ಕಿಚ್ಚನ ಅಭಿಮಾನಿಗಳು ತಮ್ಮಿಷ್ಟದ ನಟನ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ. ಇದೇ ಹಂತದಲ್ಲಿ ಅಭಿಮಾನಿಗಳೆಲ್ಲ ಕಿಚ್ಚ ಹೆಚ್ಚೆಚ್ಚು ಸಿನಿಮಾಗಳಲ್ಲಿ ಬ್ಯುಸಿಯಾಗೋದನ್ನು ಮನಸಾರೆ ಬಯಸಿದ್ದರು. ಮೇಲುನೋಟಕ್ಕೆ ಈಗೊಂದಷ್ಟು ವರ್ಷಗಳಿಗೆ ಹೋಲಿಸಿದರೆ, ಏಕಕಾಲದಲ್ಲಿಯೇ ಎರಡೆರಡು ಸಿನಿಮಾಗಳಲ್ಲಿ ಕಿಚ್ಚ ಬ್ಯುಸಿಯಾಗಿದ್ದಾರೆ. ಆದರೆ, ಅದೇ ಹೊತ್ತಿನಲ್ಲಿ ಬಿಗ್ ಬಾಸ್ ಎಂಬೋ ಬೂಸಾ ಶೋನತ್ತಲೇ ಕಿಚ್ಚನ ಚಿತ್ತ ಬಲವಾಗಿ ನೆಟ್ಟುಕೊಂಡಿರೋದೂ ಖಾತರಿಯಗಿದೆ. ಕಳೆದ ಶೋ ಮುಗಿದ ನಂತರದಲ್ಲಿ ಕಿಚ್ಚ ಇನ್ನುಮುಂದೆ ಬಿಗ್ ಬಾಸ್ ಶೋ ಸಾರಥ್ಯ ವಹಿಸೋದಿಲ್ಲ ಅಂತೊಂದು ನಿರ್ಧಾರ ಪ್ರಕಟಿಸಿದ್ದರು. ಅದನ್ನು ಕಂಡು ಕಿಚ್ಚನ ಪಾಳೆಯ ಬಹುವಾಗಿ ಸಂಭ್ರಮಿಸಿತ್ತು. ಆದರೆ ಕಿಚ್ಚನ ನಾಜೂಕು ನಡೆಯ ಅರಿವಿರುವವರಿಗೆಲ್ಲ ಅದು ಆ ಕ್ಷಣದ ಡ್ಯಾಮೇಜ್ ಕಂಟ್ರೋಲಿಂಗ್ ಕಿತಾಪತಿ ಅನ್ನೋದು ಸ್ಪಷ್ಟವಾಗಿತ್ತು. ಅದೀಗ ನಿಜವಾಗಿದೆ!
ಈವತ್ತಿನ ದೃಶ್ಯಮಾಧ್ಯಮವನ್ನು ಪ್ರಥಮನಂಥಾ ನುಸಿಪೀಡೆಗಳೂ ಕೂಡಾ ಸಲೀಸಾಗಿ ಮ್ಯಾನೇಜು ಮಾಡಬಹುದು. ಪತ್ರಕರ್ತರೆಂಬ ಖಬರೇ ಇಲ್ಲದೆ, ನಟ ನಟಿಯರ ಮುಂದೆ ಅಭಿಮಾನಿಗಳಾಗಿ ಮುದುರಿ ಕೂರುವವರನ್ನು ಸಂಭಾಳಿಸೋದೇನು ಕಷ್ಟದ ಸಂಗತಿಯೇ? ಮಾತಿನಲ್ಲಿಯೇ ಎಲ್ಲವನ್ನೂ ಕಂಟ್ರೋಲಿಗೆ ತೆಗೆದುಕೊಳ್ಳುವ ಛಾತಿ ಹೊಂದಿರುವ ಸುದೀಪ್ಗಂತೂ ಅದು ಲೀಲಾಜಾಲ ವಿಚಾರ. ಬೇರ್ಯಾವ ನಟನೇ ಆಗಿದ್ದರೂ ಬಿಗ್ ಬಾಸ್ ಶೋ ಬಗ್ಗೆ ಮೂಡಿಕೊಂಡಿರುವ ಕೆಟ್ಟ ಅಭಿಪ್ರಾಯಗಳ ಮುಂದೆ ಅದ್ಯಾವತ್ತೋ ಮಂಡಿಯೂರಿ ಬಿಡುತ್ತಿದ್ದರು. ಹುಚ್ಚರು, ಅರೆಹುಚ್ಚರು, ಬಾಯಿಕ ಬಡುಕರನ್ನೇ ಬಂಡವಾಳವಾಗಿಸಿಕೊಂಡಿರುವ ಈ ಶೋವನ್ನು ಸುದೀಪ ನಿಭಾಯಿಸುತ್ತಾ ಬಂದಿರೋದು ಮಾತಿನ ಚಾಕಚಕ್ಯತೆಯಿಂದಲೇ. ಆದರೆ, ಸುದೀಪ್ ಏನೋ ನಿರಾಯಾಸವಾಗಿ ಎದ್ದ ಪ್ರಶ್ನೆಗಳನ್ನೆಲ್ಲ ಥಂಡಾ ಹೊಡೆಸಬಹುದು. ಆದರೆ, ಅಭಿಮಾನಿಗಳ ಪಾಲಿಗೆ ತಂತಮ್ಮ ವಲಯದಿಂದ ಬರುವ ಕಟು ವಿಮರ್ಶೆಯನ್ನು ಎದುರಿಸೋದು ಖಂಡಿತವಾಗಿಯೂ ಸಲೀಸಿನ ವಿಚಾರವಲ್ಲ.
ಈ ಕಾರಣದಿಂದಲೇ ಬಿಗ್ ಬಾಸ್ ಶೋನಿಂದ ಸುದೀಪ್ ಹೊರಬಂದರಷ್ಟೇ ನೆಮ್ಮದಿ ಎಂಬಂಥಾ ಭಾವ ಅಭಿಮಾನಿ ವಲಯದಲ್ಲಿದೆ. ಆದರೆ ಅದು ಈ ಬಾರಿಯೂ ನಿರಾಸೆಯ ಮಡುವಿಗೆ ಬಿದ್ದು ಉಸಿರುಗಟ್ಟಿದ ಸ್ಥಿತಿ ತಲುಪಿದೆ. ಬಿಗ್ ಬಾಸ್ ಶೋ ಆರಂಭವಾದ ನಂತರದಲ್ಲಿ ಕಿಚ್ಚ ಸಿನಿಮಾಗಳತ್ತ ಕೊಂಚ ಸದರದ ನಡೆಯನ್ನ ಅನುಸರಿಸುತ್ತಿದ್ದಾರೆಂಬ ಆರೋಪ ಇದ್ದೇ ಇದೆ. ಅವರ ಸಿನಿಮಾ ಗ್ರಾಫ್ ಅದಕ್ಕೆ ನಿಖರ ಸಾಕ್ಷಿಯಂತಿದೆ. ೨೦೧೭ರಲ್ಲಿ ತೆರೆಗಂಡಿದ್ದ ಹೆಬ್ಬುಲಿ ಚಿತ್ರ ಒಂದು ಮಟ್ಟಿಗೆ ಯಶ ಕಂಡಿತ್ತು. ಅದಾಗಿ ಮಾರನೇ ವರ್ಷ ಪೈಲ್ವಾನ್ ಚಿತ್ರಕ್ಕೂ ಸಾಧಾರಣ ಗೆಲುವು ಲಭಿಸಿತ್ತು. ೨೦೧೯ರಲ್ಲಿ ಸಾಹೇಬರು ಪರಭಾಷಾ ಚಿತ್ರಗಳಿಗೆ ತಮ್ಮ ಸಮಯವನ್ನು ಮೀಸಲಿಟ್ಟಿದ್ದರು. ೨೦೨೧ರವರೆಗೂ ಅಭಿಮಾನಿಗಳ ಪಾಲಿಗೆ ಕವುಚಿಕೊಂಡಿದ್ದದ್ದು ಅಕ್ಷರಶಃ ಶುಷ್ಕ ವಾತಾವರಣ!
ನಂತರ ಕೋಟಿಗೊಬ್ಬ೩ ಚಿತ್ರಕ್ಕೆ ಹೇಳಿಕೊಳ್ಳುವಂಥಾ ಯಶ ಸಿಕ್ಕಿರಲಿಲ್ಲ. ಭಾರೀ ಹೈಪುಗಳೊಂದಿಗೆ ತೆರೆಗಂಡಿದ್ದ ವಿಕ್ರಾಂತ್ ರೋಣ ಚಿತ್ರವಂತೂ ಖುದ್ದು ಅಭಿಮಾನಿಗಳನ್ನೇ ತೃಪ್ತಿಪಡಿಸಲಿಲ್ಲ. ನಂತರ ಆರ್ ಚಂದ್ರು ನಿರ್ದೇಶನದ ಕಬ್ಜಾ ಅಂತೊಂದು ಪ್ಯಾನಿಂಡಿಯಾ ಭ್ರಮೆಯ ಚಿತ್ರ ಬಂದದ್ದಾಗಲಿ ಹೋದದ್ದಾಗಲಿ ಗೊತ್ತೇ ಆಗಲಿಲ್ಲ. ಕೆಜಿಎಫ್ ಮಸಿ ಮೆತ್ತಿಕೊಂಡಂತಿದ್ದ ಕಬ್ಜಾ ಬಗ್ಗೆ ಕಟು ವಿಮರ್ಶೆಗಳೇ ಕೇಳಿ ಬಂದಿದ್ದವು. ಕಳೆದ ವರ್ಷ ತೆರೆಗಂಡಿದ್ದ ಮ್ಯಾಕ್ಸ್ ಒಂದು ಹಂತಕ್ಕೆ ಗೆಲುವು ಕಂಡಿತ್ತು. ಇದೀಗ ಕಿಚ್ಚ ಬಿಲ್ಲಾ ರಂಗ ಭಾಷಾ ಹಾಗೂ ಮಾರ್ಕ್ ಎಂಬೆರಡು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೇನು ಬಿಗ್ ಬಾಸ್ ಶೋ ಆರಂಭವಾಗೋದರಿಂದ ಅವೆರಡು ಸಿನಿಮಾಗಳು ಬೇಗನೆ ಮುಗಿಯೋ ಲಕ್ಷಣಗಳಿಲ್ಲ. ಈ ಕಾರಣದಿಂದಲೇ ಬಿಗ್ ಬಾಸ್ ಸಹವಾಸ ಬಿಟ್ಟು ಸಿನಿಮಾ ಮಾಡಿಕೊಂಡಿದ್ದರೆ ಸಾಕೆಂಬ ಬಯಕೆ ಅಭಿಮಾನಿ ವರ್ಗದಲ್ಲಿದೆ. ಯಾಕೋ ಅದು ಕಿಚ್ಚನಿಗೆ ಅರ್ಥವಾದಂತಿಲ್ಲ!