matnee movie releasing updates: ಮತ್ತೆ ಮೋಡಿ ಮಾಡಲಿದೆಯಾ ಡಿಂಪಲ್ ಕ್ವೀನ್-ಸತೀಶ್ ಜೋಡಿ?

ನೀನಾಸಂ ಸತೀಶ್ (ninasam sathish) ಮತ್ತು ಡಿಂಪಲ್ ಕ್ವೀನ್ (rachitha ram) ರಚಿತಾ ಜೋಡಿಯಾಗಿ ನಟಿಸಿರುವ ಚಿತ್ರ `ಮ್ಯಾಟ್ನಿ’. ಇದೇ ಜೋಡಿ ಈ ಹಿಂದೆ ಅಯೋಗ್ಯ ಚಿತ್ರದ ಮೂಲಕ ಪ್ರೇಕ್ಷಕರನ್ನು ಆವರಿಸಿಕೊಂಡಿತ್ತು. ಅಯೋಗ್ಯ ಬಿಗ್ ಹಿಟ್ ಚಿತ್ರವಾಗಿ ದಾಖಲಾಗಿದ್ದೀಗ ಇತಿಹಾಸ. ಸಾಮಾನ್ಯವಾಗಿ ಇಂಥಾ ಹಿಟ್ ಸಿನಿಮಾ ಕೊಟ್ಟ ಜೋಡಿಯೊಂದು ಮತ್ತೊಮ್ಮೆ ಒಂದಾದಾಗ, ಆ ಸಿನಿಮಾದ ಬಗ್ಗೆ ಬೇಯದ್ದೇ ಮಟ್ಟದಲ್ಲಿ ಕುತೂಹಲ ಮೂಡಿಕೊಳ್ಳುತ್ತೆ. ಆ ಕಾರಣದಿಂದಲೇ ಮ್ಯಾಟ್ನಿ ಆಗಾಗ ಸದ್ದು ಮಾಡುತ್ತಾ ಸಾಗಿ ಬಂದಿದೆ. ಇದೀಗ ಈ ಸಿನಿಮಾ ಸುತ್ತ ಗಾಂಧಿನಗರದಗುಂಟ ಒಂದಷ್ಟು ಸುದ್ದಿಗಳು ಹರಿದಾಡುತ್ತಿವೆ. ಅದರನ್ವಯ ಹೇಳೋದಾದರೆ, ಇದೇ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ `ಮ್ಯಾಟ್ನಿ’ ಬಿಡುಗಡೆಗೊಳ್ಳುವ ಲಕ್ಷಣಗಳಿದ್ದಾವೆ.
ಜಿ3 ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರವನ್ನು ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಆರಂಭವಾದಾಗಿಂದ ಇಲ್ಲಿಯವರೆಗೂ ಕೂಡಾ ಹಂತ ಹಂತವಾಗಿಕ ಒಂದಷ್ಟು ಪಕುತೂಹಲ ಮೂಡಿಸುತ್ತಾ ಬಂದಿದೆ. ಖುದ್ದು ನೀನಾಸಂ ಸತೀಶ್ ಅವರೇ ಮ್ಯಾಟ್ನಿಯನ್ನು ತನ್ನ ವೃತ್ತಿ ಬದುಕಿನ ವಿಶೇಷ ಚಿತ್ರವಾಗಿ ಪರಿಗಣಿಸಿದ್ದಾರೆ. ಇದೆಲ್ಲದರ ನಡುವಲ್ಲೀಗ ಸದ್ದೇ ಇಲ್ಲದಂತೆ ಮ್ಯಾಟ್ನಿಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳೆಲ್ಲವೂ ಸಮಾಪ್ತಿಗೊಂಡಿದೆ. ಇನ್ನೇನು ಪ್ರಚಾರ ಕಾರ್ಯಕ್ಕೆ ಸನ್ನದ್ಧಗೊಂಡಿರುವ ಚಿತ್ರತಂಡ, ಏಪ್ರಿಲ್ ಮೊದಲ ವಾರದಲ್ಲಿಯೇ ಮ್ಯಾಟ್ನಿಯನ್ನು ತೆರೆಗಾಣಿಸಲು ಅಣಿಯಾಗಿದೆ ಎನ್ನಲಾಗುತ್ತಿದೆ.
ನೀನಾಸಂ ಸತೀಶ್ ಓರ್ವ ನಟನಾಗಿ ಇತ್ತೀಚಿನ ವರ್ಷಗಳಲ್ಲಿ ಅಕ್ಷರಶಃ ರೂಪಾಂತರ ಹೊಂದಿದ್ದಾರೆ. ಸಿನಿಮಾದಿಂದ ಸಿನಿಮಾಕ್ಕೆ ಹೊಸಾ ಬಗೆಯ ಪಾತ್ರಗಳಿಗೆ ಹಾತೊರೆಯುವವರು ಮಾತ್ರವೇ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯ. ಈ ದಿಸೆಯಲ್ಲಿ ನೋಡ ಹೋದರೆ, ಸತೀಶ್ ಅತ್ಯಂತ ಜಾಗರೂಕ ನಡೆ ಅನುಸರಿಸುತ್ತಿದ್ದಾರೆ. ಮ್ಯಾಟ್ನಿ ಕೂಡಾ ಅಂಥಾ ಹೊಸತನದ ಹಾದಿಯಲ್ಲಿ ನಳನಳಿಸುತ್ತಿರುವಂತೆ ಭಾಸವಾಗುತ್ತಿದೆ. ಈ ಎಲ್ಲ ಕಾರಣದಿಂದಾಗಿ ಸತೀಶ್ ಅಭಿಮಾನಿ ಬಳಗ ಮ್ಯಾಟ್ನಿಗಾಗಿ ಕಾತರಿಸುತ್ತಿದೆ. ಅತ್ತ ಡಿಂಪಲ್ ಅಭಿಮಾನಿಗಳಲ್ಲಿಯೂ ಮ್ಯಾಟ್ನಿಯತ್ತಲೊಂದು ನಿರೀಕ್ಷೆ ಇದ್ದೇ ಇದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ, ಮ್ಯಾಟ್ನಿ ಏಪ್ರಿಲ್ ಮೊದಲ ವಾರ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ!