ಸಿನಿಮಾ ಎಂಬುದೀಗ ಕಲೆಯ ಪರಿಧಿಯಾಚೆಗೆ ಬೃಹತ್ ಉದ್ಯಮವಾಗಿ ಹಬ್ಬಿಕೊಂಡಿದೆ. ಅದೀಗ ಬಹುಕೋಟಿ ವ್ಯವಹಾರ. ಇಂಥಾ ವಲಯಕ್ಕೆ ಪಾದಾರ್ಪಣೆ ಮಾಡೋ ನಿರ್ಮಾಪಕರುಗಳಿಗೆ ಸಹಜವಾಗಿಯೇ ಹಣ ಹೂಡಿಕೆ ಮಾಡಿ, ಅದನ್ನು ದುಪ್ಪಟ್ಟಾಗಿ ಹಿಂಪಡೆಯುವ ಆಸೆಯಿರುತ್ತದೆ. ಆದರೆ, ನಿರ್ಮಾಣ ರಂಗಕ್ಕಿಳಿದು ಅದನ್ನೂ ಕೂಡಾ ಒಂದಷ್ಟು ಮಂದಿಗೆ ಅನ್ನದ ಮೂಲವಾಗುತ್ತದೆಂಬ ಆತ್ಮತೃಪ್ತಿಯಲ್ಲಿ ಖುಷಿ ಕಾಣುವ, ಒಂದು ಚೌಕಟ್ಟಿನಲ್ಲಿ ಚೆಂದದ ಸಿನಿಮಾ ರೂಪಿಸಿ, ಹೊಸಬರಿಗೆ ಅವಕಾಶ ಕೊಟ್ಟು ಸಂಭ್ರಮಿಸುವವರು ವಿರಳ. ಅಂಥಾ ಅಪರೂಪದ ಮನಃಸ್ಥಿತಿ ಹೊಂದಿರುವವರ ಸಾಲಿಗೆ (guns and roses movie) ಗನ್ಸ್ ಅಂಡ್ ರೋಸಸ್ ಚಿತ್ರದ ನಿರ್ಮಾಪಕ (producer h.r nataraj) ಹೆಚ್.ಆರ್ ನಟರಾಜ್ ನಿಸ್ಸಂದೇಹವಾಗಿಯೂ ಸೇರಿಕೊಳ್ಳುತ್ತಾರೆ.
ಜನವರಿ 3ರಂದು ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ (guns and roses movie) ಗನ್ಸ್ ಅಂಡ್ ರೋಸಸ್ ಬಿಡುಗಡೆಗೊಳ್ಳಲಿದೆ. ಇದನ್ನು ದ್ರೋಣ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವವರು (h.r nataraj) ಹೆಚ್.ಆರ್ ನಟರಾಜ್. ಮೂಲತಃ ಲ್ಯಾಂಡ್ ಡೆವಲಪರ್ ಆಗಿರುವ ನಟರಾಜ್, ರಾಜಕಾರಣದಲ್ಲಿಯೂ ಸಕ್ರಿಯರಾಗಿದ್ದವರು. ಇಪ್ಪತ್ತೆರಡು ವರ್ಷಗಳಿಂದ ಲ್ಯಾಂಡ್ ಡೆವಲಪರ್ ಆಗಿ ವ್ಯವಹಾರ ನಡೆಸಿದ್ದ ಅವರು 2015ರಲ್ಲಿ ವಿಧಾನ ಪರಿಷತ್ ಚುನಾವಣೆಗೆ ತುಮಕೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಹೀಗೆ ವ್ಯವಹಾರ ಮತ್ತು ರಾಜಕಾರಣದ ನಡುವಲ್ಲಿಯೇ ಸಿನಿಮಾ ಸಾಹಚರ್ಯ ಹೊಂದಿದ್ದ ನಟರಾಜ್ ಅವರ ಪಾಲಿಗೆ ಬಣ್ಣದ ಜಗತ್ತಿನ ಬಗ್ಗೆ ಆರಂಭ ಕಾಲದಿಂದಲೂ ಬೆರಗಿತ್ತು. ಈ ಕಾರಣದಿಂದಲೇ ಸಿನಿಮಾ ಜಗತ್ತಿನ ಅನೇಕರೊಂದಿಗೆ ನಿಕಟ ನಂಟು ಹೊಂದಿದ್ದರು. ಕಡೆಗೂ ಅವರೀಗ ಗನ್ಸ್ ಅಂಡ ರೋಸಸ್ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ.
ಕನಕಪುರ ಮೂಲದ ಹೆಚ್.ಆರ್ ನಟರಾಜ್ ಮತ್ತು ಈ ಚಿತ್ರದ ನಿರ್ದೇಶಕ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಇಪ್ಪತೈದು ವರ್ಷಗಳಿಂದಲೂ ಪರಿಚಿತರು. ಈಗ್ಗೆ ವರ್ಷಗಳ ಹಿಂದೆ ಸಿನಿಮಾ ಕಥೆಗಾರ ಅಜಯ್ ಕುಮಾರ್ ಪುತ್ರ ಅರ್ಜುನ್ ನಾಯಕನಾಗಿ ಎಂಟ್ರಿ ಕೊಡಲಿರುವ ಚಿತ್ರದ ತಯಾರಿ ನಡೆದಿತ್ತು. ಅದರ ಸಾರಥ್ಯವನ್ನು ಹೆಚ್.ಎಸ್ ಶ್ರೀನಿವಾಸ್ ಕುಮಾರ್ ವಹಿಸಿಕೊಂಡರೆ, ನಿರ್ಮಾಪಕರಾಗಲು ನಟರಾಜ್ ತಯಾರಾಗಿದ್ದರು. ಅಜಯ್ ಕುಮಾರ್ ಬಳಿ ಕಾರ್ಯನಿರ್ವಹಿಸುತ್ತಿದ್ದ ಶರತ್ ಬರೆದ ಕಥೆ ಎಲ್ಲರಿಗೂ ಹಿಡಿಸಿದ್ದೇ ಗನ್ಸ್ ಅಂಡ್ ರೋಸಸ್ ಚಿತ್ರಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಂತಾಗಿತ್ತು. ನಟರಾಜ್ ರ ಪಾಲಿಗೆ ಸದರಿ ಕಥೆ ಹಿಡಿಸಲು ಕಾರಣವಾಗಿದ್ದದ್ದು ಅದರಲ್ಲಿನ ಸಾಮಾಜಿಕ ಕಳಕಳಿ ಮತ್ತು ನಿರ್ದೇಶಕರು ಅದನ್ನು ಸಮರ್ಥವಾಗಿ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಕಟ್ಟಿ ಕೊಡುತ್ತಾರೆಂಬ ಗಾಢ ನಂಬಿಕೆ.
ಹೀಗೊಂದು ಹೆಜ್ಜೆಯಿಡುವ ಮುನ್ನ ಹೆಚ್.ಆರ್ ನಟರಾಜ್ ಅವರು ಗುರು ಸಾನಿಧ್ಯಕ್ಕೆ ತೆರಳಿ ಅರಿಕೆ ಮಾಡಿಕೊಂಡಾಗ, ಅತ್ತಲಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿತ್ತಂತೆ. ಸಿನಿಮಾ ಅಂದರೆ ಹೊರಜಗತ್ತಿನ ಕಲ್ಪನೆ ಸಾವಿರವಿದ್ದೀತು. ಆದರೆ, ಒಂದು ಸಿನಿಮಾ ಶುರುವಾದರೆ ಅದು ನೂರಾರು ಮಂದಿಯ ಅನ್ನದ ಮೂಲವಾಗುತ್ತದೆ. ಆ ದಿಕ್ಕಿನಲ್ಲಿ ಆಲೋಚಿಸಿದರೆ ನಿರ್ಮಾಪಕನ ಪಾಲಿಗೆ ಅದೊಂದು ಭಾಗ್ಯವೇ. ಅಂಥಾ ಅಧ್ಯಾತ್ಮಿಕ ಅನುಭೂತಿಯೊಂದಿಗೇ ಈ ಸಿನಿಮಾವನ್ನು ನಟರಾಜ್ ಅವರು ನಿರ್ಮಾಣ ಮಾಡಿದ್ದಾರೆ. ಇದನ್ನೂ ಕೂಡಾ ಕಲಾ ಸೇವೆಯೆಂದೇ ಪರಿಭಾವಿಸಿದ್ದಾರೆ. ಸಿನಿಮಾವನ್ನು ವ್ಯವಹಾರದಾಚೆಗೂ ಮೋಹಿಸುವ ಗುಣ ಹೊಂದಿರೋ ನಟರಾಜ್ ಪಾಲಿಗೆ ಗನ್ಸ್ ಅಂಡ್ ರೋಸಸ್ ಚಿತ್ರ ಮೂಡಿ ಬಂದಿರುವ ರೀತಿಯ ಬಗ್ಗೆ ತೃಪ್ತಿಯಿದೆ. ಒಂದಷ್ಟು ಹೊಸಾ ಪ್ರತಿಭೆಗಳು ಈ ಮೂಲಕವೇ ಬೆಳಕು ಕಾಣುತ್ತಿರೋದರ ಬಗ್ಗೆ ಖುಷಿಯಿದೆ. ಗನ್ಸ್ ಅಂಡ್ ರೋಸಸ್ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತದೆಂಬ ನಂಬಿಕೆಯೂ ಗಟ್ಟಿಯಾಗಿದೆ.
ಇಂಥಾ ಅಪ್ಪಟ ಸಿನಿಮಾ ವ್ಯಾಮೋಹದ ನಿರ್ಮಾಪಕರ ನೆರಳಿನಲ್ಲಿ ಮಹತ್ವದ ಸಿನಿಮಾಗಳು ಸೃಷಿಯಾಗೋ ಸಾಧ್ಯತೆಗಳಿವೆ. ಒಂದು ಪ್ರತಿಭಾನ್ವಿತರ ತಂಡ ಸೇರಿಕೊಂಡು ಗನ್ಸ್ ಅಂಡ್ ರೋಸಸ್ ಚಿತ್ರವನ್ನು ಅನ್ನದಾತ ಸಂತೃಪ್ತಗೊಳಿಸುವಂತೆ ರೂಪಿಸಿದ್ದಾರೆ. ಅಂಥಾದ್ದೊಂದು ಛಾಯೆ ನೋಡುಗರಿಗೂ ದಾಟಿಕೊಂಡರೆ, ವರ್ಷಾರಂಭದಲ್ಲಿಯೇ ಕನ್ನಡ ಚಿತ್ರರಂಗ ಮತ್ತೊಂದು ಗೆಲುವಿನ ಹುರುಪು ತುಂಬಿಕೊಂಡಂತಾಗುತ್ತದೆ. ಸಿನಿಮಾ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಈ ಮೂಲಕ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ ಅರ್ಜುನ್ ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಥ್ರ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ಗನ್ಸ್ ಅಂಡ್ ರೋಸಸ್ ಜನವರಿ 3ರಂದು ಬಿಡುಗಡೆಗೊಳ್ಳಲಿದೆ.