radhika apte: ಚಿತ್ರೋದ್ಯಮದಲ್ಲಿ ಮಹಿಳೆಯರದ್ದು ಎರಡನೇ ದರ್ಜೆ!

ಕೆಲವೊಮ್ಮೆ ಮಾದಕ ಅವತಾರದ ಮೂಲಕ, ಮತ್ತೆ ಕೆಲವಾರು ಘಳಿಗೆಗಳಲ್ಲಿ ಬಿಡುಬೀಸಾದ ಹೇಳಿಕೆಗಳ ಮೂಲಕ ವಿವಾದದ ಕೇಂದ್ರಬಿಂದುವಾಗುತ್ತಾ ಬಂದಾಕೆ (radhika apte) ರಾಧಿಕಾ ಆಪ್ಟೆ. ಎಂಥಾದ್ದೇ ಪಾತ್ರಕ್ಕಾದರೂ ಸೈ ಅನ್ನುವಂತಾ ರಾಧಿಕಾ, ಅದೊಂದು ತೆರನಾದ ಬಂಡುಕೋರ ಮನಃಸ್ಥಿತಿಯನ್ನು ತನ್ನೊಳಗೆ ಸಾಕಿಕೊಂಡಂತೆ ಕಾಣಿಸುತ್ತಾಳೆ. ಕೆಡುಕಾದರೂ ಸರಿಯೇ; ಅನ್ನಿಸಿದ್ದನ್ನು ಹೇಳಿ ಬಿಡಬೇಕೆಂಬಂಥಾ ವ್ಯಕ್ತಿತ್ವ (radhika apte) ರಾಧಿಕಾಳದ್ದು. ಅಂಥಾ ಗಟ್ಟಿತನದಿಂದಲೇ ಇದೀಗ ಆಕೆ ಚಿತ್ರರಂಗದಲ್ಲಿ, ಅದರಲ್ಲೂ ವಿಶೇಷವಾಗಿ ತೆಲುಗು ಭಾಷೆಯ ಸಿನಿಮಾ ಜಗತ್ತನ್ನು ಆಳುತ್ತಿರುವ ಪುರುಷ ಪ್ರಧಾನ ವ್ಯವಸ್ಥೆಯ ಬಗ್ಗೆ ಮಾತಾಡಿದ್ದಾಳೆ. ಕೇವಲ ಒಂದಷ್ಟು ತೆಲುಗು ಸಿನಿಮಾಗಳಲ್ಲಿ ಮಾತ್ರವೇ ನಟಿಸಿರುವ ಈಕೆ ಮಾತಾಡಿರುವ ರೀತಿಯ ಬಗ್ಗೆ ಪರ ವಿರೋಧಗಳೂ ಹುಟ್ಟಿಕೊಂಡಿವೆ.
ಹಾಗೆ ನೋಡಿದರೆ, ಯಾವ ಚಿತ್ರರಂಗವೂ ಪುರುಷ ಪ್ರಧಾನ ಮನಃಸ್ಥಿತಿಯಿಂದ ಹೊರತಾಗಿಲ್ಲ. ಈ ಕಾರಣದಿಂದಲೇ ಪ್ರತಿಭೆಯಾಚೆಗೂ ಹೀರೋಗಿರಿಯೇ ವಿಜೃಂಭಿಸುತ್ತಾ ಬಂದಿದೆ. ನಾಯಕನ ನಂತರವಷ್ಟೇ ನಾಯಕಿ ಎಂಬಂಥಾ ಮನಸ್ಥಿತಿ ಸಿನಿಮಾವೊಂದರ ತಳಹದಿಯಿಂದಲೇ ಮೇಳೈಸುತ್ತಿರೋದೇನು ಗುಟ್ಟಿನ ವಿಚಾರವಲ್ಲ. ಈ ನಿಟ್ಟಿನಲ್ಲಿ ನೋಡ ಹೋದರೆ, ತೆಲುಗು ಭಾಷೆಯಲ್ಲಿ ಪುರುಷ ಪ್ರಧಾನ ವ್ಯವಸ್ಥೆಯ ಠೇಂಕಾರ ತುಸು ಹೆಚ್ಚೇ ಇದೆ ಅನ್ನೋದು ರಾಧಿಕಾ ಆಪ್ಟೆಯ ಅಭಿಪ್ರಾಯ. ತೆಲುಗು ಚಿತ್ರರಂಗದಲ್ಲಿ ಎಲ್ಲವೂ ಪುರುಷರನ್ನು ಮೆರೆಸುವ ಉದ್ದೇಶದಿಂದಲೇ ಸೃಷ್ಟಿಯಾಗುತ್ತಾ ಬಂದಿದೆ. ಈಗೊಂದು ದಶಕಗಳಿಂದೀಚೆಗೆ ಲೆಕ್ಕ ಹಾಕಿದರೆ, ಬಂದಿರುವ ಎಲ್ಲ ಸಿನಿಮಾಗಳಲ್ಲಿಯೂ ಕೂಡಾ ಪುರುಷರ ಪಾರುಪಥ್ಯವೇ ಅಧಿಕವಾಗಿದೆ. ಕೀರ್ತಿ ಸುರೇಶ್, ಅನುಷ್ಕಾ ಶೆಟ್ಟಿಯಂಥಾ ಕೆಲವರು ನಟಿಸಿದ್ದ ನಾಯಕಿ ಪ್ರಧಾನ ಚಿತ್ರಗಳು ಹಿಟ್ ಆಗಿವೆ. ಆದರೂ ಅಂಥಾ ಸಿನಿಮಾಗಳನ್ನು ಮಾಡುವತ್ತ ತೆಲುಗು ಚಿತ್ರರಂಗದ ಮಂದಿ ಒಲವು ತೋರುತ್ತಿಲ್ಲ ಅನ್ನೋದು ಆಪ್ಟೆಯ ಕಂಪ್ಲೆಂಟು!
ಮುಂದುವರೆದು ಮಾತಾಡಿರುವ ರಾಧಿಕಾ ಆಪ್ಟೆ, ಇತ್ತೀಚೆಗೆ ತೆರೆ ಕಂಡಿರುವ ಸಲಾರ್, ಗುಂಟೂರ್ ಖಾರಂ ಚಿತ್ರಗಳಲ್ಲಿಯೂ ನಾಯಕಿಯರಿಗೆ ಹೆಚ್ಚೇನೂ ಪ್ರಧಾನ್ಯತೆ ಕೊಟ್ಟಿಲ್ಲ ಅಂದಿದ್ದಾಳೆ. ಒಟ್ಟಾರೆಯಾಗಿ ತೆಲುಗು ನಾಡಿನ ಸಿನಿಮಾ ರಂಗವೇನಿದ್ದರೂ ಮುಖ್ಯ ನಾಯಕರ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತೆ. ನಿರ್ದೇಶಕರು ಮತ್ತು ಬರಹಗಾರರೆಲ್ಲ ಅಂಥವರ ಸ್ಟಾರ್ ಡಂ ಮೆರೆಸಲೋಸುಗ ಮಾತ್ರವೇ ಕಾರ್ಯ ನಿರ್ವಹಿಸುತ್ತಾರೆಂಬ ಘನ ಗಂಭೀರ ಆರೋಪವನ್ನೂ ರಾಧಿಕಾ ಮಾಡಿದ್ದಾಳೆ. ಇದಲ್ಲದೇ ತೆಲುಗು ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕಿಯರು, ತಂತ್ರಜ್ಞರ ಸಂಖ್ಯೆಯೂ ತೀರಾ ಕಮ್ಮಿ ಇದೆ. ಅಂಥವರು ಪುರುಷ ಪ್ರಧಾನ ವ್ಯವಸ್ಥೆಯ ನಡುವೆ ಕಳೆದೇ ಹೋಗುವಂಥಾ ವಾತಾವರಣವಿದೆ ಎಂದೂ ರಾಧಿಕಾ ಆಪ್ಟೆ ಮಾತಾಡಿದ್ದಾಳೆ. ಸದ್ಯ ಈ ಮಾತುಗಳು ತೆಲುಗು ಚಿತ್ರರಂಗದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿರೋದಂತೂ ಸತ್ಯ!