ಪ್ರಕೃತಿ ಸೂತ್ರಗಳಿಗೆ ವಿರುದ್ಧವಾಗಿ ಚಲಿಸಿ ಬಚಾವಾಗುವ ಯಾವ ಶಕ್ತಿಯೂ ಕೂಡಾ ಮನುಷ್ಯಮಾತ್ರರಿಗಿಲ್ಲ. ಇದು ಗೊತ್ತಿದ್ದೂ ಕೂಡಾ ಯೌವನವನ್ನು ಕಾಪಿಟ್ಟುಕೊಳ್ಳುವ, ಸಾವನ್ನು ಮುಂದೂಡುವ ಪ್ರಯತ್ನಗಳು ಸದಾ ಚಾಲ್ತಿಯಲ್ಲಿದ್ದಾವೆ. ಇಲ್ಲಿ ಎಲ್ಲವೂ ಗೌಣ, ಈವತ್ತು ಫಳ ಫಳ ಹೊಳೆಯುವ ಚರ್ಮ ಮುಂದೊಂದು ದಿನ ಕಳಾಹೀನವಾಗಿ ಸುಕ್ಕುಗಟ್ಟುತ್ತೆ. ನಿಗಿನಿಗಿ ಯೌವನದ ಹುಮ್ಮಸ್ಸನ್ನು ಕಳಾಹೀನ ಘಟ್ಟವೊಂದು ಆವರಿಸಿಕೊಂಡೇ ತೀರುತ್ತೆ. ಈ ವಾಸ್ತವವನ್ನು ಸೆಲೆಬ್ರಿಟಿ ಅನ್ನಿಸಿಕೊಂಡ ಮಂದಿ ಅರಗಿಸಿಕೊಳ್ಳಲು ತಯಾರಿಲ್ಲ. ಅಂಥಾ ಮನಃಸ್ಥಿತಿಯಿಂದಲೇ ಅನೇಕ ನಟ ನಟಿಯರು ಸರ್ಜರಿ, ಚಿಕಿತ್ಸೆಗಳ ಮೊರೆ ಹೋಗುತ್ತಾರೆ. ಅದರ ಫಲವಾಗಿ ಅರ್ಧ ದಾರಿಯಿಂದಲೇ ವಎದ್ದು ನಡೆಯುವಂಥಾ ಸ್ಥಿತಿಕ ಎದುರಾಗುತ್ತೆ. ಇಂಥಾದ್ದಕ್ಕೆ ತಾಜಾ ಉದಾಹರಣೆಯಂತಿರೋದು ನಟಿ ಶೆಫಾಲಿ ಜರೀವಾಲಾಳ ದುರಂತಗಾಥೆ!
ಕನ್ನಡವೂ ಸೇರಿದಂತೆ ನಾನಾ ಭಾಷೆಗಳ ಸಿನಿಮಾ ರಂಗದಲ್ಲಿ ಪ್ರಸಿದ್ಧಿ ಪಡೆದಿದ್ದಾಕೆ ಶೆಪಾಲಿ. ಹಾಡೊಂದರ ಮೂಲಕ ಕರುನಾಡ ಸಿನಿಮಾ ಪ್ರೇಮಿಗಳಿಗೂ ಹಿಡಿಸಿದ್ದ ನಟಿಯೀಕೆ. ಶೆಫಾಲಿಗೆ ಸಹಜವಾಗಿಯೇ ಭಾರತೀಯ ಚಿತ್ರರಂಗದಲ್ಲಿ ತಾರೆಯಾಗಿ ಮೆರೆಯಬೇಕೆಂಬ ಆಸೆಯಿತ್ತು. ಅದಕ್ಕಾಗಿ ಪ್ರಯತ್ನಿಸಿದ್ದ ಆಕೆಗೆ ಹೇಳಿಕೊಳ್ಳುವಂಥಾ ಗೆಲುವು ದಕ್ಕಿರಲಿಲ್ಲ. ಅನಿವಾರ್ಯವಾಗಿ ಮದುವೆಯ ಬಂಧನಕ್ಕೀಡಾಗಿದ್ದ ಶೆಫಾಲಿಗೆ ವಯಸ್ಸಾಗುತ್ತಲೇ ಮುಪ್ಪಡರಿ, ತನ್ನ ಯೌವನ ಹಾಳಾಗುವ ಅಗೋಚರ ಭಯವೊಂದು ಕಾಡಲಾರಂಭಿಸಿತ್ತೇನೋ… ತೀರಾ ಸೌಂದರ್ಯ ಪ್ರಜ್ಞೆ ಹೊಂದಿದ್ದ ಶೆಫಾಲಿ ಯೌವನ ನಿಗಿನಿಸುವಂತೆ ಮಾಡಲು ಮೊರೆ ಹೋದದ್ದು ಆಚಿಟಿ ಏಜಿಂಗ್ ಡ್ರಗ್ಸ್ ಗೆ.
ಇಂಜೆಕ್ಷನ್ ಮೂಲಕ ದೇಹಕ್ಕೆ ಔಷಧೀಯ ಅಂಶಗಳನ್ನು ಈ ಮೂಲಕ ಸೇರಿಸಲಾಗುತ್ತದೆ. ಅದರ ಚಿಕಿತ್ಸಾ ವಿಧಾನಗಳಲ್ಲಿ ಆಗಾಗ ಡ್ರಿಪ್ಸ್ ತೆಗೆದುಕೊಳ್ಳೋದೂ ಸೇರಿಕೊಂಡಿರುತ್ತೆ. ಶೆಫಾಲಿ ಕೂಡಾ ನಿರಂತರವಾಗಿ ಆ ಚಿಕಿತ್ಸೆಗೆ ತನ್ನನ್ನು ತಾನು ಒಡ್ಡಿಕೊಂಡಿದ್ದಳು. ಇಂಜಕ್ಷನ್ನು, ಡಯಟ್ಟು ಅಂತೆಲ್ಲ ಮಾಡುತ್ತಾ ಚರ್ಮದ ಕಾಂತಿ ಹೆಚ್ಚಿಸಿಕೊಂಡು ಖುಷಿಗೊಂಡಿದ್ದಳು. ತೀರಾ ಸಾಯೋ ದಿನ ಕೂಡಾ ಆಕೆ ಡ್ರಿಪ್ ತೆಗೆದುಕೊಂಡಿದ್ದಳೆಂದು ಆತ್ಮೀಯ ಗೆಳತಿಯೇ ಹೇಳಿಕೊಂಡಿದ್ದಾಳೆ. ಇಂಥಾ ಆಂಟಿ ಏಜಿಂಗ್ ಡ್ರಗ್ಸ್ ಸೇವನೆಯಿಂದಾಗಬಹುದಾದ ಅನಾಹುತಗಳ ಬಗ್ಗೆ ತಜ್ಞರು ಎಚ್ಚರಿಕೆ ರವಾನಿಸುತ್ತಿದ್ದಾರೆ. ಆದರೆ, ಕೆಲ ನಟಿಯರು ಮಾತ್ರ ಭಂಡ ಧೈರ್ಯದಿಂದ ಅಂಥಾ ಚಿಕಿತ್ಸೆಗೆ ಪಕ್ಕಾಗುತ್ತಿದ್ದಾರೆ. ಕೆಲವರು ಒಂದಷ್ಟು ಅಡ್ಡ ಪರಿಣಾಮಗಳಿಂದ ಕಂಗಾಲಾದರೆ, ಶೆಫಾಲಿಯಂಥಾ ನತದೃಷ್ಟರ ಜೀವವೇ ಹೋಗಿ ಬಿಡುತ್ತೆ.
ಸೌಂದರ್ಯವನ್ನುಜ ಮಾತ್ರವೇ ನೆಚ್ಚಿಕೊಂಡ ನಟೀಮಣಿಯರ ಪಾಲಿಗೆ ತಾವೆಷ್ಟೇ ಚೆಂದ ಕಾಣಿಸಿದರೂ ತೃಪ್ತಿ ಇರೋದಿಲ್ಲ. ಈ ಕಾರಣದಿಂದಲೇ ಮೂಗು ಸರಿ ಪಡಿಸಿಕೊಳ್ಳುವವರು, ಸ್ತನವೂ ಸೇರಿದಂತೆ ನಾನಾ ಭಾಗವನ್ನು ಹಿರಿ ಕಿರಿದಾಗಿಸಿಕೊಳ್ಳುವವರು, ತುಟಿಯ ಸೌಂದರ್ಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ವಿಚಾರಗೊಂಡವರ ಕಥೆಗಳೆಲ್ಲ ದಂಡಿಯಾಗಿವೆ. ವಾಸ್ತವವೆಂದರೆ, ದೇಹವನ್ನು ಅದರ ಪಾಡಿಗೆ ಬಿಟ್ಟರೆ ಮುಪ್ಪಿನ ಕಾಲದಲ್ಲಿ ವಿಕಾರಗೊಳ್ಳದಂತೆ ಅದೇ ನೋಡಿಕೊಳ್ಳುತ್ತೆ. ಮುಪ್ಪು ಮುಂದೂಡುವಂಥಾ ಸಾಹಸಗಳಿಗೆ ಕೈ ಹಾಕಿದರೆ ಇರುವ ಸೌಂದರ್ಯ ಕೂಡಾ ಬಹು ಬೇಗನೆ ಮಾಸಲಾಗುತ್ತೆ. ಇಂಥಾದ್ದೊಂದು ವಾಸ್ತವಕ್ಕೆ ತೆರೆದುಕೊಂಡಿದ್ದರೆ ಶೆಫಾಲಿ ನಲವತ್ತೆರಡು ವರ್ಷಕ್ಕೆ ಉಸಿರು ನಿಲ್ಲಿಸೋದನ್ನು ಕೊಂಚ ಮುಂದೂಡಿಕೊಳ್ಳಬಹುದಿತ್ತೇನೋ…