ್ಲಿ ಚಿತ್ರದ ಸ್ಕ್ರಿಪ್ಟ್ ಓದಿ ಅವರೊಳಗೆ ಉಳಿದುಕೊಂಡಿದ್ದದ್ದು ವರ್ಣಿಸಲು ಸಾಧ್ಯವಾಗದ ಥ್ರಿಲ್ ಮಾತ್ರ!
ಹಾಗಂತ, ಈಗ ತೆರೆಯ ಮೇಲೆ ನೋಡಿದರೆ ಸಹಜಾಭಿನಯ ಅನ್ನಿಸೋ ಆ ಪಾತ್ರ ಅಷ್ಟು ಸಲೀಸಿನದ್ದಲ್ಲ. ನಟನೆಯಲ್ಲಿ ಕಾಂಪ್ಲೆಕ್ಸ್ ಪ್ಲೇ ಮಾಡೋ ವಿಧಾನವನ್ನ ಕರಗತ ಮಾಡಬೇಕಿತ್ತು. ಅಕ್ಷತಾ ಪಾಲಿಗದು ಹೊಸತಾಗಿದ್ದರೂ ಆಸ್ಥೆಯಿಂದ ತಯಾರಿ ನಡೆಸಿದ ಫಲವಾಗಿಯೇ ಅವರು ಮನದುಂಬಿ ನಟಿಸಿದ್ದಾರೆ. ವಿಶ್ವ ಮಟ್ಟದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಈ ಹಾದಿಯಲ್ಲಿ ನಿರ್ದೇಶಕ ಪೃಥ್ವಿ ಕೂಡಾ ಅಲ್ಲಲ್ಲಿ ಸಲಹೆ ಸೂಚನೆ ನೀಡುತ್ತಾ ಸಂಪೂರ್ಣ ಸಹಕಾರ ನೀಡಿದ್ದರಂತೆ. ಅದರ ಫಲವಾಗಿಯೇ ಬದುಕು ಪೂರ್ತಿ ನೆನಪಿಟ್ಟುಕೊಳ್ಳುವ, ಸದಾ ಕಾಲವೂ ಹೆಮ್ಮೆಯಾಗಿ ಉಳಿದು ಹೋಗುವ ಪಾತ್ರದಲ್ಲಿ ನಟಿಸಲು ಸಾಧ್ಯವಾಗಿದೆ ಎಂಬ ತೃಪ್ತ ಭಾವ ಅಕ್ಷತಾರಲ್ಲಿದೆ.
ಹೀಗೆ ಈವತ್ತಿಗೆ ಪಿಂಕಿ ಎಲ್ಲಿ ಚಿತ್ರ ಮೂಲಕ ಕರ್ನಾಟಕದ ಗಡಿ ದಾಟಿ, ವಿಶ್ವ ಮಟ್ಟದಲ್ಲಿ ಗಮನ ಸೆಳೆದಿರುವ ಅಕ್ಷತಾ ಖಂಡಿತವಾಗಿಯೂ ಅಪರೂಪದ ನಟಿ. ಮೇಲುಕೋಟೆಯ ಬಾಜಿನಲ್ಲಿರುವ ಪಾಂಡವಪುರದ ಅಪ್ಪಟ ಸಂಪ್ರದಾಯಸ್ಥ ರೈತಾಪಿ ಕುಟುಂದಿಂದ ಬಂದವರು ಅಕ್ಷತಾ. ಕಾಲೇಜು ದಿನಗಳ ಹೊತ್ತಿಗೆಲ್ಲ ತನ್ನ ಭವಿಷ್ಯವನ್ನು ರಂಗಭೂಮಿಯಲ್ಲಿಯೇ ಹೊಳಪಾಗಿಸಬೇಕೆಂಬ ಗಟಿ ನಿರ್ಧಾರಕ್ಕೆ ಬಂದಿದ್ದ ಅವರು, ಆ ನಂತರ ಆ ಹಾದಿಯಲ್ಲೇ ಹೆಜ್ಜೆಯಿರಿಸಿದ್ದರ ಹಿಂದೆ ಸಂಘರ್ಷದ ಗುರುತುಗಳಿವೆ. ಸಾಮಾನ್ಯವಾಗಿ ಹೆಣ್ಣುಮಕ್ಕಳು ನಟನೆಗಿಳಿಯುವುದು, ಅದನ್ನೇ ಬದುಕಿಗೂ ನೆಚ್ಚಿಕೊಳ್ಳುವುದೆಲ್ಲವೂ ಸವಾಲು. ಮೊದಲಿಗೆ ಆಪ್ತ ಜೀವಗಳ ಕಡೆಯಿಂದಲೇ ವಿರೋಧಗಳು ವ್ಯಕ್ತವಾಗುತ್ತವೆ. ಅದೆಲ್ಲವನ್ನೂ ದಾಟಿಕೊಂಡು ಅಕ್ಷತಾ ಪಾಂಡವಪುರ ಪರಿಪೂರ್ಣ ನಟಿಯಾಗಿ ರೂಪುಗೊಂಡಿದ್ದೇ ಒಂದು ಸೋಜುಗ!
ಕಾಲೇಜು ಮಗಿಯುತ್ತಲೇ ದೆಹಲಿಯ ಸ್ಕೂಲ್ ಆಫ್ ಡ್ರಾಮಾದಲ್ಲಿ ತರಬೇತಿ ಪಡೆಯಲು ಹೊರಟು ನಿಂತ ಅಕ್ಷತಾ ಮನೆ ಮಂದಿಗೆ ಸುಳ್ಳು ಹೇಳಿ ತೆರಳಬೇಕಾಗಿ ಬಂದಿತ್ತು. ನಾಟಕ ಕಲಿಯಲು ಹೋಗುತ್ತೇನೆಂದರೆ ಖಂಡಿತಾ ಅಡ್ಡಗಾಲು ಹಾಕುತ್ತಾರೆಂದು ಗೊತ್ತಿದ್ದರಿಂದಲೇ ಅವರು ಶಿಕ್ಷಕ ತರಬೇತಿಗೆ ಹೋಗುತ್ತಿರೋದಾಗಿ ಸುಳ್ಳು ಹೇಳಿದ್ದರಂತೆ. ಹಾಗೆ ನಾಟಕ ಅಭಿನಯ ತರಬೇತಿಗೆ ತೆರಳಿ, ಎಲ್ಲವನ್ನೂ ಶ್ರದ್ಧೆಯಿಂದ ಕಲಿತು ಬಂದವರ ಮುಂದೆಯೂ ಸವಾಲುಗಳಿದ್ದವು. ಏನೇ ಬಂದರೂ ರಂಗಭೂಮಿಯ ನಂಟನ್ನು ಬಿಡಲೊಲ್ಲದ ಅಕ್ಷತಾ ಅಲ್ಲಿಯೇ ಸಕ್ರಿಯರಾದರು. ಹಲವಾರು ನಾಟಕಗಳಲ್ಲಿ ನಟಿಸುತ್ತಾ ಕಲಾ ಪ್ರೇಮಿಗಳ ಮನಗೆದ್ದರು.
ಆ ನಂತರ ಒಬ್ಬಳು ಎಂಬ ಏಕಾಂತ ನಾಟಕದ ಮೂಲಕ ಅಕ್ಷತಾ ಪಾಂಡವಪುರ ಹೆಸರುವಾಸಿಯಾಗಿ ಬಿಟ್ಟಿದ್ದರು. ಹೀಗೆ ಥರ ರದ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾ ಸಾಗಿ ಬಂದಿದ್ದ ಅಕ್ಷತಾರಿಗೆ 2015ರಲ್ಲಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುವ ಅವಕಾಶ ಒದಗಿ ಬಂದಿತ್ತು. ಅದರಲ್ಲಿನ ನಟನೆಗಾಗಿ ರಾಜ್ಯ ಪ್ರಶಸ್ತಿಯೂ ಒಲಿದು ಬಂದಿತ್ತು. ಆ ಬಳಿಕ ಮತ್ತೆ ರಂಗಭೂಮಿ, ಪ್ರಯೋಗಳಿಗೆ ಒಡ್ಡಿಕೊಂಡಿದ್ದವರಿಗೆ, ಅಚ್ಚರಿದಾಯಕವಾಗಿ ಕೂಡಿ ಬಂದ ಅವಕಾಶ ಪಿಂಕಿ ಎಲ್ಲಿ ಚಿತ್ರದ್ದು. 2017ರ ಸುಮಾರಿಗೆ ಆರಂಭಗೊಂಡಿದ್ದ ಈ ಸಿನಿಮಾವೀಗ ವಶ್ವಟ್ಟಲ್ಲಿ ಹೇಗೆಲ್ಲ ಮಿರುಗಿದೆ, ಎಂತೆಂಥಾ ಪ್ರಶಸ್ತಿಗಳಿಗೆ ಭಾಜನವಾಗಿದೆ ಎಂಬುದೆಲ್ಲ ಕಣ್ಣ ಮುಂದಿನ ಸತ್ಯ.
ಹೀಗೆ ಭಿನ್ನ ಪಾತ್ರಗಳಲ್ಲಿ ನಟಿಸುತ್ತಾ, ಪ್ರತಿಭಾನ್ವಿತ ನಟಿ ಅನ್ನಿಸಿಕೊಂಡಿದ್ದರೂ, ಅಕ್ಷತಾರ ಪ್ರಧಾನ ಆದ್ಯತೆ ರಂಗಭೂಮಿಯೇ. ಕಮರ್ಶಿಯಲ್ ಸಿನಿಮಾಗಳಲ್ಲಿ ಹಾಗೆ ಮಿಂಚಿ, ಅಬ್ಬರಿಸಿ ಮರೆಯಾಗೋ ಪಾತ್ರಗಳಿಗಿಂತ, ಪಿಂಕಿ ಎಲ್ಲಿ ಚಿತ್ರದಲ್ಲಿನ ಮನಸಲ್ಲುಳಿಯೋ ಪಾತ್ರಗಳೇ ಅವರ ಪ್ರಧಾನ ಆಧ್ಯತೆ. ಇದೀಗ ಚಾನಲ್ ಥಿಯೇಟರ್ಸ್ ಪಾಂಡವಪುರ ಎಂಬ ತಂಡ ಕಟ್ಟಿಕೊಂಡಿರುವ ಅಕ್ಷತಾರಿಗೆ ಏಕವ್ಯಕ್ತಿ ಶೋಗಳು, ಭಿನ್ನ ಪ್ರಯೋಗಗಳೆಂದರೆ ಅಚ್ಚುಮೆಚ್ಚು. ಇದೆಲ್ಲದರಾಚೆ ಬರವಣಿಗೆಯಲ್ಲಿ ಅತೀವ ಆಸಕ್ತಿ ಹೊಂದಿರುವ ಅವರು `ಲೀಕ್ ಔಟ್’ ಎಂಬ ಕಥಾ ಸಂಕಲನವನ್ನೂ ಹೊರ ತಂದಿದ್ದಾರೆ. ಅದೇ ಕಥೆಗಳನ್ನಾಧರಿಸಿ, ಏಕಾಂಗಿಯಾಗಿ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ನಾಟಕ ಪ್ರದರ್ಶನಗಳನ್ನು ನೀಡುತ್ತಿದ್ದಾರೆ.
ಹೀಗೆ ಸಂಚರಿಸುತ್ತಾ, ಲೀಕ್ ಔಟ್ ನಾಟಕ ಪ್ರದರ್ಶನ ಮಾಡುತ್ತಾ ವಿಶಿಷ್ಟ ಅನುಭವದ ಗಣಿಯನ್ನೇ ಅಕ್ಷತಾ ತನ್ನದಾಗಿಸಿಕೊಂಡಿದ್ದಾರೆ. ಯಾವುದೇ ಸಹಾಯಧನ, ಅನುದಾನಗಳ ಮರ್ಜಿಗೆ ಬೀಳದೆ ಸ್ವತಂತ್ರವಾಗಿ ರಂಗ ಪ್ರಯತ್ನ ನಡೆಸುತ್ತಿರುವ ಅಕ್ಷತಾ ಸಾಹಸೀ ಹೆಣ್ಣುಮಗಳಾಗಿಯೂ ಕಾಣಿಸುತ್ತಾರೆ. ಇಂಥಾ ರಂಗಭೂಮಿಯ ಪ್ರತಿಭೆಯೀಗ ಪಿಂಕಿ ಎಲ್ಲಿ ಚಿತ್ರದ ಚೆಂದದ ಪಾತ್ರದ ಮೂಲಕ ಪ್ರೇಕ್ಷಕರನ್ನೆಲ್ಲ ಮುಖಾಮುಖಿಯಾಗುವ ಖುಷಿಯಲ್ಲಿದ್ದಾರೆ. ತನ್ನ ಪಾಲಿಗೆ ಹೊಸಾ ಕಲಿಕೆಗೆ ಅನುವು ಮಾಡಿಕೊಟ್ಟ, ಪ್ರಶಸ್ತಿ ತಂದುಕೊಟ್ಟ ಪಿಂಕಿ ಎಲ್ಲ ಬಗ್ಗೆ ಅಕ್ಷತಾರಿಗೆ ವಿಶೇಷ ಅಭಿಮಾನವಿದೆ. ಆ ಚಿತ್ರವನ್ನು, ತಮ್ಮ ಪಾತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆಂಬ ಸಹಜ ಕುತೂಹಲವೂ ಇದೆ. ಅದೆಲ್ಲದಕ್ಕೂ ಈ ವಾರ ಉತ್ತರ ಸಿಗಲಿದೆ.